ADVERTISEMENT

ಬಿಜೆಪಿ ಸಾಧನೆಗಳೇ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆ: ಸಚಿವ ಹಾಲಪ್ಪ ಆಚಾರ

ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 6:07 IST
Last Updated 1 ಡಿಸೆಂಬರ್ 2021, 6:07 IST
ಸಿಂಧನೂರಿನ ಕನಕದಾಸ ಕಲ್ಯಾಣ ಮಂಟಪದಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಮಾತನಾಡಿದರು
ಸಿಂಧನೂರಿನ ಕನಕದಾಸ ಕಲ್ಯಾಣ ಮಂಟಪದಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಮಾತನಾಡಿದರು   

ಸಿಂಧನೂರು: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳು, ಯೋಜನೆಗಳು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಅವರ ಗೆಲುವಿಗೆ ಶ್ರೀರಕ್ಷೆ ಆಗಲಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಹೇಳಿದರು.

ಇಲ್ಲಿನ ಕನಕದಾಸ ಕಲ್ಯಾಣ ಮಂಟಪದಲ್ಲಿ ಬಿಜೆಪಿಯಿಂದ ನಡೆದ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಮೋದಿ ಪ್ರಧಾನಿಯಾದ ನಂತರ ಇಡೀ ಪ್ರಪಂಚವೇ ಭಾರತದತ್ತ ತಿರುಗಿ ನೋಡುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಯೋಜನೆಗಳು ಜನ ಮೆಚ್ಚುಗೆ ಪಡೆದಿವೆ. ಈಗಿನ ಸಿಎಂ ಬಸವರಾಜ ಬೊಮ್ಮಾಯಿ ರೈತರು ಮತ್ತು ಬಡವರ ಮಕ್ಕಳ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲೆಂದು ಶಿಷ್ಯವೇತನ ನೀಡುವುದಕ್ಕಾಗಿ ₹1000 ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ’ ಎಂದರು.

ADVERTISEMENT

ಕೊಪ್ಪಳ ಸಂಸದ ಸಂಗಣ್ಣ ಕರಡಿ ಮಾತನಾಡಿ,‘ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ಉಳಿದುಕೊಂಡಿಲ್ಲ. ಪ್ರಾದೇಶಿಕ ಪಕ್ಷವಾಗಿ ಮಾರ್ಪಟ್ಟಿದೆ. ಸಂವಿಧಾನದ ಆಶಯದ ಅನುಷ್ಠಾನ ಮತ್ತು ಪಂಚಾಯಿತಿ ವ್ಯವಸ್ಥೆ ಬಲಪಡಿಸಲು ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದೆ. ವಿಶ್ವನಾಥ ಬನಹಟ್ಟಿ ಅವರನ್ನು ಗೆಲ್ಲಿಸಿ, ಬಿಜೆಪಿಗೆ ಶಕ್ತಿ ತುಂಬಿದರೆ, ಸಿಂಧನೂರು ಮತ್ತು ಮಸ್ಕಿಗೆ ಪ್ರತ್ಯೇಕ ಬೈಪಾಸ್ ರಸ್ತೆ ನಿರ್ಮಿಸಲಾಗುವುದು. ಸಿಂಧನೂರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗುವುದು. ಜೂನ್ ತಿಂಗಳಲ್ಲಿ ರೈಲು ಸಂಚಾರ ಆರಂಭಿಸಲಾಗುವುದು’ ಎಂದರು.

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ, ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ, ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು ಹಾಗೂ ಬಿಜೆಪಿ ವಿಭಾಗೀಯ ಪ್ರಭಾರಿ ಸಿದ್ದೇಶ ಯಾದವ್ ಮಾತನಾಡಿದರು.

ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೊಲ್ಲಾ ಶೇಷಗಿರಿರಾವ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಮಾನಂದ ಯಾದವ್, ಮಾಜಿ ಅಧ್ಯಕ್ಷ ಶರಣಪ್ಪಗೌಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರುಪಾಪುರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರರೆಡ್ಡಿ, ಉಪಾಧ್ಯಕ್ಷ ಪ್ರಾಣೇಶ ದೇಶಪಾಂಡೆ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಟಿ.ಹನುಮೇಶ ಸಾಲಗುಂದಾ, ನಗರ ಮಂಡಲ ಅಧ್ಯಕ್ಷೆ ಪ್ರೇಮಾ ಸಿದ್ದಾಂತಿಮಠ, ಯುವ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಅಮರೇಶ ರೈತನಗರ ಹಾಗೂ ಮುಖಂಡ ಮಧ್ವರಾಜ್ ಆಚಾರ ಸೇರಿ ಹಲವರು ಇದ್ದರು.

ಮಂಜುನಾಥ ಹರಸೂರು ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.