
ಲಿಂಗಸುಗೂರು-ಗುಡದನಾಳ-ಹಟ್ಟಿ ಹದಗೆಟ್ಟ ರಸ್ತೆ
ಲಿಂಗಸುಗೂರು: ಗುಡದನಾಳ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಗುಂಡಿಮಯವಾಗಿದೆ. ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ.
ಲಿಂಗಸುಗೂರು-ಗುಡದನಾಳ-ಹಟ್ಟಿ ಪಟ್ಟಣಗಳ ನಡುವಿನ ಸಂಪರ್ಕ ರಸ್ತೆ 16 ಕಿ.ಮೀ ಇದೆ. ಹಟ್ಟಿಯಿಂದ ಗುಡದನಾಳ 8 ಕಿ.ಮೀ. ದೂರವಿದ್ದರೆ, ಗುಡದನಾಳದಿಂದ ಲಿಂಗಸುಗೂರಿಗೆ 8 ಕಿ.ಮೀ. ಅಂತರವಿದೆ. ಹಟ್ಟಿ ಪಟ್ಟಣದಿಂದ ನಗರ ಪ್ರದೇಶಗಳಿಗೆ ತೆರಳಲು ಲಿಂಗಸುಗೂರು ಮೂಲಕ ಪ್ರಯಾಣಿಸಲು ಅನುಕೂಲವಿದೆ. ಹಟ್ಟಿಗೆ ತೆರಳಲು ಸಮೀಪದ ರಸ್ತೆ ಇದಾಗಿದೆ. ಆದರೆ ಹದಗೆಟ್ಟ ರಸ್ತೆಯಿಂದಾಗಿ ಸಂಚಾರಕ್ಕೆ ಸಂಚಕಾರ ಬಂದೊದಗಿದೆ.
2013ರಲ್ಲಿ ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಯ 2ನೇ ಹಂತದಲ್ಲಿ ಲಿಂಗಸುಗೂರು–ಗುಡದನಾಳ ನಡುವಿನ 8 ಕಿ.ಮೀ. ರಸ್ತೆಯನ್ನು ₹3.46 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗಿತ್ತು. ಕ್ರಮೇಣ ನಿರ್ವಹಣೆ ಕೊರತೆಯಿಂದ ರಸ್ತೆ ಹದಗೆಟ್ಟಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಅದರ ಅಭಿವೃದ್ಧಿ ಬಗ್ಗೆ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ರಸ್ತೆ ಅಧೋಗತಿಗೆ ತಲುಪಿದೆ.
ರಸ್ತೆ ಹಾಳಾಗಿ 8 ವರ್ಷಗಳಾಗಿದ್ದು, ಜೀವ ಕೈಯಲ್ಲಿ ಹಿಡಿದು ವಾಹನ ಚಾಲನೆ ಮಾಡ ಬೇಕಿದೆ. ಮಳೆ ಬಂದರೆ ರಸ್ತೆ, ಗುಂಡಿಗಳು ಯಾವುವು ಎಂಬುದು ತಿಳಿಯದಂತಾಗಿ ಬೈಕ್ ಸವಾರರು ಅಪಘಾತಕ್ಕೀಡಾದ ಉದಾಹರಣೆಗಳಿವೆ. ಒಟ್ಟಿನಲ್ಲಿ 16 ಕಿ.ಮೀ. ವ್ಯಾಪ್ತಿಯ ರಸ್ತೆ ಸಂರ್ಪೂಣ ಹದಗೆಟ್ಟು ಹೋಗಿದೆ. ಅದರಲ್ಲಿ ಗುಡದನಾಳದಿಂದ ಲಿಂಗಸುಗೂರುವರೆಗೆ ವಾಹನ ಸವಾರರು ತೆರಳಬೇಕಾದರೆ ಆಡಳಿತ ವರ್ಗಕ್ಕೆ ಹಿಡಿ ಶಾಪ ಹಾಕುತ್ತಲೇ ಸಂಚಾರ ಮಾಡುವ ದುಃಸ್ಥಿತಿ ಇದೆ.
4 ಕಿ.ಮೀ ರಸ್ತೆಗೆ ಅಭಿವೃದ್ಧಿ ಯೋಗ: 16 ಕಿ.ಮೀ ರಸ್ತೆ ಹದಗೆಟ್ಟಿದ್ದರೆ, 4 ಕಿ.ಮೀ ರಸ್ತೆ ಗೆ ಮಾತ್ರ ಅಭಿವೃದ್ಧಿಗೆ ಯೋಗ ಬಂದಿದೆ. ₹ 3 ಕೋಟಿ ಅನುದಾನ ಒದಗಿಸಿ ಶಾಸಕ ಮಾನಪ್ಪ ವಜ್ಜಲ ಅವರು, 2025 ಏಪ್ರಿಲ್ 21ರಂದು ಚಾಲನೆ ನೀಡಿದ್ದು, ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ. 16 ಕಿ.ಮೀ. ಒಟ್ಟಿಗೆ ಅಭಿವೃದ್ಧಿ ಮಾಡಿದ್ದರೆ ವಾಹನ ಸವಾರರು ನಿರಾಳರಾಗುತ್ತಿದ್ದರು. ಆದರೆ ಇನ್ನುಳಿದ 12 ಕಿ.ಮೀ ಹದಗೆಟ್ಟ ರಸ್ತೆಯಲ್ಲಿ ತಿರುಗಾಡಬೇಕಾಗುತ್ತಿದೆ. ಈ 12 ಕಿ.ಮೀ ರಸ್ತೆ ಅಭಿವೃದ್ಧಿ ಮಾಡಿಸುವರಷ್ಟರಲ್ಲಿ ಈಗ ಅಭಿವೃದ್ಧಿ ಮಾಡುತ್ತಿರುವ 4 ಕಿ.ಮೀ ರಸ್ತೆ ಹಾಳಾ ಗುತ್ತಿದೆ. ಒಟ್ಟಿನಲ್ಲಿ ಹದಗೆಟ್ಟ ರಸ್ತೆಯಲ್ಲಿಯೇ ವಾಹನ ಸವಾರರು ಸಂಚರಿಸಬೇಕಾಗುತ್ತದೆ.
ಗುಡದನಾಳ–ಲಿಂಗಸುಗೂರು 4 ಕಿ.ಮೀ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಇನ್ನುಳಿದ ರಸ್ತೆ ಅಭಿವೃದ್ಧಿಗೆ ಎಡಿಎಂ ಅನುಮೂದನೆ ದೊರಕಿದ ಕೂಡಲೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ.–ಜ್ಯೋತಿಪ್ರಕಾಶ, ಎಇಇ ಪಿಡಬ್ಲೂಡಿ ಲಿಂಗಸುಗೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.