ADVERTISEMENT

ಸಿಂಧನೂರು: ಅಂಬಾದೇವಿ ಉತ್ಸವ ಮೂರ್ತಿ ವೈಭವದ ಮೆರವಣಿಗೆ

ಹನ್ನೊಂದು ದಿನಗಳ ಸಿಂಧನೂರು ದಸರಾ ಉತ್ಸವಕ್ಕೆ ತೆರೆ, ಸಡಗರ ಸಂಭ್ರಮದಿಂದ ಜಂಬೂ ಸವಾರಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 7:08 IST
Last Updated 3 ಅಕ್ಟೋಬರ್ 2025, 7:08 IST
ಸಿಂಧನೂರು ದಸರಾ ಉತ್ಸವದ ಕೊನೆಯ ದಿನವಾದ ಗುರುವಾರ ಜಂಬೂ ಸವಾರಿ ಅಂಗವಾಗಿ ಆನೆಯ ಮೇಲೆ ಅಂಬಾರಿಯಲ್ಲಿ ಅಂಬಾದೇವಿಯ ಉತ್ಸವ ಮೂರ್ತಿಯನ್ನು ವೈಭವದಿಂದ ಮೆರವಣಿಗೆ ನಡೆಸಲಾಯಿತು
ಸಿಂಧನೂರು ದಸರಾ ಉತ್ಸವದ ಕೊನೆಯ ದಿನವಾದ ಗುರುವಾರ ಜಂಬೂ ಸವಾರಿ ಅಂಗವಾಗಿ ಆನೆಯ ಮೇಲೆ ಅಂಬಾರಿಯಲ್ಲಿ ಅಂಬಾದೇವಿಯ ಉತ್ಸವ ಮೂರ್ತಿಯನ್ನು ವೈಭವದಿಂದ ಮೆರವಣಿಗೆ ನಡೆಸಲಾಯಿತು   

ಸಿಂಧನೂರು: ದಸರಾ ಉತ್ಸವದ ಕೊನೆ ದಿನವಾದ ಗುರುವಾರ ಜಂಬೂ ಸವಾರಿ ಅಂಗವಾಗಿ ಆನೆಯ ಮೇಲೆ ಅಂಬಾರಿಯಲ್ಲಿ ಈ ಭಾಗದ ಅಧಿದೇವತೆ ಸಿದ್ದಪರ್ವತ ಅಂಬಾಮಠದ ಅಂಬಾದೇವಿಯ ಉತ್ಸವ ಮೂರ್ತಿ ಮೆರವಣಿಗೆ ವೈಭವದಿಂದ ನಡೆಸಲಾಯಿತು.

ಸಂಜೆ 5.30 ಗಂಟೆಗೆ ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿರುವ ಗಾಂಧಿ ವೃತ್ತದಲ್ಲಿ ಅಲಂಕೃತಗೊಂಡಿದ್ದ ಆನೆಯ ಮೇಲಿನ ಅಂಬಾರಿಯಲ್ಲಿದ್ದ ಅಂಬಾದೇವಿ ಮೂರ್ತಿಗೆ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಮತ್ತಿತರ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಸಿಂಧನೂರು ಜಂಬೂ ಸವಾರಿಗೆ ಚಾಲನೆ ನೀಡಿದರು.

ಅಲಬನೂರು ಅಮರಯ್ಯ ಸ್ವಾಮಿ ಪೂಜೆ ಸಲ್ಲಿಸಿದರು. ನೂರಾರು ಮಹಿಳೆಯರು ಕುಂಭ-ಕಳಸಗಳನ್ನು ಹಿಡಿದು, ವೀರಗಾಸೆ ನೃತ್ಯ, ಹಲಗೆ ಮೇಳ, ಚಿಲಿಪಿಲಿಗೊಂಬೆ, ಕೀಲು ಕುದುರೆ, ಲಂಬಾಣಿ ನೃತ್ಯ, ಡೊಳ್ಳಿನ ವಾದ್ಯಮೇಳಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.

ADVERTISEMENT

ಅಂಬಾಮಠದ ಅಂಬಾದೇವಿ ದೇವಸ್ಥಾನದ ನೂತನ ವಿನ್ಯಾಸದ ಕಲಾಕೃತಿ, ಸಿಂಹದ ಮೇಲೆ ಕುಳಿತ ಅಂಬಾದೇವಿ ಮೂರ್ತಿ, ಕಾಳಿ ಮಾತೆ, ಬಸವಣ್ಣ, ಅಲ್ಲಮಪ್ರಭು, ಹಡಪದ ಅಪ್ಪಣ್ಣ, ಸರ್ವಜ್ಞ, ಅಕ್ಕಮಹಾದೇವಿ, ಬ್ರಹ್ಮಕುಮಾರ ಈಶ್ವರಿ ವಿದ್ಯಾಲಯದ ಶಿವಲಿಂಗ ಸೇರಿದಂತೆ ವಿವಿಧ ದಾರ್ಶನಿಕರ ಸ್ತಬ್ಧಚಿತ್ರಗಳು ಆಕರ್ಷಣಿಯವಾಗಿದ್ದವು.

ಅಂಬಾರಿಯಲ್ಲಿ ಅಂಬಾದೇವಿ ಮೂರ್ತಿಯನ್ನು ಹೊತ್ತಿದ್ದ ಜಂಬೂ ಸವಾರಿ ಮಹಾತ್ಮಗಾಂಧಿ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ, ನಟರಾಜ್ ಕಾಲೊನಿ ರಸ್ತೆ, ಟಿಪ್ಪುಸುಲ್ತಾನ್ ಸರ್ಕಲ್, ಬಡಿಬೇಸ್, ಹಳೆಬಜಾರ್ ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮೂಲಕ ಕನಕದಾಸ ವೃತ್ತದವರೆಗೆ ಸಾಗಿ ಬಂದಿತು.

ಇದೇ ವೇಳೆ ಸುಕಾಲಪೇಟೆ ರಸ್ತೆಯಲ್ಲಿರುವ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ತಹಶೀಲ್ದಾರ್ ಅರುಣ ಎಚ್.ದೇಸಾಯಿ ಅವರು ಬನ್ನಿಮಹಾಂಕಾಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಬನ್ನಿ ಹರಿದುಕೊಂಡು ಬಂದ ಭಕ್ತರ ತಂಡ ಪನಃ ಜಂಬೂ ಸವಾರಿ ಮೆರವಣಿಗೆಯೊಂದಿಗೆ ತಹಶೀಲ್ದಾರ್ ಕಚೇರಿಯನ್ನು ತಲುಪಿತು. ಈ ಮೆರವಣಿಗೆಯಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ವಿವಿಧ ಪಕ್ಷಗಳ, ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

ಲಿಂಗಸುಗೂರು ಉಪವಿಭಾಗಾಧಿಕಾರಿ ಬಸವಣ್ಣಪ್ಪ ಕಲಶೆಟ್ಟಿ, ನಗರಸಭೆ ಅಧ್ಯಕ್ಷೆ ಮಂಜುಳಾ ಪ್ರಭುರಾಜ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ಡಿವೈಎಸ್‍ಪಿ ಬಿ.ಎಸ್.ತಳವಾರ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ದಸರಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ಮುಖಂಡರಾದ ಪಂಪನಗೌಡ ಬಾದರ್ಲಿ, ಬಸವರಾಜ ಹಿರೇಗೌಡರ್, ಆರ್.ಸಿ.ಪಾಟೀಲ, ಎನ್.ಅಮರೇಶ, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷ ಶ್ರೀದೇವಿ ಶ್ರೀನಿವಾಸ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.