ADVERTISEMENT

ದೇವದುರ್ಗ: 59 ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ

ಯಮುನೇಶ ಗೌಡಗೇರಾ
Published 19 ಮಾರ್ಚ್ 2025, 5:53 IST
Last Updated 19 ಮಾರ್ಚ್ 2025, 5:53 IST
ದೇವದುರ್ಗ ತಾಲ್ಲೂಕಿನ ಚಿಕ್ಕಬುದೂರು ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದ ಸುತ್ತ ಮುಳ್ಳಿನ ಕಂಟಿ ಬೆಳೆದಿರುವುದು
ದೇವದುರ್ಗ ತಾಲ್ಲೂಕಿನ ಚಿಕ್ಕಬುದೂರು ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದ ಸುತ್ತ ಮುಳ್ಳಿನ ಕಂಟಿ ಬೆಳೆದಿರುವುದು   

ದೇವದುರ್ಗ: ನಿರ್ವಹಣೆ ಕೊರತೆಯ ಕಾರಣಕ್ಕೆ ಅರಕೇರಾ ಮತ್ತು ದೇವದುರ್ಗ ತಾಲ್ಲೂಕುಗಳಲ್ಲಿ 59 ಶುದ್ದ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ. ಆದ್ದರಿಂದ ಗ್ರಾಮೀಣ ಭಾಗದವರು ಶುದ್ಧ ಕುಡಿಯುವ ನೀರು ಸಿಗದೆ ಪರದಾಡುವಂತಾಗಿದೆ.

ಎರಡೂ ತಾಲ್ಲೂಕುಗಳಲ್ಲಿ 146 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಆ ಪೈಕಿ 87 ಕಾರ್ಯ ನಿರ್ವಹಿಸುತ್ತಿವೆ. 59 ಸ್ಥಗಿತಗೊಂಡಿವೆ. ಒಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ₹14 ಲಕ್ಷದಿಂದ ₹20 ಲಕ್ಷದವರೆಗೆ ವೆಚ್ಚ ಮಾಡಲಾಗಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೆಆರ್‌ಡಿಎಲ್, ಶಾಸಕರ ಅನುದಾನ ಹಾಗೂ ಸಹಕಾರ ಸಂಘಗಳ ನೆರವು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ಈ ಘಟಕಗಳನ್ನು ನಿರ್ಮಿಸಲಾಗಿದೆ. ‌

ADVERTISEMENT

ಗುತ್ತಿಗೆ ಪಡೆದಿರುವ ಕಂಪನಿ, ಗ್ರಾಮ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಘಟಕಗಳು ದುರಸ್ತಿಯಾಗದೆ ತುಕ್ಕು ಹಿಡಿದಿವೆ.

ಸದಾ ಅಂತರ್ಜಲ ಕುಸಿತದ ಸಮಸ್ಯೆ ಎದುರಿಸುವ ದೇವದುರ್ಗ ತಾಲ್ಲೂಕಿನ ಕೆಲವು ಗ್ರಾಮದ ಕುಡಿಯುವ ನೀರಿನಲ್ಲಿ ಜಿಲ್ಲೆಯಲ್ಲೇ ಅತಿಹೆಚ್ಚು ಫ್ಲೋರೈಡ್ ಅಂಶ ಕಂಡುಬರುತ್ತದೆ. ಬಹುತೇಕ ಜನರ ಹಲ್ಲು ಮತ್ತು ಮೂಳೆ ರೋಗದಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

ಅರಕೇರಾ ತಾಲ್ಲೂಕಿನ ಮಲದಕಲ್ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದ ಶೆಟರ್ ತುಕ್ಕು ಹಿಡಿದಿರುವುದು

ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ಕುಡಿಯುವ ನೀರು ಒದಗಿಸುವ ಉದ್ದೇಶವಿದೆ. ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಕಾಮಗಾರಿ ಮುಕ್ತಾಯಗೊಂಡು ಎರಡು ವರ್ಷ ಕಳೆದರೂ ಇನ್ನೂ ನಲ್ಲಿಗಳಲ್ಲಿ ನೀರು ಹರಿಯುತ್ತಿಲ್ಲ.

ಪ್ರತಿದಿನ ತಾಲ್ಲೂಕಿನಲ್ಲಿ 5 ರಿಂದ 10 ಘಟಕಗಳು ಕೆಟ್ಟು ನಿಲ್ಲುತ್ತಿವೆ. ಅವುಗಳ ದುರಸ್ತಿ ಮಾಡಬೇಕಾಗಿರುವ ಏಜೆನ್ಸಿ ಹಾಗೂ ಗ್ರಾಮ ಪಂಚಾಯಿತಿಗಳ ನಿರ್ಲಕ್ಷ್ಯದಿಂದಾಗಿ ದುರಸ್ತಿಯಾಗಲು ವಾರಗಟ್ಟಲೇ ಸಮಯವನ್ನು ತೆಗೆದುಕೊಳ್ಳುತ್ತವೆ. ಹೀಗಾಗಿ ಖಾಸಗಿ ಶುದ್ಧ ಕುಡಿಯುವ ನೀರಿನ ಟ್ಯಾಂಕರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.

ಅರಕೇರಾ ತಾಲ್ಲೂಕಿನ ರಾಮದುರ್ಗ ಗ್ರಾಮ ಪಂಚಾಯಿತಿ ಆವರಣದಲ್ಲಿನ ಘಟಕ ಪಾಳುಬಿದ್ದಿರುವುದು
ಶುದ್ಧ ನೀರಿನ ಘಟಕಗಳನ್ನು ಗುತ್ತಿಗೆ ಪಡೆದ ಏಜೆನ್ಸಿಗಳು ಸಮರ್ಪಕವಾಗಿ ನಿರ್ವಹಣೆ ಮಾಡಲೇಬೇಕು. ಈ ಕುರಿತು ತಿಂಗಳಿಗೊಮ್ಮೆ ವರದಿ ಒಪ್ಪಿಸಬೇಕು. ಸಮರ್ಪಕ ನಿರ್ವಹಣೆ ಮಾಡದ ಏಜೆನ್ಸಿಗಳ ಪರವಾನಗಿ ರದ್ದುಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ವರದಿ ನೀಡಲಾಗುವುದು
ಹೀರಾಲಾಲ ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ನಿರ್ವಹಣೆ ಮಾಡದ ಗುತ್ತಿಗೆದಾರರ ಲೈಸೆನ್ಸ್ ರದ್ದುಪಡಿಸಿ ಕಪ್ಪು ಪಟ್ಟಿಗೆ ಸೇರಿಸಬೇಕು. ನಿರ್ವಹಣೆ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸಬೇಕು
ಬಸವರಾಜ ಪಾಟೀಲ ಹೂವಿನಹೆಡಗಿ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ
ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಿದ ಘಟಕಗಳ ದುರಸ್ತಿಗೆ ಪಿಡಿಒಗಳಿಗೆ ಸೂಚಿಸುವೆ
ಬಸವರಾಜ ಹಟ್ಟಿ ಇಒ ತಾಲ್ಲೂಕು ಪಂಚಾಯಿತಿ ದೇವದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.