ADVERTISEMENT

ಮಾನ್ವಿ: ಪಕ್ಷಿಗಳಿಗೆ ಕೃತಕ ವಾಟರ್ ಫೀಡರ್ ತಯಾರಿಕೆ

ಅಪರೂಪದ ಪಕ್ಷಿಪ್ರೇಮಿ ಸಲಾವುದ್ದೀನ್

ಬಸವರಾಜ ಬೋಗಾವತಿ
Published 8 ಮಾರ್ಚ್ 2020, 19:30 IST
Last Updated 8 ಮಾರ್ಚ್ 2020, 19:30 IST
ಮಾನ್ವಿಯ ತಮ್ಮ ಮನೆಯಲ್ಲಿ ಪಕ್ಷಿಗಳಿಗಾಗಿ ಕೃತಕ ವಾಟರ್ ಫೀಡರ್ ತಯಾರಿಸುತ್ತಿರುವ ಪಕ್ಷಿಪ್ರೇಮಿ ಸಲಾವುದ್ದೀನ್
ಮಾನ್ವಿಯ ತಮ್ಮ ಮನೆಯಲ್ಲಿ ಪಕ್ಷಿಗಳಿಗಾಗಿ ಕೃತಕ ವಾಟರ್ ಫೀಡರ್ ತಯಾರಿಸುತ್ತಿರುವ ಪಕ್ಷಿಪ್ರೇಮಿ ಸಲಾವುದ್ದೀನ್   

ಮಾನ್ವಿ: ಪಟ್ಟಣದಲ್ಲಿ ಪಕ್ಷಿಪ್ರೇಮಿ ಎಂದು ಹೆಸರಾಗಿರುವ ಸಲಾವುದ್ದೀನ್ ಬೇಸಿಗೆಯಲ್ಲಿ ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸುವ ಕೃತಕ ವಾಟರ್ ಫೀಡರ್‌ಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲು ಸಿದ್ಧತೆ ನಡೆಸಿದ್ದಾರೆ.

ಕುಡಿಯುವ ನೀರಿನ ಬಾಟಲಿ, ಮಿಕ್ಸರ್‌ ಮುಚ್ಚುಳ, ಬೈಡಿಂಗ್ ತಂತಿ ಮತ್ತಿತರ ಸಲಕರಣೆಗಳನ್ನು ಬಳಸಿ ಸ್ವತಃ ತಾವೇ ವಾಟರ್ ಫೀಡರ್ ಬಾಟಲಿಗಳನ್ನು ಸಲಾವುದ್ದೀನ್ ತಯಾರಿಸುತ್ತಿದ್ದಾರೆ.

ವೃತ್ತಿಯಲ್ಲಿ ಸಿವಿಲ್ ಗುತ್ತಿಗೆದಾರರಾಗಿರುವ ಸಲಾವುದ್ದೀನ್ ಮೂರು ವರ್ಷಗಳಿಂದ ಮಾರ್ಚ್ 20ರಂದು ಮಾನ್ವಿ ಪಟ್ಟಣದಲ್ಲಿ ವಿಶ್ವ ಗುಬ್ಬಚ್ಚಿ ದಿನಾಚರಣೆ ಕಾರ್ಯಕ್ರಮ ಆಯೋಜಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರಿಗೆ ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಉಚಿತವಾಗಿ ವಾಟರ್ ಫೀಡರ್ ಬಾಟಲಿಗಳನ್ನು ವಿತರಿಸುತ್ತಾರೆ.

ADVERTISEMENT

ಈ ಬಾರಿಯೂ ಬೇಸಿಗೆಯಲ್ಲಿ ಪಕ್ಷಿಗಳಿಗೆ ಅನುಕೂಲ ಕಲ್ಪಿಸಲು ಸಾರ್ವಜನಿಕರಿಗೆ 500 ವಾಟರ್ ಫೀಡರ್ ಬಾಟಲಿಗಳ ಉಚಿತ ವಿತರಣೆಗೆ ಸಿದ್ಧತೆ ಆರಂಭಿಸಿದ್ದಾರೆ. ವಾಟರ್ ಫೀಡರ್ ಬಾಟಲಿಗಳನ್ನು ತಾವೇ ಖುದ್ದಾಗಿ ತಯಾರಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ವಾಟ್ಸ್‌ ಆ್ಯಪ್ ಗ್ರೂಪ್‍ಗಳಲ್ಲಿ ಸಲಾವುದ್ದೀನ್ ಕಾರ್ಯವನ್ನು ಮೆಚ್ಚಿರುವ ನೂರಾರು ಜನರು, ತಮಗೂ ಉಚಿತ ವಾಟರ್ ಫೀಡರ್‌ಗಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದ್ದಾರೆ.

ತಮ್ಮ ಮನೆಯ ಒಳಾಂಗಣದಲ್ಲಿ ಕೃತಕ ಗೂಡುಗನ್ನು ನಿರ್ಮಿಸಿ ಹಲವಾರು ಪಕ್ಷಿಗಳಿಗೆ ಅವರು ಆಶ್ರಯ ಕಲ್ಪಿಸಿದ್ದಾರೆ. ಮನೆಯ ಪಕ್ಕದ ಕೈತೋಟದಲ್ಲಿಯೂ ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಗೂಡುಗಳನ್ನು ಕಲ್ಪಿಸಿ ಪಕ್ಷಿಧಾಮವನ್ನಾಗಿ ಮಾಡಿದ್ದಾರೆ.

ಸಲಾವುದ್ದೀನ್ ಅವರ ಮನೆಯಲ್ಲಿನ ಪುಟ್ಟ ಪಕ್ಷಿಧಾಮವನ್ನು ವೀಕ್ಷಿಸಿರುವ ಹಲವು ಗಣ್ಯರು, ಅಧಿಕಾರಿಗಳು, ಮಠಾಧೀಶರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಹಲವಾರು ಜನರು ಭೇಟಿ ನೀಡಿ ಸಲಾವುದ್ದೀನ್ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶಾಲಾ ಮಕ್ಕಳಿಗೂ ಸಲಾವುದ್ದೀನ್ ಮನೆ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.