ADVERTISEMENT

ದೃಶ್ಯಕಲೆಯ ಸಾಧಕಿ ಉಮಾವತಿ

ಬಸವರಾಜ ಬೋಗಾವತಿ
Published 7 ಮಾರ್ಚ್ 2020, 19:30 IST
Last Updated 7 ಮಾರ್ಚ್ 2020, 19:30 IST
ಉಮಾವತಿ
ಉಮಾವತಿ   

ಮಾನ್ವಿ: ಪಟ್ಟಣದ ಕೋನಾಪುರಪೇಟೆಯ ಚಿತ್ರಕಲಾ ಶಿಕ್ಷಕಿ ಉಮಾವತಿ ಕಲೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ರಾಜ್ಯಮಟ್ಟದ ಅನೇಕ ಚಿತ್ರಕಲಾ ಶಿಬಿರ ಹಾಗೂ ಪ್ರದರ್ಶನಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿರುವ ಇವರು, ಜಿಲ್ಲೆಯಲ್ಲಿರುವ ಬೆರಳೆಣಿಕೆಯ ಮಹಿಳಾ ಕಲಾವಿದರಲ್ಲಿ ಒಬ್ಬರು.

ಚಿತ್ರಕಲೆಯ ವಿವಿಧ ಪ್ರಕಾರಗಳಲ್ಲಿ ನೈಪುಣ್ಯತೆ ಹೊಂದಿರುವ ಉಮಾವತಿ, ದೃಶ್ಯಕಲಾ ವಿಭಾಗದಲ್ಲಿ ಬಿವಿಎ ಪದವಿ ಹಾಗೂ ಎಂವಿಎ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿದ್ದಾರೆ.

2004-05ರಿಂದ ನಿರಂತರವಾಗಿ ರಾಜ್ಯಮಟ್ಟದ ಹಲವು ಚಿತ್ರಕಲಾ ಶಿಬಿರ ಹಾಗೂ ಪ್ರದರ್ಶನಗಳಲ್ಲಿ ಇವರು ಭಾಗವಹಿಸಿದ್ದಾರೆ. ಹಂಪಿ ವಿಶ್ವವಿದ್ಯಾಲಯದ ‘ನಮ್ಮ ಹಬ್ಬ’, ಹಂಪಿ ಉತ್ಸವ, ಸುವರ್ಣ ಕರ್ನಾಟಕ ರಾತ್ಯೋತ್ಸವದ ಪ್ರಯುಕ್ತ ಹಂಪಿ ವಿಶ್ವವಿದ್ಯಾಲಯದ ಶಿಲ್ಪಕಲೆ ಹಾಗೂ ಚಿತ್ರಕಲಾ ವಿಭಾಗದಿಂದ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನ, ಮೈಸೂರಿನಲ್ಲಿ ಒಡನಾಡಿ ಸಂಸ್ಥೆ, ಬೆಳಗಾವಿಯಲ್ಲಿ ನಡೆದ ಜಾನಪದ ಉತ್ಸವ, ಮಲೆನಾಡು ಚಿತ್ರಕಲಾ ಶಿಬಿರ, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಚಿತ್ರಸಂತೆ, ಬದಾಮಿಯ ಶ್ರೀಲಕ್ಷ್ಮಣ ಪರಿಸರ ಸೇವಾ ಸಂಸ್ಥೆ, ಕರ್ನಾಟಕ ಲಲಿತಾಕಲಾ ಅಕಾಡೆಮಿಯ ಸುವರ್ಣ ಕಲಾ ಸಂಚಾರ ಹಾಗೂ ಕಲಬುರಗಿ ನಗರಗಳಲ್ಲಿ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನ ಹಾಗೂ ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಇವರು ರಚಿಸಿದ ಕಲಾಕೃತಿಗಳು ನಾಡಿನ ಹಿರಿಯ ಕಲಾವಿದರು ಹಾಗೂ ಕಲಾಪ್ರೇಮಿಗಳ ಮೆಚ್ಚುಗೆ ಗಳಿಸಿವೆ. ಇವರ ಚಿತ್ರಕಲಾ ಸಾಧನೆಗಾಗಿ 2019ರಲ್ಲಿ ರಾಯಚೂರಿನ ಮ್ಯಾದಾರ್ ಪ್ರತಿಷ್ಠಾನ ‘ಯುವ ಚಿತ್ರಕಲಾವಿದೆ’ ಪ್ರಶಸ್ತಿ ನೀಡಿ ಗೌರವಿಸಿದೆ.

ADVERTISEMENT

‘ಚಿತ್ರಕಲೆಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಸಾಧ್ಯ. ಪ್ರತಿಯೊಂದು ಕಲಾಕೃತಿ ಆಕರ್ಷಣೆಯ ಜತೆಗೆ ಒಳ್ಳೆಯ ಸಂದೇಶ ನೀಡುವುದರಲ್ಲಿ ಕಲಾವಿದರ ಕಲಾ ನೈಪುಣ್ಯತೆ ಹಾಗೂ ಪ್ರತಿಭೆ ಅಡಗಿರುತ್ತದೆ’ ಎಂಬುದು ಉಮಾವತಿ ಅವರ ಅಭಿಪ್ರಾಯ.

ಪ್ರಸ್ತುತ ಮಾನ್ವಿಯ ಬಿವಿಆರ್ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಉಮಾವತಿ, ಮಕ್ಕಳಲ್ಲಿ ಚಿತ್ರಕಲೆಯ ಕುರಿತು ಆಸಕ್ತಿ ಹೆಚ್ಚಿಸಲು ಚಿತ್ರಕಲಾ ತರಬೇತಿ ಶಿಬಿರ ಹಾಗೂ ಕಲಾಕೃತಿಗಳ ಪ್ರದರ್ಶನ ಕಾರ್ಯಕ್ರಮಗಳನ್ನು ಮಾನ್ವಿ ಪಟ್ಟಣದಲ್ಲಿ ಆಯೋಜಿಸುವ ಉದ್ದೇಶ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.