ರಾಯಚೂರು: ತಾಲ್ಲೂಕಿನ ರಾಯಚೂರು–ಜಂಬಲದಿನ್ನಿ ಮಾರ್ಗದಲ್ಲಿರುವ ಬಿಜನಗೇರಾ ಗ್ರಾಮದ ಹಳೆಯ ಆಂಜನೇಯ ದೇಗುಲದ ಜೀರ್ಣೋದ್ಧಾರಕ್ಕೆ 60 ವರ್ಷದ ಭಿಕ್ಷುಕಿ ರಂಗಮ್ಮ ಅವರು ₹1.83 ಲಕ್ಷ ದೇಣಿಗೆ ನೀಡಿದ್ದಾರೆ.
35 ವರ್ಷದ ಹಿಂದೆ ಆಂಧ್ರಪ್ರದೇಶದಿಂದ ಗ್ರಾಮಕ್ಕೆ ಬಂದಿರುವ ರಂಗಮ್ಮ ಅವರಿಗೆ ತೆಲುಗು ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ಮೊದಲು ವಾಸವಿದ್ದ ಹಳೆಯ ಮನೆ ತೆರವುಗೊಳಿಸುವಾಗ ಗೋಣಿ ಚೀಲದಲ್ಲಿ ಹಣ ಇದ್ದುದು ಕಂಡುಬಂದಿತ್ತು. ವಿಚಾರಿಸಿದಾಗ ದೇವಸ್ಥಾನಕ್ಕೆ ಕೊಡುವುದಾಗಿ ಹೇಳಿದ್ದರು ಎನ್ನಲಾಗಿದೆ.
‘ಗ್ರಾಮದ ಮುಖಂಡರೆಲ್ಲ ಸೇರಿ ರಂಗಮ್ಮ ಚೀಲದಲ್ಲಿ ಇಟ್ಟಿದ್ದ ಹಣ ಎಣಿಕೆ ಮಾಡಿದಾಗ ₹1.83 ಲಕ್ಷ ಇರುವುದು ಗೊತ್ತಾಗಿದೆ. ಗ್ರಾಮಸ್ಥರು ಭಿಕ್ಷುಕಿಗಾಗಿ ಚಿಕ್ಕದಾದ ಟಿನ್‌ಶೀಟ್ ಶೆಡ್ ಕಟ್ಟಿಸಿಕೊಟ್ಟಿದ್ದಾರೆ. ಅವರ ಒಪ್ಪಿಗೆಯಂತೆ ಉಳಿದ ಹಣವನ್ನು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಳಸಿದ್ದೇವೆ’ ಎಂದು ಆಂಜನೇಯಸ್ವಾಮಿ ದೇವಸ್ಥಾನ ಸೇವಾ ಸಮಿತಿ ಕಾರ್ಯದರ್ಶಿ ಬಸವರಾಜ ಯಾದವ ತಿಳಿಸಿದರು.
‘ರಂಗಮ್ಮ ಭಿಕ್ಷೆ ಸಿಕ್ಕ ಹಣವನ್ನು ಗೋಣಿ ಚೀಲದಲ್ಲಿ ಇಡುತ್ತಿದ್ದರು. ಹೀಗಾಗಿ ₹6 ಸಾವಿರ ಮೊತ್ತದ ನೋಟು ಹಾಳಾಗಿದ್ದವು. ಗ್ರಾಮಸ್ಥರು ಅವಳ ಕೈಬಿಟ್ಟಿಲ್ಲ. ನಿತ್ಯ ಉಪಾಹಾರ, ಊಟ ಕೊಡುತ್ತಿದ್ದಾರೆ. ಆದರೆ, ಅವಳು ಭಿಕ್ಷೆ ಬೇಡುವ ಕಾಯಕವನ್ನು ನಿಲ್ಲಿಸಿಲ್ಲ’ ಎಂದು ಹೇಳಿದರು.
‘ದೈವದ ಕಾರ್ಯಕ್ಕೆ ಕೈಜೋಡಿಸಿದ್ದ ರಂಗಮ್ಮನಿಗೆ ಗ್ರಾಮಸ್ಥರು ಸನ್ಮಾನಿಸಿದ್ದಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.