ADVERTISEMENT

ತರಕಾರಿಗೆ ಸಂದಿಗೊಂದಿ ತಡಕಾಡಿದ ಜನ!

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 10:36 IST
Last Updated 17 ಡಿಸೆಂಬರ್ 2012, 10:36 IST

ರಾಯಚೂರು: ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಮಳಿಗೆಗಳನ್ನುತೆರವುಗೊಳಿಸಲು ನೀಡಿದ ನೋಟಿಸ್ ವಾಪಸ್ ಪಡೆಯಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತರಕಾರಿ ವ್ಯಾಪಾರಸ್ಥರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಬಂದ್ ಮುಷ್ಕರ ಮೂರನೇ ದಿನವಾದ ಭಾನುವಾರವಊ ಮುಂದುವರಿಯಿತು.

ಈವರೆಗೆ ನಗರಸಭೆ, ಜಿಲ್ಲಾಡಳಿತ ತಮ್ಮ ಬೇಡಿಕೆಗೆ ಸ್ಪಂದಿಸಿಲ್ಲ. ಮಾತುಕತೆಗೂ ಮುಂದಾಗಿಲ್ಲರಿದುವುದು ಖಂಡನೀಯ. ಈ ಧೋರಣೆ ಖಂಡಿಸಿ  ಹೋರಾಟ ಮುಂದುವರಿಸಲಾಗುವುದು ಎಂದು ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘ ಮತ್ತು ರಾಯಚೂರು ಸ್ವಚ್ಛಗೊಳಿಸಿ ಹೋರಾಟ ಸಮಿತಿ ಮುಖಂಡರಾದ ಎನ್ ಮಹಾವೀರ, ಮಹಮ್ಮದ್ ಇಕ್ಬಾಲ್, ಡಾ. ಚಂದ್ರಗಿರೀಶ್ ತಿಳಿಸಿದ್ದಾರೆ.

ತಮ್ಮ ಹೋರಾಟಕ್ಕೆ ಜೈ ಕರವೇಯ ಬಿ ಗಂಗಧರಸ್ವಾಮಿ, ವಾಣಿಜ್ಯೋದ್ಯಮ ಸಂಘ, ಡೆಮಾಕ್ರೆಟಿಕ್ ಟೀಚರ್ಸ್‌ ಸಂಘಟನೆ ಬೆಂಬಲಿಸಿವೆ ಎಂದು ಹೇಳಿದ್ದಾರೆ.ಶಾಸಕ ಸಯ್ಯದ್ ಯಾಸಿನ್ ಅವರು ನಮ್ಮ ಹೋರಾಟಕ್ಕೆ ಬೆಂಬಲಿಸಿರುವುದು ಸ್ವಾಗತಾರ್ಹ. ಅದೇ ರೀತಿ ಬೇಡಿಕೆಗೆ ಆಡಳಿತ ಯಂತ್ರ ಸ್ಪಂದಿಸುವಲ್ಲಿ ಪ್ರಯತ್ನಿಸಬೇಕು ಎಂದು ಮನವಿ ಮಾಡಿದ್ದಾರೆ.

ತರಕಾರಿಗಾಗಿ ಜನರ ಪರದಾಟ: ಎರಡು ದಿನದಿಂದ ತರಕಾರಿಗಾಗಿ ಪರದಾಡುತ್ತಿರುವ ಜನತೆ ರಜೆ ದಿನವಾದ ಭಾನುವಾರ ಇನ್ನೂ ತೊಂದರೆ ಪಟ್ಟರು. ತರಕಾರಿ ಮಾರುಕಟ್ಟೆ ಸುತ್ತ ಗಿರಕಿ ಹೊಡೆದರೂ ತರಕಾರಿ ಕಾಣಿಸಲಿಲ್ಲ. ಕೈ ಚೀಲ ಹಿಡಿದು ಬಂದವರು ಕೆಲವರು ಹಾಗೆಯೇ ಮನೆಗೆ ವಾಪಸ್ ಆದರು. ಮತ್ತೊಂದಿಷ್ಟು ಜನ ಮಾರುಕಟ್ಟೆ ಪ್ರದೇಶದ ಸಂದಿ ಗೊಂದಿಗಳಲ್ಲಿ ತಡಕಾಡಿದರು.

ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಆಗುತ್ತಿದೆ ಎಂಬ ಮಾಹಿತಿ ಕೇಳಿ ಅಲ್ಲಿಗೂ ತೆರಳಿ ವಾಪಸ್ ಆದರು. ನಗರದ ಸುತ್ತಮುತ್ತಲು ಇರುವ ಹಾಗೂ ತರಕಾರಿಗಳನ್ನೇ ಬೆಳೆಯುವ ತರಕಾರಿ ಬೆಳೆಗಾರರು, ಹಳ್ಳಿಯ ತರಕಾರಿ ವ್ಯಾಪಾರಿಗಳು, ಹೊತ್ತು ಮಾರುವವರು ಮಾರುಕಟ್ಟೆಗೆ ತರಕಾರಿ ಬುಟ್ಟಿ ಹೊತ್ತು ಬಂದಿದ್ದು ಅನಿರ್ದಿಷ್ಟ ಬಂದ್ ಪ್ರತಿಭಟನೆ ನಡೆಸುತ್ತಿದ್ದ ತರಕಾರಿ ವ್ಯಾಪಾರಸ್ಥರನ್ನು ಸಿಟ್ಟಿಗೆಬ್ಬಿಸಿತು.

ತರಕಾರಿ ಮಾರಾಟ ಮಾಡಬಾರದು. ಜಾಗ ಖಾಲಿ ಮಾಡಬೇಕು ಎಂದು ಒತ್ತಾಯದಿಂದ ಅವರೂ ಅಲ್ಲಿಂದ ತೆರಳಿದ್ದು ಕಂಡು ಬಂದಿತು.ಸದ್ಯ ಮೂರು ದಿನದ ಮಟ್ಟಿಗೆ ಎಪಿಎಂಸಿ ತರಕಾರಿ ಮಾರುಕಟ್ಟೆ ಪ್ರದೇಶದಲ್ಲಿ ತರಕಾರಿ ಮಾರುಕಟ್ಟೆಗೆ ವ್ಯವಸ್ಥೆ ಮಾಡಲಾಗಿದೆ. ಮೂರು ದಿನದ ಬಳಿಕ ಮಹಿಳಾ ಸಮಾಜ ಆವರಣದಲ್ಲಿ ತರಕಾರಿ ಮಾರಾಟಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತದೆ ಎಂದು ನಗರಸಭೆ ಪ್ರಭಾರಿ ಆಯುಕ್ತರು ಹಾಗೂ ಸಹಾಯಕ ಆಯುಕ್ತರಾದ ಮಂಜುಶ್ರೀ ಶನಿವಾರ ಪ್ರಕಟಣೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.