ರಾಯಚೂರು: ಉಪನ್ಯಾಸಕರನ್ನು ನೇಮಕ ಮಾಡಬೇಕು, ಮೂಲ ಸೌಕರ್ಯ ಕಲ್ಪಿಸಬೇಕು, ತಮ್ಮ ಬೇಡಿಕೆಗಳ ಈವರೆಗೂ ಸರಿಯಾದ ರೀತಿ ಸ್ಪಂದಿಸದೇ ಇರುವ ಪ್ರಾಚಾರ್ಯರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಗುರುವಾರ ತರಗತಿಯಿಂದ ಹೊರಗುಳಿದು ಪ್ರತಿಭಟನೆ ನಡೆಸಿದ ಇಲ್ಲಿನ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶುಕ್ರವಾರವೂ ತಮ್ಮ ಪ್ರತಿಭಟನೆ ಮುಂದುವರಿಸಿದರು.
ಶುಕ್ರವಾರವೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾಲೇಜಿನ ಹಳೆಯ ಕಟ್ಟಡದ ಆವರಣದಲ್ಲಿ ಪ್ರತಿಭಟನೆ ಮುಂದುವರಿಸಿದರು. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಸ್ಥಳಕ್ಕೆ ಆಗಮಿಸಿ ತಮ್ಮ ಬೇಡಿಕೆ ಈಡೇರಿಕೆ ಬಗ್ಗೆ ಭರವಸೆ ಕೊಡುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದರು. ಗುರುವಾರವೂ ವಿದ್ಯಾರ್ಥಿಗಳು ಈ ಬೇಡಿಕೆಯನ್ನು ಮುಂದಿಟ್ಟಿದ್ದರು.
ಕಾಲೇಜಿಗೆ ಜಂಟಿ ನಿರ್ದೇಶಕರ ಭೇಟಿ: ಗುಲ್ಬರ್ಗದಲ್ಲಿನ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ರವಿಶಂಕರ್ ಅವರು ಮಧ್ಯಾಹ್ನ ಸರ್ಕಾರಿ ಪದವಿ ಕಾಲೇಜಿಗೆ ಭೇಟಿ ನೀಡಿ ಪ್ರತಿಭಟನಾ ನಿರತ ವಿದ್ಯಾರ್ಥಿ-ವಿದ್ಯಾರ್ಥಿನಿಯರೊಂದಿಗೆ ಮಾತುಕತೆ ನಡೆಸಿದರು.
ಎರಡು ದಿನದಿಂದ ತಾವು ಪ್ರತಿಭಟನೆ ನಡೆಸುತ್ತಿರುವುದು ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೂ ಬಂದಿದೆ. ಹೀಗಾಗಿ ತಮ್ಮನ್ನು ಇಲ್ಲಿಗೆ ಕಳುಹಿಸಿದ್ದಾರೆ. ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ತಮ್ಮ ಏನೇನು ಬೇಡಿಕೆಗಳಿವೆ ಅವುಗಳ ಬಗ್ಗೆ ಸವಿವರವಾಗಿ ಕಾಲೇಜಿನ ಎಲ್ಲ ವಿದ್ಯಾರ್ಥಿಗಳ ಪರವಾಗಿ ವಿದ್ಯಾರ್ಥಿ ಪ್ರಮುಖರು ಬರೆದು ಕೊಟ್ಟರೆ ಇಲಾಖೆ ಉನ್ನತ ಅಧಿಕಾರಿಗಳಿಗೆ ಇಂದೇ ಫ್ಯಾಕ್ಸ್ ಮೂಲಕ ರವಾನಿಸಿ ಗಮನಕ್ಕೆ ತರಲಾಗುವುದು.
ಶೀಘ್ರ ತಮ್ಮ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.ಅನಧಿಕೃತವಾಗಿ ಹಣ ವಸೂಲಿ, ವಿದ್ಯಾರ್ಥಿ ವೇತನ, ವಿವಿಧ ಕಾರಣ, ಕಾರ್ಯಗಳಿಗೆ ಹೆಚ್ಚಿನ ಹಣ ಪಡೆಯಲಾಗಿದೆ ಎಂಬ ತಮ್ಮ ಏನೇನು ದೂರುಗಳಿವೆ ಆ ಬಗ್ಗೆ ಲಿಖಿತ ರೂಪದಲ್ಲಿ ಕೊಟ್ಟರೆ ದಾಖಲಾತಿ ಪರಿಶೀಲನೆ ನಡೆಸಿ ಇಲಾಖೆಯು ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಲ್ಲದೇ ಕಾಲೇಜು ಇಲ್ಲ. ಪ್ರಾಚಾರ್ಯರು ಇಲ್ಲ. ಉಪನ್ಯಾಸಕರೂ ಇರುವುದಿಲ್ಲ. ಕಾಲೇಜು ಪ್ರಾಚಾರ್ಯರಾಗಿ ತಾವೂ ಕರ್ತವ್ಯ ನಿರ್ವಹಿಸಿದ್ದು, ಆಡಳಿತ ವ್ಯವಸ್ಥೆ ಗೊತ್ತಿದೆ. ವಿದ್ಯಾರ್ಥಿಗಳು ದೇವರಿದ್ದಂತೆ ಎಂದು ಹೇಳಿದ ಜಂಟಿ ನಿರ್ದೇಶಕರು, ಪ್ರತಿಭಟನೆ ವಾಪಸ್ ಪಡೆಯಲು ಹೇಳಿದರು.
ಪ್ರತಿಭಟನೆ ನೇತೃತ್ವವಹಿಸಿದ್ದ ಡಿವೈಎಫ್‌ಐ ಮುಖಂಡ ಶರಣಬಸವ ಡಿ.ಎಸ್ ಅವರು, ಹಲವು ತಿಂಗಳಿಂದ ಮನವಿ, ಅಹವಾಲು ಸಲ್ಲಿಸಿ ವಿದ್ಯಾರ್ಥಿಗಳಿಗೆ ಸಾಕಾಗಿದೆ. ಪ್ರಾಚಾರ್ರು, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಈಗ ಮತ್ತೆ ಅದೇ ಅಂಶಗಳ ಬಗ್ಗೆ ಲಿಖಿತ ರೂಪದಲ್ಲಿ ವಿದ್ಯಾರ್ಥಿಗಳು ಕೊಡುವುದರಲ್ಲಿ ಅರ್ಥವಿಲ್ಲ. ಈ ಹಿಂದೆ ಇಲಾಖೆಗೆ ಸಲ್ಲಿಸಿದ ಮನವಿ, ಅಹವಾಲು ಪತ್ರ ಪರಿಶೀಲಿಸಿ ಬೇಡಿಕೆಗಳ ಈಡೇರಿಕೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ದಿನ ಮತ್ತೊಮ್ಮೆ ಲಿಖಿತ ರೂಪದಲ್ಲಿ ಬೇಡಿಕೆಗಳ ಪತ್ರ ಕೊಟ್ಟರೆ ಉನ್ನತ ಅಧಿಕಾರಿಗಳ ಅವಗಾಹನೆಗೆ ತರಲು ಸಹಕಾರಿಯಾಗುತ್ತದೆ ಎಂದು ಜಂಟಿ ನಿರ್ದೇಶಕರು ಪುನಃ ಮನವಿ ಮಾಡಿದಾಗ ವಿದ್ಯಾರ್ಥಿಗಳ ಮುಖಂಡರು ಬೇಡಿಕೆ ಈಡೇರಿಕೆ ಕುರಿತು ಲಿಖಿತವಾಗಿ ಬರೆದುಕೊಟ್ಟರು. ತಮ್ಮ ಭರವಸೆ ಹಿನ್ನೆಲೆಯಲ್ಲಿ ಈಗ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗುವುದು.
ಒಂದು ವಾರದಲ್ಲಿ ಬೇಡಿಕೆ ಈಡೇರಿಕೆಗೆ ಇಲಾಖೆ ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದರೆ ಮತ್ತೆ ಪ್ರತಿಭಟನೆ ನಡೆಸಲಾಗುವುದು. ಇಲಾಖೆ ಉನ್ನತ ಅಧಿಕಾರಿಗಳ ಗಮನಕ್ಕೂ ಈ ವಿಚಾರ ತರಬೇಕು ಎಂದು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಜಂಟಿ ನಿರ್ದೇಶಕ ರವಿಶಂಕರ್ ಅವರಿಗೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.