ಸಿಂಧನೂರು: ತಾಲ್ಲೂಕಿನ ಬೊಮ್ಮನಾಳ ಮತ್ತು ಚಿರತ್ನಾಳ ಮಧ್ಯದಲ್ಲಿರುವ ಹಳ್ಳ ತುಂಬಿ ಬಂದಿರುವುದರಿಂದ ತಾತ್ಕಾಲಿಕವಾಗಿ ನಿರ್ಮಿಸಿದ್ದ ಹಳ್ಳದ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದ್ದು, ಗ್ರಾಮಸ್ಥರ ಸಂಚಾರ ಸ್ಥಗಿತಗೊಂಡಿದೆ.
‘ಕಳೆದ 3 ದಿನಗಳಿಂದ ಚಿರತ್ನಾಳ ಗ್ರಾಮದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಶಾಲೆಗೆ ಹೋಗಿಲ್ಲ. ಸಾರ್ವಜನಿಕರಿಗೆ ವ್ಯವಹಾರ-ವಹಿವಾಟಿಗೆ ಸಿಂಧನೂರಿಗೆ ಹೋಗಲು ಸಾಧ್ಯವಾಗಿಲ್ಲ. ಕೆಲಸ ಕಾರ್ಯಗಳಿಗೆ ಬರುತ್ತಿದ್ದ ಜನರಿಗೆ ತೀವ್ರ ತೊಂದರೆ ಆಗಿದೆ’ ಎಂದು ಗ್ರಾಮದ ಶರಣಪ್ಪ ದೇವರಗುಡಿ.
ಅಧಿಕಾರಿಗಳ ನಿರ್ಲಕ್ಷ್ಯ: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ವೆಂಕಟರಾವ್ ನಾಡಗೌಡ ಅವರು ಶಾಸಕರಾಗಿದ್ದ ಅವಧಿಯಲ್ಲಿ ತಾಲ್ಲೂಕಿನ ಪಗಡದಿನ್ನಿ, ದೇವರಗುಡಿ ಮತ್ತು ಬೊಮ್ಮನಾಳ ಸೇತುವೆಗಳು ಮತ್ತು ರಸ್ತೆಗಳ ನಿರ್ಮಾಣಕ್ಕೆ ₹14 ಕೋಟಿ ಬಿಡುಗಡೆಯಾಗಿತ್ತು. ಅದರಲ್ಲಿ ಪಗಡದಿನ್ನಿ, ದೇವರಗುಡಿಯ ಸೇತುವೆ ಮತ್ತು ರಸ್ತೆಗಳು ನಿರ್ಮಾಣಗೊಂಡು 2 ವರ್ಷ ಕಳೆದಿವೆ.
ಆದರೆ ಬೊಮ್ಮನಾಳ ಮತ್ತು ಚಿರತ್ನಾಳ ಮಧ್ಯದ ಸೇತುವೆ ಮಾತ್ರ ಅರ್ಧಕ್ಕೆ ನಿಂತು ನಿರ್ಮಾಣಗೊಳ್ಳದೆ ಸೇತುವೆ ನನೆಗುದಿಗೆ ಬಿದ್ದಿದೆ. ಚಿರತನಾಳ-ಬೊಮ್ಮನಾಳ ಗ್ರಾಮಸ್ಥರು ಪಿಎಂಜೆಎಸ್‍ವೈ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಉದಾಸೀನತೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸೇತುವೆ ನಿರ್ಮಾಣ ಕಾಮಗಾರಿಗೆ ಕಳೆದ 4 ವರ್ಷದ ಹಿಂದೆ ಪ್ರಾರಂಭವಾಗಿದ್ದು, ಇಲ್ಲಿಯವರೆಗೆ ಪೂರ್ಣಗೊಳ್ಳದೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈಗ ಅರ್ಧದಷ್ಟು ಕಾಮಗಾರಿಯೂ ನೀರಿನ ಪಾಲಾಗಿದೆ’ಎಂದು ಮಲ್ಲಿಕಾರ್ಜುನ ಚಿಲ್ಕರಾಗಿ ಹೇಳಿದರು.
‘ಪ್ರಧಾನಮಂತ್ರಿ ಸಡಕ್ ಯೋಜನೆಯಲ್ಲಿ ಈ ಸೇತುವೆ ಕಾಮಗಾರಿ ನಡೆದಿದ್ದು, ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯತೆಯಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ’ ಎನ್ನುತ್ತಾರೆ ಗ್ರಾಮದ ಹನುಮಂತಪ್ಪ.
ಕೂಡಲೇ ಈ ಸೇತುವೆ ಕಾಮಗಾರಿಯನ್ನು ಆರಂಭಿಸಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಈ ಗ್ರಾಮದ ಗ್ರಾಮಸ್ಥರೆಲ್ಲರೂ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪ್ರಭು ದೇವರಗುಡಿ, ವಿರುಪಣ್ಣ, ಶೇಖರಗೌಡ, ಬಸವರಾಜ ಮತ್ತು ಹನುಮಂತಪ್ಪ ಎಚ್ಚರಿಕೆ ನೀಡಿದ್ದಾರೆ.
ಹಳ್ಳದಲ್ಲಿ ಫೌಂಡೇಶನ್ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಹೊಸದಾಗಿ ಡಿಸೈನ್ ಮಾಡಿ ಅದಕ್ಕೆ ಹೆಚ್ಚುವರಿ ಅನುದಾನ ನೀಡುವಂತೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮನವಿ ಮಾಡಿದ್ದು ಅನುಮತಿ ಸಿಕ್ಕ ನಂತರ ಕೆಲಸ ಪ್ರಾರಂಭವಾಗಲಿದೆ.ಹಂಪನಗೌಡ ಬಾದರ್ಲಿ, ಶಾಸಕ
ಮೂರ್ನಾಲ್ಕು ವರ್ಷಗಳಿಂದ ಬೊಮ್ಮನಾಳ ಸೇತುವೆ ನನೆಗುದಿಗೆ ಬಿದ್ದಿದ್ದು ಶಾಸಕ ಹಂಪನಗೌಡ ಬಾದರ್ಲಿ ಅವರು ಈ ಕುರಿತು ಗಮನ ಹರಿಸಬೇಕು.ಬಸವರಾಜ ನಾಡಗೌಡ, ಅಧ್ಯಕ್ಷ ತಾಲ್ಲೂಕು ಘಟಕ ಜೆಡಿಎಸ್
ದೇವಿಕ್ಯಾಂಪಿನಲ್ಲಿ ಖಾಸಗಿ ಶಾಲೆಗೆ ನನ್ನ ಇಬ್ಬರು ಮಕ್ಕಳು ಹೋಗುತ್ತಿದ್ದಾರೆ. ಸೇತುವೆ ಕೊಚ್ಚಿ ಹೋಗಿ ಓಡಾಡಲು ದಾರಿ ಇಲ್ಲದಂತಾಗಿರುವುದರಿಂದ 4 ದಿನದಿಂದ ನನ್ನ ಮಕ್ಕಳು ಶಾಲೆಗೆ ಹೋಗಿಲ್ಲ.ನಿಂಗಣ್ಣ, ಚಿರತ್ನಾಳ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.