ADVERTISEMENT

ಅಕ್ಷಯ ತೃತೀಯ: ಚಿನ್ನ ಖರೀದಿ ಜೋರು

​ಪ್ರಜಾವಾಣಿ ವಾರ್ತೆ
Published 7 ಮೇ 2019, 12:35 IST
Last Updated 7 ಮೇ 2019, 12:35 IST
ರಾಯಚೂರಿನ ಸರಾಫ್‌ ಬಜಾರ್‌ನ ಆಭರಣ ಮಳಿಗೆಯೊಂದರಲ್ಲಿ ಗ್ರಾಹಕರು ಚಿನ್ನಾಭರಣ ಖರೀದಿಗಾಗಿ ಮುಗಿಬಿದ್ದಿರುವುದು ಮಂಗಳವಾರ ಕಂಡುಬಂತು
ರಾಯಚೂರಿನ ಸರಾಫ್‌ ಬಜಾರ್‌ನ ಆಭರಣ ಮಳಿಗೆಯೊಂದರಲ್ಲಿ ಗ್ರಾಹಕರು ಚಿನ್ನಾಭರಣ ಖರೀದಿಗಾಗಿ ಮುಗಿಬಿದ್ದಿರುವುದು ಮಂಗಳವಾರ ಕಂಡುಬಂತು   

ರಾಯಚೂರು:ನಗರದ ಸರಾಫ್‌ ಬಜಾರ್‌ನಲ್ಲಿ ಅಕ್ಷಯ ತೃತೀಯ ನಿಮಿತ್ತ ಮಂಗಳವಾರ ವಿಶೇಷ ಚೇತೋಹಾರಿ ವಾತಾವರಣ ಮನೆಮಾಡಿತ್ತು. ಆಭರಣಗಳನ್ನು ಖರೀದಿಸಲು ಜನರು ಚಿನ್ನಾಭರಣ ಅಂಗಡಿಗಳಲ್ಲಿ ಮುಗಿಬಿದ್ದಿದ್ದರು.

ಮಾರುಕಟ್ಟೆಯಲ್ಲಿ 10 ಗ್ರಾಂ (ಒಂದು ತೊಲ) ಚಿನ್ನದ ದರ ಮಂಗಳವಾರ ₹32,400 ರಷ್ಟಿತ್ತು. ಚಿನ್ನದ ದರದೊಂದಿಗೆ ಆಭರಣಗಳ ವಿಶೇಷ ವಿನ್ಯಾಸ ಮತ್ತು ತಯಾರಿಕೆ ಶುಲ್ಕ (ಮೇಕಿಂಗ್‌ ಚಾರ್ಜ್‌) ಮೇಳೈಸಿ ಗ್ರಾಹಕರು ಅಂಗಡಿಯಿಂದ ಅಂಗಡಿಗೆ ವಿಚಾರಿಸುತ್ತಿರುವುದು ಕಂಡುಬಂತು. ಕೆಲವು ಅಂಗಡಿಗಳಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಜನರು ಮುಗಿಬಿದ್ದಿದ್ದರು.

ಆಭರಣದ ಅಂಗಡಿಗಳಲ್ಲಿ ಬಹುತೇಕ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ದಂಪತಿ ಸಮೇತ ಬಂದವರೂ ಇದ್ದರು. ಆದರೆ, ಚಿನ್ನ ಖರೀದಿಯಲ್ಲಿ ಚೌಕಾಸಿ ಮಹಿಳೆಯರದ್ದೆ ನಡೆದಿತ್ತು. ಬಿಲ್‌ ಕೌಂಟರ್‌ ಎದುರು ಪುರುಷರು ನಿಂತುಕೊಂಡಿದ್ದರು. ಅಕ್ಷಯ ತೃತೀಯ ದಿನದಂದು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದನ್ನು ನಿರೀಕ್ಷಿಸಿದ್ದ ವ್ಯಾಪಾರಿಗಳು ಮಳಿಗೆಗಳನ್ನು ವಿಶೇಷವಾಗಿ ಅಲಂಕರಿಸಿದ್ದರು. ಅಲ್ಲದೆ, ಬೇಸಿಗೆ ಬಿಸಿಲಿನಲ್ಲಿ ಗ್ರಾಹಕರು ಬಾಯಾರಿಕೆಯಿಂದ ಬಳಲಬಾರದು ಎನ್ನುವ ಸದುದ್ದೇಶಕ್ಕಾಗಿ ಕೆಲವು ಅಂಗಡಿದಾರರು ಉಚಿತವಾಗಿ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದರು.

ADVERTISEMENT

‘ಪ್ರತಿ ವರ್ಷ ಚಿನ್ನ ಖರೀದಿಸಲು ಹಣ ಕೂಡಿಟ್ಟುರುತ್ತೇನೆ. ಸಾಧ್ಯವಾದ ಮಟ್ಟಿಗೆ ಚಿನ್ನ ಖರೀದಿಸುವುದು ಮೊದಲಿನಿಂದಲೂ ರೂಢಿಯಾಗಿದೆ. ಅಕ್ಷಯ ತೃತೀಯ ದಿನದಂದು ಚಿನ್ನಾಭರಣ ಖರೀದಿಗೆ ಶುಭ ದಿನ ಎನ್ನುವ ನಂಬಿಕೆ ಈಚೆಗೆ ಬಂದಿದೆ. ಎರಡು ವರ್ಷಗಳಿಂದ ಅಕ್ಷಯ ತೃತೀಯ ದಿನದಂದು ಸುತ್ತುಂಗುರ ಖರೀದಿಸಿದ್ದೇನೆ’ ಎಂದು ಜವಾಹರ ನಗರದ ಸುಮಂಗಲಾ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.