ADVERTISEMENT

ರೈತರು ಖರೀದಿಸುವ ವಸ್ತುಗಳಿಗೆ ರಸೀದಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 7:00 IST
Last Updated 2 ಜೂನ್ 2011, 7:00 IST

ಲಿಂಗಸುಗೂರ: ಮುಂಗಾರು ಮಳೆ ಆರಂಭಗೊಂಡಿದೆ. ಈ ಸಂದರ್ಭದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಹಾಗೂ ಕ್ರಿಮಿನಾಶಕ ಔಷಧಿ ಮಾರಾಟಗಾರರು ರೈತರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ರೈತರು ಖರೀದಿಸುವ ಪ್ರತಿಯೊಂದು ವಸ್ತುವಿಗೂ ವ್ಯಾಪಾರಸ್ಥರು ರಸೀದಿ ನೀಡುವುದು ಕಡ್ಡಾಯ ಎಂದು ಸಹಾಯಕ ಆಯುಕ್ತ ಉಜ್ವಲ್‌ಕುಮಾರ ಘೋಷ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಒಮ್ಮತದ ನಿರ್ಣಯಕ್ಕೆ ಬರಲಾಯಿತು.

ಮಂಗಳವಾರ ರೈತ ಮುಖಂಡರು ಮತ್ತು ವ್ಯಾಪಾರಸ್ಥರ ಸಭೆ ಕರೆಯಲಾಗಿತ್ತು. ವ್ಯಾಪಾರಸ್ಥರು ಎಂಆರ್‌ಪಿ ದರದಲ್ಲಿಯೆ ರೈತರಿಗೆ ಅಗತ್ಯ ವಸ್ತುಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರ ಪಡೆಯುವುದು ಅನಿವಾರ್ಯ. ಅಲ್ಲದೆ, ರೈತರು ಕೇಳುವ ಹಾಗೆ ರಸೀದಿ ನೀಡಲು ಸಾಧ್ಯವಾಗುವುದಿಲ್ಲ. ಈ ನಿಯಮಗಳನ್ನೆ ಹಾಕುವುದಾದರೆ ಗೊಬ್ಬರ ಬೀಜ ಮಾರಾಟ ಮಾಡುವುದಿಲ್ಲ ಎಂದು ಸಭೆಯಲ್ಲಿ ಸ್ಪಷ್ಟ ಅಭಿಪ್ರಾಯ ತಳೆದರು.

ರೈತ ಮುಖಂಡ ಅಮರಣ್ಣ ಗುಡಿಹಾಳ , ವ್ಯಾಪಾರಸ್ಥರು ಸರ್ಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿ ವ್ಯಾಪಾರ ನಡೆಸುವುದಾದರೆ ಸರ್ಕಾರ ಏಕೆ ಬೇಕು. ಕಂಪೆನಿಗಳು ಲಾಭ ನೀಡಿಯೆ  ಅವರಿಗೆ ಗೊಬ್ಬರ, ಬೀಜ, ಕ್ರಿಮಿನಾಶಕ ನೀಡುತ್ತಿವೆ. ಆದಾಗ್ಯೂ ಕೂಡ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಮುಗ್ಧ ರೈತರು ವಂಚನೆಗೊಳಗಾಗುತ್ತಿದ್ದಾರೆ. ರಸೀದಿ ಕೊಡಲೆಬೇಕು ಎಂದು ಪಟ್ಟು ಹಿಡಿದರು.

ರೈತರು ಮತ್ತು ವ್ಯಾಪಾರಸ್ಥರ ಪಟ್ಟುಗಳಿಂದ ಕೆಲ ಸಮಯ ಗಲಿಬಿಲಿಗೊಂಡಿದ್ದ ಅಧಿಕಾರಿಗಳು ಅಂತಿಮವಾಗಿ ಕಳೆದ ವರ್ಷದಂತೆ ಈ ವರ್ಷವೂ ಎಂಆರ್‌ಪಿ ದರಕ್ಕೆ ಸಾಗಾಣಿಕೆ ವೆಚ್ಚ ಎಂದು ರೂ. 20 ಹೆಚ್ಚುವರಿ ನೀಡಲು ಸಭೆ ನಿರ್ಧರಿಸಿತು. ಜೊತೆಗೆ ಈ ರೀತಿ ಹೆಚ್ಚುವರಿ ಪಡೆಯುವ ಹಣಕ್ಕೂ ರಸೀದಿ ನೀಡುವುದು ಕಡ್ಡಾಯ ಎಂಬ ಗೊತ್ತುವಳಿಗೆ ಸರ್ವರು ಸಹಮತ ವ್ಯಕ್ತಪಡಿಸಿದರು. ರೈತರಿಂದ ಪಡೆದ ಹಣಕ್ಕೆ ರಸೀದಿ ನೀಡದವರ ವಿರುದ್ಧ ಕಠಿಣ ಕ್ರಮ ಅನಿವಾರ್ಯ ಎಂದು ಸಹಾಯಕ ಆಯುಕ್ತ ಉಜ್ವಲ್‌ಕುಮಾರ ಘೋಷ್ ಎಚ್ಚರಿಕೆ ನೀಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ನಾಗರಾಜು, ಸಹಕಾರಿ ಇಲಾಖೆ ಅಭಿವೃದ್ಧಿ ಅಧಿಕಾರಿ ಜಲೀಲಅಹ್ಮದ. ರೈತ ಮುಖಂಡರಾದ ಅಮರಣ್ಣ ಗುಡಿಹಾಳ, ರಮೇಶ ಜೋಷಿ, ಎಚ್.ಬಿ. ಮುರಾರಿ, ಹನುಮಪ್ಪ ಯಡಹಳ್ಳಿ, ಅಮರೇಶ ಹೂಗಾರ, ಸಂಗಣ್ಣ ಮುದಗಲ್ಲ, ಬಾಬುಸಾಬ, ಶರಣಗೌಡ, ಕುಪ್ಪಣ್ಣ, ಬಸಣ್ಣ ಹಾಗೂ ಮಸ್ಕಿ, ಮುದಗಲ್ಲ, ಲಿಂಗಸುಗೂರ ಪಟ್ಟಣಗಳ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.