ADVERTISEMENT

ಶಿಕ್ಷಕರ ಅನಧಿಕೃತ ಗೈರು -ಶಾಲೆಗೆ ಬೀಗ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 9:50 IST
Last Updated 11 ಜೂನ್ 2013, 9:50 IST

ಕವಿತಾಳ: ಶಿಕ್ಷಕರು ಅನಧಿಕೃತವಾಗಿ ಗೈರು ಹಾಜರಾಗಿದ್ದರಿಂದ ಪಾಲಕರು ಶಾಲೆಗೆ ಬೀಗ ಹಾಕಿ ಪ್ರತಿಭಟಿಸಿದ ಘಟನೆ ಸಮೀಪದ ಯಕ್ಲಾಸ್ಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.

1ರಿಂದ 5ನೇ ತರಗತಿಗೆ  70 ವಿದ್ಯಾರ್ಥಿಗಳಿದ್ದು, ಮೂರು ಜನ ಶಿಕ್ಷಕರಲ್ಲಿ ಒಬ್ಬರು ವರ್ಗಾವಣೆ ಆಗಿದ್ದಾರೆ. ಇನ್ನೊಬ್ಬ ಶಿಕ್ಷಕರನ್ನು ಎರವಲು ಸೇವೆ ಮೇಲೆ ವರ್ಗಾವಣೆ ಮಾಡಲಾಗಿದೆ.

ಎರವಲು ಸೇವೆ ಮೇಲೆ ಇದೇ ಶಾಲೆಗೆ ನಿಯೋಜನೆಗೊಂಡ ಒಬ್ಬ ಶಿಕ್ಷಕ ಕರ್ತವ್ಯಕ್ಕೆ ಹಾಜರಾಗದ ಕಾರಣ ಒಬ್ಬರೇ ಶಿಕ್ಷಕರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಸೋಮವಾರ ಶಾಲೆಗೆ ಅನಧಿಕೃತವಾಗಿ ಗೈರು ಹಾಜರಾಗಿದ್ದರಿಂದ ಶಾಲೆಗೆ ಬಂದ ಮಕ್ಕಳು ವಾಪಸು ತೆರಳಿದರು. ಇದರಿಂದ ಆಕ್ರೋಶಗೊಂಡ ಪಾಲಕರು ಶಾಲೆಗೆ ಬೀಗ ಹಾಕಿ ಪ್ರತಿಭಟಿಸಿದರು.

ಘಟನೆ ತಿಳಿಯುತ್ತಲೇ ಸಿಆರ್‌ಪಿ ಬಸವರಾಜ ಪಲಕನಮರಡಿ ಒಬ್ಬ ಶಿಕ್ಷಕರನ್ನು ಕರೆತಂದರು. ಅವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಶಾಲೆಯ ಬೀಗ ತೆರವುಗೊಳಿಸಲಿಲ್ಲ. ಶಿಕ್ಷಕರ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದ್ದು ಇಲ್ಲಿನ ಮಕ್ಕಳಿಗೆ ಬೇರೆ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ನಿರಾಕರಿಸಲಾಗ್ತುತಿದೆ ಎಂದು ಪಾಲಕರು ಆರೋಪಿಸಿದರು.

ಶಿಕ್ಷಕರು ಶಾಲೆಗೆ ಬಾರದ ಕಾರಣ ಮಧ್ಯಾಹ್ನದ ಬಿಸಿಯೂಟ ಸ್ಥಗಿತವಾಗಿತ್ತು. ಶಿಕ್ಷಕರ ನೇಮಕ ಮಾಡದ ಹೊರತು ಶಾಲೆಯ ಬೀಗ ತೆರವುಗೊಳಿಸುವುದಿಲ್ಲ ಎಂದು ಗ್ರಾಮದ ಶಿವಪ್ಪ ಇತರರು ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.