ADVERTISEMENT

ಮಧ್ಯಾಹ್ನದೊಳಗೆ ದಿನಸಿ, ತರಕಾರಿ ಖರೀದಿ

ಮತ್ತೆ ಮೂರು ದಿನಗಳವರೆಗೆ ಸಂಪೂರ್ಣ ಲಾಕ್‌ಡೌನ್‌

​ಪ್ರಜಾವಾಣಿ ವಾರ್ತೆ
Published 18 ಮೇ 2021, 15:02 IST
Last Updated 18 ಮೇ 2021, 15:02 IST
ಆರ್‌.ವೆಂಕಟೇಶಕುಮಾರ್‌
ಆರ್‌.ವೆಂಕಟೇಶಕುಮಾರ್‌   

ರಾಯಚೂರು: ಜಿಲ್ಲೆಯಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚುವುದನ್ನು ನಿಯಂತ್ರಿಸುವುದಕ್ಕಾಗಿ ಮೇ 19 ರ ಮಧ್ಯಾಹ್ನ 12 ರಿಂದ ಮೇ 22 ರವರೆಗೂ ರಾತ್ರಿ 12 ಗಂಟೆವರೆಗೆ ಸಂಪೂರ್ಣ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ.

19 ರಂದು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೂ ಮಾತ್ರ ದಿನಸಿ ಮತ್ತು ತರಕಾರಿ ಖರೀದಿ ಮತ್ತು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ನೀರು, ಹಾಲು, ಹಣ್ಣು, ಕಿರಾಣಿ ಅಂಗಡಿ, ತರಕಾರಿ, ಮಾಂಸ ಮಾರಾಟ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಗುರುವಾರದಿಂದ ಅಗತ್ಯ ವಸ್ತುಗಳಾದ ನೀರು, ಹಾಲು ಮಾರಾಟ, ಆಸ್ಪತ್ರೆಗಳು, ಔಷಧಿ ಅಂಗಡಿಗಳು ಹಾಗೂ ಅಗತ್ಯ ಸೇವೆಗಳಾದ ಅಂಬುಲೆನ್ಸ್, ಅಗ್ನಿ ಶಾಮಕ, ವಿದ್ಯುತ್, ಪೆಟ್ರೋಲ್ ಪಂಪ್, ಮತ್ತು ಇತರೆ ತುರ್ತು ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.

ಆಸ್ಪತ್ರೆಗಳಿಗೆ ಹೋಗುವವರು ವೈದ್ಯಕೀಯ ದಾಖಲೆಗಳನ್ನು ಚೆಕ್ ಪೋಸ್ಟ್‌ಗಳಲ್ಲಿ ತೋರಿಸಬೇಕು. ದಿನಪ್ರತಿಕೆ, ಎಟಿಎಂ ಸೇವೆಗಳು ಅನುಮತಿಸಲಾಗಿದೆ. ಆಹಾರ ಸಂಸ್ಕರಣೆಯ ಸೇವೆಗಳಾದ ಕೋಲ್ಡ್ ಸ್ಟೋರೇಜ್‌ಗಳು, ಔಷಧ ಉದ್ಯಮಗಳು, ರಾಸಾಯನಿಕ ಉದ್ಯಮಗಳು, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಘಟಕಗಳು, ಆರ್‌ಟಿಪಿಎಸ್ ಮತ್ತು ವೈಟಿಪಿಎಸ್‌ಗಳಲ್ಲಿ ಶೇ 50 ರಷ್ಟು ಸಿಬ್ಬಂದಿಯೊಂದಿಗೆ ನಿರ್ವಹಿಸಲು ಅನುಮತಿಸಲಾಗಿದೆ.

ADVERTISEMENT

ಎಲ್ಲಾ ರೀತಿಯ ಸರಕುಗಳ ಸಾಗಾಣಿಕೆಗೆ ಮತ್ತು ಖಾಲಿ ವಾಹನಗಳಿಗೆ ಅನುಮತಿಸಲಾಗಿದೆ. ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ದಿ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು, ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ, ಪೊಲೀಸ್ ಇಲಾಖೆ, ಗೃಹ ರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ, ಕಾರಾಗೃಹ ಸೇವೆಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ.

ನ್ಯಾಯಾಲಯಗಳು ಹಾಗೂ ನ್ಯಾಯಾಂಗ ಕೆಲಸಗಳಿಗೆ ಸಂಬಂಧಿಸಿದ ಕಚೇರಿಗಳು ರಾಜ್ಯ ಹೈಕೋರ್ಟ್ ಹೊರಡಿಸಿರುವ ಮಾರ್ಗಸೂಚಿಗಳನ್ವಯ ಕಾರ್ಯನಿರ್ವಹಿಸಬೇಕು.

ಸರ್ಕಾರೇತರ ಸಂಸ್ಥೆಗಳ ಕಚೇರಿಗಳು ಹಾಗೂ ಸ್ವಯಂ ಸೇವಕರು, ಇತರೆ ಎಲ್ಲಾ ಕಚೇರಿಗಳು ತಮ್ಮ ಸಿಬ್ಬಂದಿ ಮನೆಯಿಂದಲೇ ಕೆಲಸ ನಿರ್ವಹಿಸತಕ್ಕದ್ದು ಹಾಗೂ ಸೇವೆಗಳಿಗೆ ಸಂಬಂಧಪಟ್ಟ ಇಲಾಖೆಗಳನ್ನು ಹೊರತುಪಡಿಸಿ, ಉಳಿದ ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆಯಿಂದಲೇ ಕೆಲಸ ನಿರ್ವಹಿಸುವುದು. ಅಂತ್ಯಕ್ರಿಯೆ, ಶವಸಂಸ್ಕಾರಕ್ಕೆ ಐದು ಜನರಿಗೆ ಮಾತ್ರ ಅನುಮತಿಸಲಾಗಿದೆ. ಖಾಸಗಿ ಸಾರಿಗೆ ಸೇವೆಯನ್ನು ತುರ್ತು ವೈದ್ಯಕೀಯ ಸೇವೆಗಳಿಗೆ ಮಾತ್ರ ಅವಕಾಶವಿದ್ದು ವೈದ್ಯಕೀಯ ದಾಖಲೆಗಳನ್ನು ಚೆಕ್ ಪ್ಟೋಸ್ ಗಳಲ್ಲಿ ತೋರಿಸತಕ್ಕದ್ದು. ಇತರೇ ಎಲ್ಲಾ ಖಾಸಗಿ ಸಾರಿಗೆಯನ್ನು ನಿರ್ಬಂಧಿಸಲಾಗಿದೆ.

ವೈದ್ಯಕೀಯ ಹಾಗೂ ತುರ್ತು ಸೇವೆಗಳ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಕರ್ತವ್ಯ ನಿಮಿತ್ತ ಓಡಾಟಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಮದುವೆಗಳಿಗೆ ಸಂಬಂಧಪಟ್ಟ ತಹಶೀಲ್ದಾರ್‌ ಅನುಮತಿಯೊಂದಿಗೆ 10 ಜನರಿಗೆ ಮಾತ್ರ ಮನೆಯ ಒಳಗಡೆ ನಡೆಸತಕ್ಕದ್ದು. ಆಸ್ಪತ್ರೆಗಳು ಒಳ ಹಾಗೂ ಹೊರ ರೋಗಿಗಳಿಗೆ ಉಪಹಾರ, ಊಟದ ವ್ಯವಸ್ಥೆಯನ್ನು ಕಲ್ಪಿಸುವುದು ಸಂಬಂಧಪಟ್ಟ ಆಸ್ಪತ್ರೆಗಳ ಜವಾಬ್ದಾರಿ ಆಗಿರುತ್ತದೆ.

ಆಸ್ಪತ್ರೆಗಳಲ್ಲಿರುವ ಒಳ ಹಾಗೂ ಹೊರ ರೋಗಿಗಳಿಗೆ ಉಪಹಾರ, ಊಟದ ವ್ಯವಸ್ಥೆ ಮತ್ತು ಜ್ಯೂಸನ್ನು ಸರಬರಾಜು ಮಾಡಲು ಆಸ್ಪತ್ರೆಗಳ ಮುಂದಿರುವ ಒಂದು ಹೋಟೆಲ್ ಹಾಗೂ ಒಂದು ಹಣ್ಣಿನ ಅಂಗಡಿಗೆ ಮಾತ್ರ ಅನುಮತಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.