ರಾಯಚೂರು: ತಾಲ್ಲೂಕಿನ ಡೊಂಗರಾಂಪೂರ ಸಮೀಪ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಕಾಮಗಾರಿ ಪೂರ್ಣಗೊಂಡು ಎರಡು ವರ್ಷಗಳಾದರೂ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿಲ್ಲ. ಕಮಿಷನ್ ದಂಧೆ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ.
2008ರಲ್ಲಿ ₹ 7 ಕೋಟಿ ಯೋಜನಾ ವೆಚ್ಚದಲ್ಲಿ ಡೊಂಗರಾಂಪುರ–ಕುರ್ವಕುಂದ ಗ್ರಾಮದ ಮಧ್ಯೆ 285 ಮೀಟರ್ ಉದ್ದದ ಸೇತುವೆ ನಿರ್ಮಾಣಕ್ಕೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ. ಟೆಂಡರ್ ಕರೆಯಲು ಹಾಗೂ ಕಾಮಗಾರಿ ಆರಂಭಿಸಲು ವಿಳಂಬ ಮಾಡಿದ ಕಾರಣ ಯೋಜನಾ ವೆಚ್ಚ 2020ರಲ್ಲಿ ₹ 14 ಕೋಟಿಗೆ ಏರಿತು. ಹತ್ತು ವರ್ಷಗಳ ಅವಧಿಯಲ್ಲಿ ಸೇತುವೆ ನಿರ್ಮಾಣಕ್ಕೆ ಒಟ್ಟು ₹ 21 ಕೋಟಿ ವೆಚ್ಚವಾಗಿದೆ.
ರಾಜಕಾರಣಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಕಾಮಗಾರಿ ವಿಳಂಬವಾಗಿದೆ. ಲೋಕೋಪಯೋಗಿ ಇಲಾಖೆ ಸಕಾಲದಲ್ಲಿ ಬಿಲ್ ಬಿಡುಗಡೆ ಮಾಡದ ಕಾರಣ ಗುತ್ತಿಗೆದಾರ ಬೇರಿಂಗ್ ಅಳವಡಿಸದೇ ಸೇತುವೆ ಕಂಬದ ಮೇಲೆ ಪಾತ್ ಅಳವಡಿಸಿದ್ದರು. ನಿರ್ಮಾಣ ಹಂತದಲ್ಲಿ ಇರುವಾಗಲೇ 2020ರಲ್ಲಿ ಕೃಷ್ಣೆಗೆ ಮಹಾಪುರ ಬಂದು ಪಾತ್ ನೀರಿನಲ್ಲಿ ಕೊಚ್ಚಿಹೋಗಿತ್ತು.
ಮೊದಲಿನ ಗುತ್ತಿಗೆದಾರರು ಚೆನ್ನಾಗಿಯೇ ಕೆಲಸ ಮಾಡಿದ್ದಾರೆ. ಮೂಲ ಗುತ್ತಿಗೆದಾರರ ಬಾಕಿ ಹಣ ₹ 2 ಕೋಟಿ ತಡೆ ಹಿಡಿಯಲಾಗಿದೆ. ರಾಜಕಾರಣಿಗಳ ಒತ್ತಡಕ್ಕೆ ಒಳಗಾಗಿ ಉಪ ಗುತ್ತಿಗೆದಾರರೊಬ್ಬರಿಗೆ ಕಾಮಗಾರಿ ವಹಿಸಿಕೊಡಲಾಗಿದೆ. ಹಿಂದಿನ ಜಿಲ್ಲಾಧಿಕಾರಿ ಚಂದ್ರಶೇಖರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ರಾಜಕೀಯ ಒತ್ತಡಕ್ಕೆ ಒಳಗಾಗಿ ಅವರು ಸಹ ಏನೂ ಮಾಡಲಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.
‘ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಕೆಲವು ರೈತರು ಹಣ ಪಡೆದಿಲ್ಲ. ಒಬ್ಬ ಭೂಮಾಲೀಕರು ಇನ್ನೂ ಹೆಚ್ಚಿನ ಪರಿಹಾರ ಕೇಳುತ್ತಿದ್ದಾರೆ. ಒಬ್ಬ ಭೂಮಾಲೀಕ ಮೃತಪಟ್ಟಿರುವ ಕಾರಣ ಅವರ ಮಕ್ಕಳು ಪರಿಹಾರ ಕೇಳುತ್ತಿದ್ದಾರೆ. ಅಷ್ಟೇ ಅಲ್ಲ, ಭೂಮಿ ಮೂಲ ಮಾಲೀಕರ ಮಕ್ಕಳ ಹೆಸರಿಗೆ ನೋಂದಣಿಯಾಗಿಲ್ಲ. ಈ ಎಲ್ಲ ತಾಂತ್ರಿಕ ಸಮಸ್ಯೆಗಳಿಂದಾಗಿ ರಸ್ತೆ ನಿರ್ಮಾಣವಾಗಿಲ್ಲ’ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ ಸಮಜಾಯಿಷಿ ನೀಡುತ್ತಾರೆ.
ಕೃಷ್ಣಾ ನದಿ ಆಚಗೆ ಇರುವ ಮಂದಿಪಲ ನಡುಗಡ್ಡೆಯಲ್ಲಿ 1,200 ಜನ ವಾಸವಾಗಿದ್ದಾರೆ. ಸುಮಾರು 500 ಎಕರೆ ಕೃಷಿ ಜಮೀನು ಇದೆ. ನಿರೀಕ್ಷೆಯಂತೆ ಸೇತುವೆ ಕಾಮಗಾರಿ ಪೂರ್ಣಗೊಳಿಸದ ಕಾರಣ ನಡುಗಡ್ಡೆ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲ್ಲಿ ಜನರ ಸಮಸ್ಯೆ ಕೇಳುವವರೇ ಇಲ್ಲವಾಗಿದ್ದಾರೆ ಎಂದು ನದಿ ತೀರದಲ್ಲಿ ಹೊಲಗಳನ್ನು ಹೊಂದಿರುವ ಡೊಂಗರಾಂಪುರ ಹಾಗೂ ಕುರ್ವಕುಂದ ಗ್ರಾಮಸ್ಥರು ಹೇಳುತ್ತಾರೆ.
‘ಬೇಸಿಗೆಯಲ್ಲಿ ಹೇಗೋ ನಡೆದುಕೊಂಡು ಹೋಗುತ್ತೇವೆ. ಸೇತುವೆ ನಿರ್ಮಿಸಿದರೂ ಎರಡೂ ಬದಿಗೆ ರಸ್ತೆಯನ್ನೇ ನಿರ್ಮಿಸಿಲ್ಲ. ಮಳೆಗಾಲದಲ್ಲಿ ಕೆಸರಲ್ಲಿ ಗ್ರಾಮಕ್ಕೆ ಹೋಗಿ ಬರುವುದು ಹೇಗೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ’ ಎಂದು ಕುರ್ವಕುಂದ ಗ್ರಾಮದ ವಿಜಯಕುಮಾರ ಹೇಳುತ್ತಾರೆ.
ಕಾಮಗಾರಿ ಮುಗಿದರೂ ಸಂಚಾರಕ್ಕೆ ಮುಕ್ತಗೊಳ್ಳದ ಸೇತುವೆ ಪ್ರವಾಹದಿಂದಾಗಿ ನದಿಯಲ್ಲಿ ಬಿದ್ದಿರುವ ಸೇತುವೆ ಅವಶೇಷ ಅಧಿಕಾರಿಗಳ ಕಾರ್ಯವೈಖರಿಗೆ ಬೇಸತ್ತಿರುವ ಗ್ರಾಮಸ್ಥರು
ಕಾಮಗಾರಿ ಪೂರ್ಣಗೊಳಿಸಲು ಅನುದಾನ ಕೊರತೆ ಇಲ್ಲ. ರಾಯಚೂರು ಜಿಲ್ಲಾಧಿಕಾರಿ ಖಾತೆಯಲ್ಲಿ ಹಣ ಇದ್ದರೂ ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ.ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಂಗನಾಥ ಪೊಲೀಸ್‌ಪಾಟೀಲ
ನದಿ ದಡದಲ್ಲಿರುವ ಗ್ರಾಮಸ್ಥರ ಅನುಕೂಲಕ್ಕೆ ಸೇತುವೆ ನಿರ್ಮಿಸಲು ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಆದರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಿಲ್ಲ. ಇಂತಹ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ‘ಸೇತುವೆಗಳ ಕಥೆ–ವ್ಯಥೆ’ ಸರಣಿ ಇಂದಿನಿಂದ ಪ್ರಕಟಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.