ADVERTISEMENT

ರಾಯಚೂರಿನಲ್ಲಿ 30 ಎಂಎಂ ಮಳೆ: ಬೆಳೆಹಾನಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 14:36 IST
Last Updated 16 ಸೆಪ್ಟೆಂಬರ್ 2020, 14:36 IST
ರಾಯಚೂರು ತಾಲ್ಲೂಕಿನ ಆತ್ಕೂರು ಗ್ರಾಮದಲ್ಲಿ ಮಳೆ ನೀರು ಹತ್ತಿ ಬೆಳೆಗೆ‌‌ ನುಗ್ಗಿದ್ದರಿಂದ ರೈತ ಅಸಹಾಯಕ ಸ್ಥಿತಿಯಲ್ಲಿ ನಿಂತಿರುವುದು ಬುಧವಾರ ಕಂಡುಬಂತು
ರಾಯಚೂರು ತಾಲ್ಲೂಕಿನ ಆತ್ಕೂರು ಗ್ರಾಮದಲ್ಲಿ ಮಳೆ ನೀರು ಹತ್ತಿ ಬೆಳೆಗೆ‌‌ ನುಗ್ಗಿದ್ದರಿಂದ ರೈತ ಅಸಹಾಯಕ ಸ್ಥಿತಿಯಲ್ಲಿ ನಿಂತಿರುವುದು ಬುಧವಾರ ಕಂಡುಬಂತು   

ರಾಯಚೂರು: ರಾಯಚೂರು ತಾಲ್ಲೂಕಿನಾದ್ಯಂತ ಮಂಗಳವಾರ ರಾತ್ರಿಯಿಡೀ 30 ಮಿಲಿಮೀಟರ್‌ ಮಳೆಯಾಗಿದ್ದು, ಹತ್ತಿ, ತೊಗರಿ ಹಾಗೂ ಭತ್ತದ ಬೆಳೆಗಳಲ್ಲಿ ನೀರು ಸಂಗ್ರಹವಾಗಿದ್ದು, ರೈತರು ಆತಂಕದಲ್ಲಿ ಮುಳುಗಿದ್ದಾರೆ.

ದೇವದುರ್ಗದಲ್ಲಿ 15, ಲಿಂಗಸುಗೂರಿನಲ್ಲಿ 5, ಮಾನ್ವಿಯಲ್ಲಿ 11, ಸಿಂಧನೂರಿನಲ್ಲಿ 4, ಮಸ್ಕಿಯಲ್ಲಿ 3 ಹಾಗೂ ಸಿರವಾರದಲ್ಲಿ 9 ಮಿಲಿಮೀಟರ್‌ ಮಳೆಯಾಗಿದೆ. ಈಗಾಗಲೇ ಅಧಿಕ ತೇವಾಂಶ ಬೆಳೆಗಳಿಗೆ ಮಾರಕವಾಗಿದೆ. ಮತ್ತೆ ಮತ್ತೆ ಮಳೆ ಸುರಿಯುತ್ತಿರುವುದರಿಂದ ಬೆಳೆಗಳು ಸಂಪೂರ್ಣ ನಾಶವಾಗುವ ಭೀತಿಯಲ್ಲಿ ರೈತರು ಮುಳುಗಿದ್ದಾರೆ.

ರಾಯಚೂರು ತಾಲ್ಲೂಕಿನ ಕೃಷ್ಣಾನದಿ ತೀರದ ಇಳಿಜಾರು ಪ್ರದೇಶದ ಜಮೀನಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆತ್ಕೂರು, ಡಿ.ರಾಂಪೂರದಲ್ಲಿ ರಭಸವಾಗಿ ನುಗ್ಗಿಬಂದ ಮಳೆನೀರಿನಿಂದ ಬೆಳೆ ಕೊಚ್ಚಿಹೋಗಿದ್ದಲ್ಲದೆ, ನೀರು ಸಂಗ್ರಹಗೊಂಡಿದೆ.

ADVERTISEMENT

‘ಜಮೀನುಗಳಿಗೆ ಮಳೆನೀರು ಹರಿದು ಬರದಂತೆ ಗ್ರಾಮದ ಸುತ್ತಮುತ್ತಲೂ ಪಂಚಾಯಿತಿಯಿಂದ ಚೆಕ್‌ಡ್ಯಾಂಗಳನ್ನು ನಿರ್ಮಿಸಬೇಕು. ಆತ್ಕೂರು ಸುತ್ತಮುತ್ತ ಪ್ರತಿವರ್ಷ ಮಳೆಯಿಂದ ಬೆಳೆಹಾನಿ ಆಗುತ್ತಿದೆ. ಈಗಲಾದರೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಗಮನಹರಿಸಿ ಮಳೆನೀರು ತಡೆಗೆ ಕ್ರಮ ವಹಿಸಬೇಕು. ಅತಿಯಾಗಿ ಸುರಿದ ಮಳೆಯಿಂದ ಹತ್ತಿ ಬೆಳೆ ಸಂಪೂರ್ಣ ನೀರಿನಲ್ಲಿ ನಿಂತಿದೆ. ಬೀಜ, ಗೊಬ್ಬರಕ್ಕೆ ಮಾಡಿರುವ ವೆಚ್ಚವೂ ವಾಪಸ್‌ ಬರುವುದಿಲ್ಲ’ ಎಂದು ರೈತ ಜಾಫರ್ ‘ಪ್ರಜಾವಾಣಿ’ ಮುಂದೆ ಅಳಲು ವ್ಯಕ್ತಪಡಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.