ಸಿಂಧನೂರು: ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹ 4.95 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ18 ರಷ್ಟು ಲಾಭಾಂಶ ಘೋಷಣೆ ಮಾಡಲಾಗಿದೆ ಎಂದು ಸಹಕಾರಿಯ ಅಧ್ಯಕ್ಷ ಹಾಗೂ ಶಾಸಕರೂ ಆದ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಕಚೇರಿಯಲ್ಲಿ ಭಾನುವಾರ ನಡೆದ 29ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದ ಪರಿಶ್ರಮದಿಂದ ನಿರೀಕ್ಷೆಗೂ ಮೀರಿ ಲಾಭ ಗಳಿಸಿದೆ. ಸಹಕಾರಿ ಸಂಘಗಳ ಬೆಳವಣಿಗೆ ಆಗಬೇಕಾದರೆ ಸಾಲ ಪಡೆದವರು ಸಕಾಲದಲ್ಲಿ ಸಾಲದ ಕಂತುಗಳನ್ನು ಪಾವತಿಸಬೇಕು ಎಂದರು.
‘ಸಹಕಾರಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಸರ್ಕಾರದಿಂದ ಆಡಿಟ್ ಮಾಡಿಸುವುದು. ಸಹಕಾರ ಸಂಸ್ಥೆಗಳಲ್ಲಿ ಹಣ ಠೇವಣಿ ಇಡುವುದು. ಆಡಳಿತ ಮಂಡಳಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಜಾರಿ ತರುವ ಪ್ರಯತ್ನ ಮಾಡುತ್ತಿದೆ. ಆಡಳಿತ ಪಕ್ಷದ ಶಾಸಕನಾಗಿ ಇದರ ವಿರುದ್ದ ಅನೇಕ ಬಾರಿ ಧ್ವನಿ ಎತ್ತಿದ್ದೇನೆ. ಸರ್ಕಾರದ ಹಸ್ತಕ್ಷೇಪ ಕಡಿಮೆ ಮಾಡಲು ಸಂಘಟಿತ ಹೋರಾಟ ಅಗತ್ಯವಾಗಿದೆ’ ಎಂದು ಹೇಳಿದರು.
ಸಹಕಾರಿಯ ಉಪಾಧ್ಯಕ್ಷ ರಾಘಣ್ಣ ಇ, ನಿರ್ದೇಶಕರಾದ ಪಂಪನಗೌಡ ಬಾದರ್ಲಿ, ಮೆಹಬೂಬ್‍ಸಾಬ್ ಮುಳ್ಳೂರು, ಸಿಂಹಾದ್ರಿ ಸತ್ಯನಾರಾಯಣ, ಶರಣೇಗೌಡ ಮಾಲಿ ಪಾಟೀಲ್, ವಿಶಾಲಾಕ್ಷಿ ಗೋನವಾರ, ರೇಖಾ ಅಮರೇಗೌಡ, ಶ್ರೇಣಿಕರಾಜ್ ಜೈನ್, ಪಂಪನಗೌಡ ಎಲೆಕೂಡ್ಲಗಿ, ರಾಜಶೇಖರ ಪಾಟೀಲ, ಹನುಮಂತ ತಿಪ್ಪನಹಟ್ಟಿ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪಂಪನಗೌಡ ಮಾಲಿ ಪಾಟೀಲ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.