ರಾಯಚೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಸೂರ್ಯಕಾಂತಿ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಕುರಿತ ತರಬೇತಿ ಕಾರ್ಯಕ್ರಮವನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಎನ್. ಶಿವಶಂಕರ ಹಾಗೂ ಕೃಷಿ ಇಲಾಖೆಯ ಉಪ ನಿರ್ದೇಶಕ ಜಯಪ್ರಕಾಶ ಟಿ.ಸಿ. ಜಂಟಿಯಾಗಿ ಉದ್ಘಾಟಿಸಿದರು.
ರಾಯಚೂರು: ‘ಸೂರ್ಯಕಾಂತಿ ಬೆಳೆಗಾರರ ಸಮಸ್ಯೆಗೆ ಪರಿಹಾರ ಕಂಡುಕೊಂಡು ಸೂರ್ಯಕಾಂತಿ ಉತ್ಫಾದನೆ ಹೆಚ್ಚಿಸುವಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ನೆರವಾಗಬೇಕು’ ಎಂದು ಕೃಷಿ ಇಲಾಖೆಯ ಉಪನಿರ್ದೇಶಕ ಜಯಪ್ರಕಾಶ ಟಿ.ಸಿ ಹೇಳಿದರು.
ಇಲ್ಲಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಡಿಯಲ್ಲಿ ಆಯೋಜಿಸಿದ್ದ ಸೂರ್ಯಕಾಂತಿ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಮಾನ್ವಿ, ಲಿಂಗಸುಗೂರು ಹಾಗೂ ಸಿಂಧನೂರು ತಾಲ್ಲೂಕುಗಳ ಸೂರ್ಯಕಾಂತಿ ಬೆಳೆಯುವ ರೈತರಿಗೆ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ 50 ದಿನಗಳ ತರಬೇತಿ ನೀಡುವ ಸಲುವಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಿಗೆ, ಸಹಾಯಕ ಕೃಷಿ ಅಧಿಕಾರಿಗಳಿಗೆ ಮತ್ತು ಆತ್ಮ ಯೋಜನೆ ಅಧಿಕಾರಿಗಳಿಗೆ ತರಬೇತಿ ಏರ್ಪಡಿಸಲಾಗಿದೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಎನ್. ಶಿವಶಂಕರ ಮಾತನಾಡಿ, ‘ಜಿಲ್ಲೆಯ ಮಾನ್ವಿ ಹಾಗೂ ಸಿಂಧನೂರು ತಾಲ್ಲೂಕಿನಲ್ಲಿ ಸೂರ್ಯಕಾಂತಿ ಹೆಚ್ಚಾಗಿ ಬೆಳೆದಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ರೈತರಿಗೆ ಸಹಕಾರ ನೀಡಬೇಕು. ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳಿ ಮಾರುಕಟ್ಟೆಯಲ್ಲಿರುವ ಖಾಸಗಿ ಕಂಪನಿಗಳ ಖಾದ್ಯ ತೈಲಗಳಿಗೆ ಸ್ಪರ್ಧೆ ನೀಡುವಲ್ಲಿ ಹೆಚ್ಚು ಗಮನ ಹರಿಸಬೇಕು’ ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ತಿಮ್ಮಣ್ಣ ಮಾತನಾಡಿ, ‘ರೈತರಿಗೆ ಸುಧಾರಿತ ತಳಿಗಳು, ಸಮಗ್ರ ಪೀಡೆ ನಿರ್ವಹಣೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿದೆ. ಇದರಿಂದ ಇಳುವರಿ ಹೆಚ್ಚಿಸುವುದರೊಂದಿಗೆ ಆದಾಯ ದ್ವಿಗುಣಗೊಳಿಸಲು ಸಹಕಾರಿಯಾಗಲಿದೆ’ ಎಂದು ಹೇಳಿದರು.
ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳಿಯ ರಾಯಚೂರು ವಿಭಾಗದ ಅಸಿಸ್ಟಂಟ್ ಮ್ಯಾನೇಜರ್ ಶ್ರೀಶೈಲ ಅವರು ಎಣ್ಣೆಕಾಳು ಬೆಳೆಗಳ ಮಹತ್ವ ವಿವರಿಸಿದರು.
ಉಮೇಶ, ಅಪ್ಸಾನಾಬಾನು, ಅಮರೇಶ ಆಶಿಹಾಳ, ಕೃಷಿ ವಿಜ್ಞಾನ ಕೇಂದ್ರ, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ, ಕೃಷಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಮಲ್ಲರೆಡ್ಡಿ ನಿರೂಪಿಸಿದರು. ಶ್ರೀವಾಣಿ ಜಿ.ಎನ್. ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.