
ಸಿಂಧನೂರು: ತಾಲ್ಲೂಕಿನ ಸೋಮಲಾಪುರ ಗ್ರಾಮದ ಸಮೀಪದ ಸಿದ್ಧಪರ್ವತ ಅಂಬಾಮಠದ ಅಂಬಾದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಜ.3ರ ಬನದ ಹುಣ್ಣಿಮೆಯಂದು ಮಹಾರಥೋತ್ಸವ ಅತ್ಯಂತ ವೈಭವಪೂರಿತವಾಗಿ ಜರುಗಲಿದೆ. ಇದಕ್ಕಾಗಿ ಭರದ ಸಿದ್ಧತೆಗಳು ನಡೆದಿವೆ.
ಜ.2 ರಂದು ಜಾತ್ರಾಮಹೋತ್ಸವ ವಿದ್ಯುಕ್ತವಾಗಿ ಆರಂಭಗೊಳ್ಳಲಿದ್ದು 6 ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಜಾತ್ರಾ ಮಹೋತ್ಸವಕ್ಕೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಿಂದ ಸುಮಾರು ನಾಲ್ಕೈದು ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿರುವ ಹಿನ್ನೆಲೆಯಲ್ಲಿ ಸಕಲ ಮೂಲಸೌಕರ್ಯ ಸೇರಿದಂತೆ ಅಗತ್ಯ ಅನುಕೂಲ ಕಲ್ಪಿಸಲು ತಾಲ್ಲೂಕಾಡಳಿತ ಮತ್ತು ಜಿಲ್ಲಾಡಳಿತ ಒಂದು ತಿಂಗಳ ಮುಂಚಿತದಿಂದಲೇ ಕಾರ್ಯಪ್ರವೃತ್ತವಾಗಿವೆ.
ಜ.3 ರಂದು ಮಹಾರಥೋತ್ಸವ ಜರುಗಲಿದ್ದು ಮಹಾರಥಬೀದಿ ನಿರ್ಮಿಸಲಾಗಿದೆ. ಜನದಟ್ಟಣೆಯಾಗದಿರಲಿ ಎಂದು ಬೃಹತ್ತಾದ ಮಹಾರಥಬೀದಿ ನಿರ್ಮಿಸಲಾಗಿದೆ. ಜಾತ್ರೆ ಹಾಗೂ ರಥೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನ ಆವರಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಅಂದ-ಚೆಂದ ಹೆಚ್ಚಿಸಲು ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ.
ಚತುಷ್ಪಥ ರಸ್ತೆ, ಭಕ್ತರಿಗೆ ಮೂಲಸೌಕರ್ಯ: ವಾಹನಗಳ ಸುಗಮ ಸಂಚಾರಕ್ಕಾಗಿ ಗೊಬ್ಬರಕಲ್ ಕ್ರಾಸ್‍ನಿಂದ ದೇವಸ್ಥಾನದವರೆಗೆ ಚತುಷ್ಪಥ ರಸ್ತೆ ನಿರ್ಮಿಸಲಾಗಿದೆ. 5 ಕಡೆ ಹೈಮಾಸ್ಟ್ ದೀಪ ಅಳವಡಿಸಲಾಗಿದೆ. ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ. 125 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ 8 ಕಡೆ ವಾಹನ ನಿಲುಗಡೆ ಮಾಡಲು ಫಾರ್ಕಿಂಗ್ ವ್ಯವಸ್ಥೆ, 100 ಕಡೆ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ, ಮಹಿಳೆಯರಿಗೆ ವಿಶೇಷವಾಗಿ ಸ್ನಾನಗೃಹ ನಿರ್ಮಾಣ, 8 ಎಕರೆ ಪ್ರದೇಶದಲ್ಲಿ 600 ಅಂಗಡಿಗಳಿಗೆ ಅನುಕೂಲ, ಕಾಲುವೆ ಮೂಲಕ ಕೆರೆಗೆ ನೀರು ತುಂಬಿಸಲಾಗಿದೆ.
ಸಿಎಂ, ಡಿಸಿಎಂ, ಸಚಿವ, ಶಾಸಕರ ದಂಡು: ಅಂಬಾದೇವಿ ಜಾತ್ರಾ ಮಹೋತ್ಸವವನ್ನು ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಜ.3 ರಂದು ನಡೆಯಲಿರುವ ಮಹಾರಥೋತ್ಸವಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದಾರೆ.
ಇವರ ಜತೆ ಸಚಿವರಾದ ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಶಿವರಾಜ ಎಸ್.ತಂಗಡಗಿ, ಡಾ.ಶರಣಪ್ರಕಾಶ ಪಾಟೀಲ ಸೇರಿದಂತೆ ವಿವಿಧ ಇಲಾಖೆಯ ಸಚಿವರು, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿಯ ಜಿಲ್ಲೆಯ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿ ಪ್ರಮುಖ ಗಣ್ಯರನ್ನು ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ₹600 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.
4–5 ಲಕ್ಷ ಭಕ್ತರು ಬರುವ ನಿರೀಕ್ಷೆ ರಥೋತ್ಸವಕ್ಕಾಗಿ ಪ್ರತ್ಯೇಕ ಮಹಾರಥಬೀದಿ ನಿರ್ಮಾಣ ಭಕ್ತರಿಗಾಗಿ ಅಗತ್ಯ ಮೂಲಸೌಕರ್ಯಕ್ಕೆ ಕ್ರಮ
ಈ ಬಾರಿ ಅಂಬಾದೇವಿ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಆರೇಳು ಜನ ಸಚಿವರು ಆಗಮಿಸಿ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ
- ಹಂಪನಗೌಡ ಬಾದರ್ಲಿ ಶಾಸಕ
ಅಂಬಾದೇವಿ ದೇವಸ್ಥಾನದ ನೂತನ ಶಿಲಾಮಂಟಪದ ಕಾರ್ಯ ಅತ್ಯಂತ ವೇಗವಾಗಿ ಸಾಗಿದ್ದು ಜಾತ್ರೆ ವೇಳೆ ಗರ್ಭಗುಡಿ ಪೂರ್ಣಗೊಳಿಸಿ ಛತ್ತು ಹಂತಕ್ಕೆ ನಿರ್ಮಾಣವಾಗಲಿದೆ. ಬಾಕಿ ಉಳಿದ ಕಾಮಗಾರಿ ನಂತರ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು
-ಅರುಣ್ ಎಚ್.ದೇಸಾಯಿ ತಹಶೀಲ್ದಾರ್
ಸಾಂಸ್ಕೃತಿಕ ಕಾರ್ಯಕ್ರಮಗಳು ಜ.2 ರಂದು ಜಾತ್ರಾ ಮಹೋತ್ಸವ ಆರಂಭ ದಿನದಿಂದಲೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಂದು ಸಂಜೆ ಸರಿಗಮಪ ಖ್ಯಾತಿಯ ತಂಡದಿಂದ ಭಕ್ತಿ ಸ್ವರ ಕಾರ್ಯಕ್ರಮ ನಡೆಯಲಿದೆ. ಸಿರಿಗೆರೆ ತಂಡದಿಂದ ನಾಟಕ ನಡೆಯಲಿದೆ. ಜ.4 ರಂದು ಕಡುಬಿನ ಕಾಳಗ ನಡೆಯಲಿದೆ. ಅಂದು ಸಂಜೆ ಹಾಸ್ಯಸಂಜೆ ಏರ್ಪಡಿಸಲಾಗಿದೆ. 5 ರಂದು ಶಂಕರಣ್ಣ ಅವರ ತಂಡದಿಂದ ಜಾನಪದ ಜಾತ್ರೆ ಹಮ್ಮಿಕೊಳ್ಳಲಾಗಿದೆ. 6 ರಂದು ಸ್ಥಳೀಯ ಗಾಯಕರಿಂದ ಕರೋಕೆ ಗಾಯನ ಹಾಗೂ ನಾರಾಯಣಪ್ಪ ಮಾಡಶಿರವಾರ ಅವರಿಂದ ತತ್ವಪದ ಗಾಯನ ಆಯೋಜಿಸಲಾಗಿದೆ. ಪ್ರಾಣಿ ಬಲಿ ನಿಷೇಧ: ಅಂಬಾದೇವಿ ದೇವಸ್ಥಾನ ಆವರಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶ ವ್ಯಾಪ್ತಿಯಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಭಕ್ತರ ಸುರಕ್ಷತೆ ಭದ್ರತೆ ಹಿತದೃಷ್ಟಿಯಿಂದ ಪೊಲೀಸ್ ಬಂದೋಬಸ್ತ್ ನಿಯೋಜನೆ ಸೇರಿದಂತೆ ಇನ್ನಿತರೆ ಸುರಕ್ಷತಾ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.