ADVERTISEMENT

ತಾಲ್ಲೂಕು ಕೇಂದ್ರಕ್ಕೆ ಒತ್ತಾಯಿಸಿ ನಾಳೆ ಸಿರವಾರ ಬಂದ್

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2012, 9:00 IST
Last Updated 8 ನವೆಂಬರ್ 2012, 9:00 IST

ರಾಯಚೂರು: ಸಿರವಾರ ಹೋಬಳಿ ಕೇಂದ್ರವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಇದೇ 9ರಂದು ಸಿರವಾರ ಬಂದ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಾಲ್ಲೂಕು ಹೋರಾಟ ಸಮಿತಿ ಗೌರವಾಧ್ಯಕ್ಷ ಚುಕ್ಕಿ ಸೂಗಪ್ಪ ಸಾಹುಕಾರ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನ್ವಿ ತಾಲ್ಲೂಕಿನ ಸಿರವಾರ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿಸಬೇಕು ಎಂದು ಅನೇಕ ದಶಕಗಳಿಂದಲೂ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ  ಹುಂಡೇಕಾರ ವಾಸುದೇವರಾವ್ ಸಮಿತಿ ಹಾಗೂ ಎಂ.ಪಿ ಪ್ರಕಾಶ ಹಾಗೂ ಪಿ.ಸಿ ಗದ್ದಿಗೌಡರ ವರದಿಯನ್ವಯ ಸಿರವಾರ ಪಟ್ಟಣವನ್ನು ನೂತನ ತಾಲ್ಲೂಕು ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ವಿವರಿಸಿದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮಪಂಚಾಯಿತಿಯ ಜನಪ್ರತಿನಿಧಿಗಳು ಹಾಗೂ ಸುತ್ತಮುತ್ತಲಿನ ಜನತೆ ಪಕ್ಷಾತೀತವಾಗಿ ಸಿರವಾರ ತಾಲ್ಲೂಕು ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿದ್ದಾರೆ ಎಂದು ಹೇಳಿದರು.

ಸಿರವಾರ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿಸುವ ಹೋರಾಟದ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲ ಜನಪ್ರತಿನಿಧಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲಾಗಿದೆ. ಪಟ್ಟಣದಿಂದ ಮುಖ್ಯ ರಸ್ತೆಯ ಮೂಲಕ ಹೊರ ರಾಜ್ಯಗಳಿಗೆ ಸಂಪರ್ಕ ಇದೆ ಎಂದು ತಿಳಿಸಿದರು.

ಈ ಪಟ್ಟಣ ಸುಮಾರ 40 ಸಾವಿರ ಜನಸಂಖ್ಯೆ ಹೊಂದಿದೆ.  ಸಿರವಾರ ಪಟ್ಟಣ ವ್ಯಾಪ್ತಿಯನ್ನು 50ಕ್ಕೂ ಹೆಚ್ಚು ಗ್ರಾಮಗಳಿವೆ. 40ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಒಬ್ಬರು ಜಿಲ್ಲಾ ಪಂಚಾಯಿತಿ ಸದಸ್ಯರಿದ್ದಾರೆ. ವಿವಿಧ ಇಲಾಖೆಯ ಕಚೇರಿಗಳು, ಸರ್ಕಾರಿ ಕಾಲೇಜು, ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳಿವೆ.  ಸಿರವಾರ ಪಟ್ಟಣವು ಸಂಪೂರ್ಣವಾಗಿ ನೀರಾವರಿ ಪ್ರದೇಶವಾಗಿದೆ. ಅತೀ ಹೆಚ್ಚು ಕಂದಾಯ ಪಾವತಿಸುವಂಥ ಗ್ರಾಮವಾಗಿದೆ ಎಂದು ವಿವರಿಸಿದರು.

ಸಿರವಾರ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿಸುವುದರಿಂದ ಮತ್ತು ಇಲಾಖೆಗಳು ಸ್ಥಾಪನೆಗೊಳ್ಳುವುದರಿಂದ ಪಟ್ಟಣವು ವಾಣಿಜ್ಯ ಕೇಂದ್ರವಾಗಿ ಪರಿವರ್ತನೆಗೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.