ADVERTISEMENT

ತರಬೇತಿ ಕಮ್ಮಟ: ಕೌಶಲ್ಯವಿಲ್ಲದೆ ಉದ್ಯೋಗವಿಲ್ಲ- ಪ್ರೊ.ಹರೀಶ್‌

50 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 14:13 IST
Last Updated 19 ಡಿಸೆಂಬರ್ 2021, 14:13 IST
ರಾಯಚೂರು ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಆಯೋಜಿಸಿರುವ 'ಗಿರಿಜನ ಕಲ್ಯಾಣ: ಸವಾಲು ಮತ್ತು ಅವಕಾಶಗಳು' ಐದು ದಿನಗಳ ತರಬೇತಿ ಶಿಬಿರವನ್ನು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ್‌ ರಾಮಸ್ವಾಮಿ ಭಾನುವಾರ ಉದ್ಘಾಟಿಸಿದರು
ರಾಯಚೂರು ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಆಯೋಜಿಸಿರುವ 'ಗಿರಿಜನ ಕಲ್ಯಾಣ: ಸವಾಲು ಮತ್ತು ಅವಕಾಶಗಳು' ಐದು ದಿನಗಳ ತರಬೇತಿ ಶಿಬಿರವನ್ನು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ್‌ ರಾಮಸ್ವಾಮಿ ಭಾನುವಾರ ಉದ್ಘಾಟಿಸಿದರು   

ರಾಯಚೂರು: ಸ್ಪರ್ಧೆ ತುಂಬಾ ಇರುವುದರಿಂದ ಬರೀ ಮೀಸಲಾತಿ ನಂಬಿಕೊಂಡರೆ ಉದ್ಯೋಗ ಪಡೆಯಲು ಸಾಧ್ಯವಾಗುವುದಿಲ್ಲ. ಉದ್ಯೋಗಗಳು ನಿರೀಕ್ಷಿಸುವ ಕೌಶಲ್ಯ ತರಬೇತಿ ಹೊಂದುವುದಕ್ಕೆ ಆದ್ಯತೆ ನೀಡಬೇಕು. ಕೌಶಲ್ಯವಿಲ್ಲದೆ ಉದ್ಯೋಗ ಸಿಗುವುದಿಲ್ಲ ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ್‌ ರಾಮಸ್ವಾಮಿ ಹೇಳಿದರು.

ರಾಯಚೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ‘ಗಿರಿಜನ ಕಲ್ಯಾಣ: ಸವಾಲು ಮತ್ತು ಅವಕಾಶಗಳು’ ಕುರಿತ ಐದು ದಿನಗಳ ತರಬೇತಿ ಕಮ್ಮಟವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರೀಯ ‌ಶಿಕ್ಷಣ ನೀತಿ (ಎನ್‌ಇಪಿ) ಮೂಲಕ ಕೌಶಲ್ಯ ಬೆಳೆಸಿಕೊಳ್ಳುವುದಕ್ಕೆ ಅವಕಾಶ ಮಾಡಲಾಗಿದೆ. ಅದರಲ್ಲಿ ಸಾಮಾಜಿಕ ನ್ಯಾಯ ಎಂಬುದು ಇತಿಮಿತಿಯಲ್ಲಿದೆ. ವೃತ್ತಿಪರತೆ ಹೆಚ್ಚಾಗದ ಹೊರತು ಉದ್ಯೋಗಾವಕಾಶಗಳು ದೊರೆಯುವುದಿಲ್ಲ. ಸರ್ಕಾರವೇ ತನ್ನ ವ್ಯಾಪ್ತಿ ಕಡಿಮೆ ಮಾಡಿಕೊಳ್ಳುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಸಂವಿಧಾನದತ್ತ ಕೆಲಸಗಳನ್ನು ಸಹ ಸರ್ಕಾರ ಒಂದೊಂದಾಗಿ ಕಡಿಮೆ ಮಾಡಿಕೊಳ್ಳುತ್ತಿದೆ ಎಂದು ಮನವರಿಕೆ ಮಾಡಿದರು.

ADVERTISEMENT

ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಕುಲಪತಿ ವಿಷ್ಣುಕಾಂತ ಚಟಪಲ್ಲಿ ಮಾತನಾಡಿ, ಗಿರಿಜನರನ್ನು ಮುಖ್ಯಧಾರೆಗೆ ಕರೆತರಬೇಕು ಎನ್ನುವುದು ಚರ್ಚೆ ಆಗುತ್ತಿದೆ. ಆದರೆ ಕಾಯಕವೇ ಕೈಲಾಸ ಎಂದು‌ ನಂಬಿದವರು, ಸ್ವಾವಲಂಬನೆ, ಸಮೃದ್ಧ ಆಗಿದ್ದವರು ಗಿರಿಜನರು. ವ್ಯಕ್ತಿಗತ, ರಾಷ್ಟ್ರ, ನೆಲ, ಜಲ, ಕಾಡು ರಕ್ಷಣೆ ಮಾಡಿ ಎಂದು ಗಿರಿಜನರಿಗೆ ಹೇಳುವ ಅಗತ್ಯವಿದೆಯೇ‌ ಎಂಬುದನ್ನು ಮುಖ್ಯ ವಾಹಿನಿಯಲ್ಲಿದ್ದವರು ಯೋಚನೆ ಮಾಡಬೇಕಿದೆ ಎಂದರು.

ಶಿಕ್ಷಣ ಮತ್ತು ಉದ್ಯೋಗದ ಅಂತರವನ್ನು ತುಂಬುವ ಕೆಲಸವನ್ನು ಕೌಶಲ್ಯ ತರಬೇತಿಯಿಂದ ಮಾಡಬಹುದು. ವಿಶ್ವವಿದ್ಯಾಲಯವನ್ನು ಗುಣಮಟ್ಟದಲ್ಲಿ‌ ಅಭಿವೃದ್ಧಿ ಮಾಡುವುದು ಮುಖ್ಯ. ಕಟ್ಟಡಗಳಿಂದ ವಿಶ್ವವಿದ್ಯಾಲಯ ‌ಬೆಳೆಯುವುದಿಲ್ಲ. ಅಧ್ಯಾಪಕರು ಕಾಯಂ ಅಥವಾ ಗುತ್ತಿಗೆ ಆದಾರ ಎಂಬುದು ಮುಖ್ಯವಲ್ಲ. ಬೋಧಕರ ಬದ್ಧತೆ ಮುಖ್ಯವಾಗುತ್ತದೆ ಎಂದು ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಮರೇಶ ಯತಗಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಗಿರಿಜನರ ಕಲ್ಯಾಣದ ಶಿಬಿರವು ಅಭಿವೃದ್ಧಿಯ ಪಥಕ್ಕೆ ಸಂಬಂಧಿಸಿದ್ದಾಗಿದೆ. ಗಿರಿಜನರಿಗೆ ತಮ್ಮದೇ ಆದ ಸಂಸ್ಕೃತಿ ಇದೆ. ಅವರಲ್ಲಿ ಸಾಧಕರಿದ್ದಾರೆ. ಗಿರಿಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಶಿಬಿರಾರ್ಥಿಗಳು ಮುಂದಿನ ದಿನಗಳಲ್ಲಿ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್‌ ಕರಿಯಪ್ಪ ಎನ್. ಮಾತನಾಡಿ, ಸಾಹಿತ್ಯ ಅಕಾಡೆಮಿ ಬಗ್ಗೆ ಜನರಲ್ಲಿ ಗೌರವ ಅನುಚಾನವಾಗಿ ಮುಂದುವರಿದಿದೆ. ಅದರ ಸಾರಥ್ಯ ವಹಿಸಿಕೊಳ್ಳುವ ಸಾಹಿತಿಗಳ‌ ದುಡಿಮೆಯನ್ನು ಎಲ್ಲರೂ ಗೌರವಿಸುತ್ತಾರೆ. ಹಾಲಿ ಅಧ್ಯಕ್ಷರು ಅಕಾಡೆಮಿ ಗೌರವವನ್ನು ಮತ್ತಷ್ಟು ಉನ್ನತಕ್ಕೆ ತೆಗೆದುಕೊಂಡು ಹೋಗುವ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದ್ದಾರೆ. ಸಾಹಿತ್ಯದ ಎಲ್ಲ ಪ್ರಕಾರದ ಒಳಗೊಂಡು ಕಾರ್ಯಕ್ರಮವನ್ನು ಅಕಾಡೆಮಿ ರೂಪಿಸುತ್ತಿದೆ. ಹೊಸ ಸಮಿತಿ ಅಸ್ತಿತ್ವಕ್ಕೆ ಬಂದ ನಂತರ ಗಿರಿಜನರಿಗಾಗಿ ರಾಯಚೂರಿನಲ್ಲಿ ನಡೆಯುತ್ತಿರುವುದು ಎರಡನೇ ಕಮ್ಮಟ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ಮಾತನಾಡಿ, ಕಮ್ಮಟಗಳ ‌ಮೂಲಕ ಸಾಕಷ್ಟು ಕಲಿಯುವುದಕ್ಕೆ ಅವಕಾಶವಿದೆ. ಹೊಸ ಸಮಿತಿ ಬಂದ ನಂತರ ಅಕಾಡೆಮಿಯಿಂದ 14ನೇ ಕಮ್ಮಟ ನಡೆಯುತ್ತಿದೆ. ಕಲಿಕೆ ಎನ್ನುವುದು ಮಾತಲ್ಲ ಕೃತಿ. ಜೀವನ ಎನ್ನುವುದು ಮಾತಲ್ಲ, ಕೃತಿ. ಕಳೆದ 70 ವರ್ಷಗಳಿಂದ ಇಲ್ಲ ಎಂಬುದನ್ನೇ ಕಲಿಸಿದ್ದಾರೆ. ಆದರೆ ಇರುವ ಅವಕಾಶ ಉಪಯೋಗಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಿ.ಎಂ.ಶರಭೇಂದ್ರಸ್ವಾಮಿ, ರಾಯಚೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ.ಯರ್ರಿಸ್ವಾಮಿ ಎಂ., ಶಿಬಿರ ನಿರ್ದೇಶಕ ಡಾ.ಆನಂದಕುಮಾರ್‌ ಇದ್ದರು.
ಅನಿಲ ಅಪ್ರಾಳ್ ಪ್ರಾರ್ಥಿಸಿದರು. ಪತ್ರಕರ್ತ ವೆಂಕಟೇಶ ಹೂಗಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.