ADVERTISEMENT

ರಾಯಚೂರು: 8,521 ಫಲಾನುಭವಿಗಳಿಗೆ ‘ಭಾಗ್ಯಲಕ್ಷ್ಮಿ’ ಭಾಗ್ಯ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 5:27 IST
Last Updated 10 ಜೂನ್ 2025, 5:27 IST
ಭಾಗ್ಯಲಕ್ಷ್ಮಿ
ಭಾಗ್ಯಲಕ್ಷ್ಮಿ   

ರಾಯಚೂರು: ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಹೆಣ್ಣುಮಕ್ಕಳ ಜನನವನ್ನು ಉತ್ತೇಜಿಸಲು 18 ವರ್ಷಗಳ ಹಿಂದೆ ರಾಜ್ಯದಲ್ಲಿ ಜಾರಿಗೊಳಿಸಿದ್ದ ‘ಭಾಗ್ಯಲಕ್ಷ್ಮಿ’ ಯೋಜನೆಯ ಲಾಭವನ್ನು ಮೊದಲ ಬಾರಿಗೆ ಜಿಲ್ಲೆಯ 8,521 ಫಲಾನುಭವಿಗಳು ಪಡೆದಿದ್ದಾರೆ.

ಜಿಲ್ಲೆಯಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಡಿ  2006–2007ನೇ ಸಾಲಿನಲ್ಲಿ 8,521 ಬಾಂಡ್ ಸ್ವೀಕರಿಸಲಾಗಿತ್ತು. ಈಗ 18 ವರ್ಷ ಪೂರ್ಣಗೊಂಡ ಹೆಣ್ಣು ಮಕ್ಕಳಿಗೆ ಹಣ ಪಾವತಿಸಲಾಗುತ್ತಿದೆ.  2024ರಲ್ಲಿ ಅವಧಿ ಮುಗಿದಿರುವ ಒಟ್ಟು 3,099  ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ.

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಫಲಾನುಭವಿಗಳಿಗೆ ಹಣವನ್ನು ಡಿಬಿಟಿ ಮುಖಾಂತರ ಕಳಿಸುತ್ತಿದ್ದು, ಈಗಾಗಲೇ ಬಹುತೇಕ ಫಲಾನುಭವಿಗಳಿಗೆ ಹಣ ಜಮೆಯಾಗಿದೆ. ಉಳಿದವರಿಗೂ ಹಂತ–ಹಂತವಾಗಿ ಹಣ ಸಿಗಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನವಿನಕುಮಾರ ತಿಳಿಸಿದ್ದಾರೆ.

ಕುಟುಂಬ ಮತ್ತು ಸಮಾಜದಲ್ಲಿ ಹೆಣ್ಣು ಮಗುವಿನ ಘನತೆ ಹೆಚ್ಚಿಸುವ ಉದ್ದೇಶದಿಂದ ಬಿ. ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಈ ಯೋಜನೆ ಜಾರಿಗೊಳಿಸಿದ್ದರು. 2006-07ರಲ್ಲಿ ನೋಂದಣಿಯಾದವರಿಗೆ 18 ವರ್ಷ ಪೂರೈಸಿದ ನಂತರ ₹32,351 ದೊರೆಯಲಿದೆ. 2008ರ ಆಗಸ್ಟ್ 1ರಿಂದ 2020ರ ಮಾರ್ಚ್ ಅಂತ್ಯದವರೆಗಿನ ಅವಧಿಯಲ್ಲಿ ನೋಂದಾಯಿಸಿದವರಿಗೆ ಸಿಗುವ ಅಂದಾಜು ಮೊತ್ತವನ್ನು ₹1 ಲಕ್ಷಕ್ಕೆ ಏರಿಕೆ ಮಾಡಲಾಯಿತು.

2020-2021ರಿಂದ ಭಾಗ್ಯಲಕ್ಷ್ಮಿ ಯೋಜನೆಯು ‘ಸುಕನ್ಯಾ ಸಮೃದ್ಧಿ ಯೋಜನೆ’ಯಾಗಿ ರೂಪಾಂತರಗೊಂಡಿತು. ಈ ಯೋಜನೆಯಡಿ ಖಾತೆ ತೆರೆದವರಿಗೆ 21 ವರ್ಷ ನಂತರ ₹1.27 ಲಕ್ಷ ದೊರೆಯಲಿದೆ.

‘ನೋಂದಣಿ ಮಾಡಿಸಿದ್ದ ಫಲಾನುಭವಿಗಳಿಗೆ 18 ವರ್ಷ ಪೂರ್ಣಗೊಂಡಿರುವುದರಿಂದ ಎಲ್‌ಐಸಿಯಿಂದ ಪರಿಪಕ್ವ ಮೊತ್ತ ಮಂಜೂರಾಗಿದೆ. ಇಲಾಖೆ ಈಗಾಗಲೇ ಫಲಾನುಭವಿಗಳಿಂದ ಅಗತ್ಯ ದಾಖಲೆಗಳನ್ನು ಪಡೆದು ಹಣ ಕೊಡುವ ವ್ಯವಸ್ಥೆ ಮಾಡುತ್ತಿದೆ. ಫಲಾನುಭವಿಗಳು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಗನವಾಡಿ ಕೇಂದ್ರ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಬಹುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಣ್ಣು ಭ್ರೂಣ ಹತ್ಯೆ ತಡೆಯಲು, ಬಾಲ್ಯ ವಿವಾಹ ಪದ್ದತಿ ನಿಯಂತ್ರಿಸಲು, ಹೆಣ್ಣು ಮಗುವಿನ ಶಿಕ್ಷಣ, ಲಿಂಗಾನುಪಾತ ಉತ್ತಮ ಪಡಿಸಲು, ಆರೋಗ್ಯಮಟ್ಟ ಉತ್ತಮಪಡಿಸಿ ಹೆಣ್ಣು ಮಕ್ಕಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತರಲಾಗಿತ್ತು.

ಅದಕ್ಕಾಗಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಸಿದ ಇಬ್ಬರು ಹೆಣ್ಣುಮಗುವಿಗೆ ಸರ್ಕಾರವು ನಿಶ್ಚಿತ ಠೇವಣಿ ಹೂಡಿ ಈ ಮಗುವಿಗೆ 18 ವರ್ಷ ಪೂರ್ಣಗೊಂಡ ನಂತರ ಬಡ್ಡಿ ಸಹಿತ ಪರಿಪಕ್ವ ಹಣ ನೀಡುವ ಉದ್ದೇಶದಿಂದ ಈ ಯೋಜನೆ ಆರಂಭಿಸಿತ್ತು. ಇಂದು ಅದು ಸಾಕಾರವಾಗಿದೆ.

ADVERTISEMENT

ಪಾಸ್‌ಬುಕ್ ನೀಡದ 626 ಯುವತಿಯರು

ಜಿಲ್ಲೆಯ 626 ಯುವತಿಯರು ಇಲಾಖೆಗೆ ಬ್ಯಾಂಕ್ ಪಾಸ್‌ಬುಕ್‌ ತಲುಪಿಸಿಲ್ಲ. ರಾಯಚೂರು ತಾಲ್ಲೂಕಿನ 16 ಮಾನ್ವಿ ತಾಲ್ಲೂಕಿನ 251 ಸಿರವಾರ ತಾಲ್ಲೂಕಿನ 22 ಸಿಂಧನೂರು ತಾಲ್ಲೂಕಿನ 62 ಲಿಂಗಸುಗೂರು ತಾಲ್ಲೂಕಿನ 55 ಹಾಗೂ ದೇವದುರ್ಗ ತಾಲ್ಲೂಕಿನ 220 ಫಲಾನುಭವಿಗಳ ಬ್ಯಾಂಕ್‌ ಪಾಸ್‌ಬುಕ್‌ ಪ್ರತಿ ಇಲಾಖೆ ಕೈಸೇರಿಲ್ಲ. ಇವರಲ್ಲಿ ರಾಯಚೂರು ಹಾಗೂ ದೇವದುರ್ಗ ತಾಲ್ಲೂಕಿನವರೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಅವರ ಫೋನ್‌ ನಂಬರ್‌ ಹುಡುಕಿ ಮಾಹಿತಿ ನೀಡುವ ಕೆಲಸವನ್ನು ಇಲಾಖೆ ಸಿಬ್ಬಂದಿ ಮಾಡುತ್ತಿದ್ದಾರೆ.

2024ರ ಸಾಲಿನಲ್ಲಿ 8521 ಫಲಾನುಭವಿಗಳಿಗೆ 18 ವರ್ಷ ತುಂಬಿದೆ. ಯೋಜನೆಯ ಷರತ್ತುಗಳನ್ನು ಪೂರೈಸಿದ 3099 ಹೆಣ್ಣು ಮಕ್ಕಳ ಖಾತೆಗೆ ಹಣ ಜಮಾ ಮಾಡಲಾಗಿದೆ.
ನವೀನಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ
ತಂದೆ ಮೃತಪಟ್ಟಿದ್ದರಿಂದ ಬದುಕು ಬಹಳ ಕಷ್ಟವಾಗಿತ್ತು. ಭಾಗ್ಯಲಕ್ಷ್ಮಿ ಯೋಜನೆಯ ಹಣ ನನ್ನ ಮದುವೆಗೆ ನೆರವಾಯಿತು
ಶಿವಕಾಂತಮ್ಮ ಹೆಂಬರಾಳ‌, ಗ್ರಾಮದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.