ADVERTISEMENT

ವಿಶ್ವದ ಅಭಿವೃದ್ಧಿಗೆ ಬಸವಣ್ಣರಿಂದ ನಾಂದಿ: ವೆಂಕಟೇಶ ಬೇವಿನಬೆಂಚಿ

​ಪ್ರಜಾವಾಣಿ ವಾರ್ತೆ
Published 7 ಮೇ 2019, 13:34 IST
Last Updated 7 ಮೇ 2019, 13:34 IST
ರಾಯಚೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಬಿ.ಜ್ಞಾನರಾಜ ಮಾತನಾಡಿದರು
ರಾಯಚೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಬಿ.ಜ್ಞಾನರಾಜ ಮಾತನಾಡಿದರು   

ರಾಯಚೂರು: 12ನೇ ಶತಮಾನದಲ್ಲಿ ವಚನಗಳ ಮೂಲಕ ಸಮಾನತೆ ಎತ್ತಿಹಿಡಿದು ಬಸವಣ್ಣನವರು ವಿಶ್ವದ ಅಭಿವೃದ್ಧಿಗೆ ನಾಂದಿ ಹಾಡಿದರು ಎಂದು ಆಕಾಶವಾಣಿ ಕೇಂದ್ರ ಪ್ರಸಾರ ನಿರ್ವಾಹಕ ವೆಂಕಟೇಶ ಬೇವಿನಬೆಂಚಿ ಹೇಳಿದರು.

ಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಟರ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಜಗಜ್ಯೋತಿ ಬಸವಣ್ಣರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾನವನ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ವ್ಯಕ್ತಿಗಳಲ್ಲಿ ಬಸವಣ್ಣನವರು ಒಬ್ಬರಾಗಿದ್ದು, ಸಮಾಜದಲ್ಲಿ ಜಾತಿ ವ್ಯವಸ್ಥೆಯನ್ನು ಖಂಡಿಸಿ ಸಮಾಜದ ಏಳಿಗೆಗಾಗಿ ಜೀವನವನ್ನು ಮುಡುಪಾಗಿಸಿದ್ದಾರೆ ಎಂದು ತಿಳಿಸಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಬಿ.ಜ್ಞಾನರಾಜ ಮಾತನಾಡಿ, ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಬಸವಣ್ಣನವರು ಬಹಳಷ್ಟು ಶ್ರಮಪಟ್ಟಿದ್ದಾರೆ. ಮೌಢ್ಯ ಆಚರಣೆಗಳನ್ನು ವಿರೋಧಿಸಿ ಕಾಯಕವೇ ಕೈಲಾಸ ಎಂಬ ಅದ್ಭುತವಾದ ಸಂದೇಶ ಸಾರಿದ್ದಾರೆ. ಕ್ರಾಂತಿಕಾರಿ ವಿಚಾರಗಳ ಮೂಲಕ ಅನುಭವ ಮಂಟಪ ನಿರ್ಮಿಸಿ ಎಲ್ಲ ಜಾತಿಯ ವಚನಕಾರರನ್ನು ಒಂದೇ ಕಡೆ ಸೇರಿಸಿದ್ದರು. ಅವರನ್ನು ಒಂದೇ ಜಾತಿಗೆ ಸೀಮಿತ ಮಾಡಬಾರದು ಎಂದರು.

ಬಸವಣ್ಣನವರ ಸಂದೇಶಗಳು ಮನುಕುಲ ಅಭಿವೃದ್ದಿ ಪಥದಲ್ಲಿ ಸಾಗಲು ಅನುಕೂಲವಾಗಿವೆ. ಜಯಂತಿ ಆಚರಣೆ ಮಾಡಿದರೆ ಸಾಲದು, ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಎಎಸ್‍ಐ ಚಂದ್ರಶೇಖರ್, ಪ್ರಥಮ ದರ್ಜೆ ಸಹಾಯಕಿ ಸರಸ್ವತಿ, ಎನ್.ಬಸವರಾಜ, ಎಚ್‌.ಮಲ್ಲಿಕಾರ್ಜುನ, ವೀರಭದ್ರ, ವರದರಾಜ ಕುಲಕರ್ಣಿ, ಬಸವಲಿಂಗಯ್ಯಸ್ವಾಮಿ, ಆರ್.ನರೇಂದ್ರ, ಸಿದ್ಧಾರೂಡ, ವೈ.ಟಿ.ಮಹೇಶ, ನರಸಿಂಹಲು, ಸಿ.ತಿಮ್ಮಪ್ಪ, ರಾಮು ಇದ್ದರು. ಎಂ.ಚಂದ್ರಶೇಖರ್ ಸ್ವಾಗತಿಸಿದರು, ಶಿವಪ್ಪ ಮಣಿಗಿರಿ ವಂದಿಸಿದರು. ವೀರೇಶ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.