ADVERTISEMENT

ರಿಮ್ಸ್‌ ಆಸ್ಪತ್ರೆಯಿಂದ ನಾಪತ್ತೆಯಾದ ಬಾಲಕ

ಒಂದು ವಾರ ಕಳೆದರೂ ಪತ್ತೆಯಾಗದ ವಿಷ್ಣು ನಾಯಕ: ಮಗನ ಫೋಟೊ ಹಿಡಿದು ಹುಡುಕಾಟ ನಡೆಸುತ್ತಿರುವ ತಾಯಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 15:50 IST
Last Updated 30 ಜೂನ್ 2025, 15:50 IST
ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ   

ರಾಯಚೂರು: ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನೊಬ್ಬ ಆಸ್ಪತ್ರೆಯಿಂದ ಇದ್ದಕ್ಕಿದ್ದಂತೆಯೇ ಕಾಣೆಯಾಗಿದ್ದು, ವಾರ ಕಳೆದರೂ ಪತ್ತೆಯಾಗದ ಕಾರಣ ಪಾಲಕರು ಆತಂಕಕ್ಕೆ ಈಡಾಗಿದ್ದಾರೆ.

ರಾಯಚೂರು ತಾಲ್ಲೂಕಿನ ಜುಲಮಗೇರಾ ತಾಂಡಾದ ನಾಗಲಕ್ಷ್ಮಿ ನರಸಿಂಹ ನಾಯಕ ಅವರ ಮಗ ವಿಷ್ಣು ನಾಯಕ ಜೂನ್ 17ರಂದು ಮನೆಯಲ್ಲಿ ಮೊಬೈಲ್‌ ಚಾರ್ಜಿಂಗ್‌ ಇಟ್ಟು ಮೊಬೈಲ್‌ನಲ್ಲಿ ನೋಡುತ್ತ ನಿಂತಿದ್ದಾಗ ಚಾರ್ಜರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬೆರಳುಗಳು ಸುಟ್ಟಿದ್ದವು.

ನಾಗಲಕ್ಷ್ಮಿ ಅವರು ಮಗನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಜೂನ್ 22ರಂದು ಮಗ ಬೆಡ್‌ ಮೇಲೆ ಮಲಗಿದ್ದರೆ, ತಾಯಿ ನೆಲದ ಮೇಲೆ ನಿದ್ದೆಗೆ ಜಾರಿದ್ದರು. ಬೆಳಗಿನ ಜಾವ 3 ಗಂಟೆಗೆ ಎಚ್ಚರವಾದಾಗ ಬೆಡ್ ಮೇಲೆ ಮಗ ಇರಲಿಲ್ಲ. ಗಾಬರಿಗೊಂಡು ಶೌಚಾಲಯ, ಆಸ್ಪತ್ರೆ ಕಟ್ಟಡ ಎಲ್ಲೆಡೆ ಹುಡುಕಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಹಾಗೂ ಸೆಕ್ಯುರಿಟಿ ಗಾರ್ಡ್‌ಗಳನ್ನು ವಿಚಾರಿಸಿದರೂ ಪ್ರಯೋಜನವಾಗಿಲ್ಲ.

ADVERTISEMENT

ಕೊನೆಗೆ ಆಸ್ಪತ್ರೆಯ ಆಡಳಿತ ಅಧಿಕಾರಿಯನ್ನು ಭೇಟಿಯಾಗಿ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿ ನನ್ನ ಮಗ ಎಷ್ಟೊತ್ತಿಗೆ ಹೊರಗೆ ಹೋಗಿದ್ದಾನೆ ಪರಿಶೀಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ರಿಮ್ಸ್‌ನ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟು ಹೋಗಿವೆ ಎಂದು ಅಧಿಕಾರಿಗಳು ಹೇಳಿದಾಗ ಆಘಾತಕ್ಕೆ ಒಳಗಾಗಿದ್ದಾರೆ. ರಿಮ್ಸ್‌ ಅಧಿಕಾರಿಗಳಿಂದ ಸಮರ್ಪಕ ಉತ್ತರ ದೊರೆಯದ ಕಾರಣ ನಗರದ ಮಾರ್ಕೆಟ್‌ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಬಾಲಕನ ಅಪಹರಣ ಪ್ರಕರಣ ದಾಖಲಿಸಿದ್ದಾರೆ.

ಬಾಲಕನ ತಾಯಿ ಈಗಲೂ ಮಗನ ಫೋಟೊ ಹಿಡಿದು ಹುಡುಕಾಟ ನಡೆಸಿದ್ದಾರೆ. ಮಗನನ್ನು ದಾಖಲಿಸಿದ್ದ ರಿಮ್ಸ್ ಆಸ್ಪತ್ರೆಯ ಐದನೇ ಮಹಡಿಯ ರೂಮ್ ನಂಬರ್ 503ರ ಜನರಲ್ ವಾರ್ಡ್‌ಗೆ ಆಗಾಗ ಬಂದು ಮಗನನ್ನು ಹುಡುಕುತ್ತಲೇ ಇದ್ದಾರೆ. ಪರಿಚಯದವರು ಹಾಗೂ ಸಂಬಂಧಿಗಳನ್ನು ಭೇಟಿ ಮಾಡಿ ಮಗನನ್ನು ಪತ್ತೆ ಹಚ್ಚಲು ನೆರವಾಗುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

‘ರಿಮ್ಸ್ ಆಸ್ಪತ್ರೆಯ ಸಿಬ್ಬಂದಿ, ಅಧಿಕಾರಿಗಳ ನಿರ್ಲಕ್ಷ್ಯವೇ ಮಗ ಕಾಣೆಯಾಗಲು ಕಾರಣ. ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳು ಹಾಳಾಗಿದ್ದು, ಬಾಲಕನ ಚಲನವಲನ ಸೆರೆಯಾಗಿಲ್ಲ. ಪೊಲೀಸರು ಹುಡುಕಾಟ ನಡೆಸುತ್ತಿರುವುದಾಗಿ ಹೇಳುತ್ತಿದ್ದಾರೆ’ ಎಂದು ನಾಗಲಕ್ಷ್ಮಿ ದೂರಿದ್ದಾರೆ.

ಆಸ್ಪತ್ರೆಯ ಸಾಮಾನ್ಯ ವಾರ್ಡ್‌ನಲ್ಲಿ ದಾಖಲಾಗಿದ್ದ ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಆದರೆ, ಬಾಲಕನ ಬಗ್ಗೆ ಯಾವುದೇ ರೀತಿಯ ಸುಳಿವು ಸಿಕ್ಕಿಲ್ಲ.

ಬಾಲಕನ ತಂದೆ ಮನೆಯಲ್ಲೇ ಇರುತ್ತಾರೆ. ತಾಯಿಯೇ ಮನೆ ನಡೆಸಿಕೊಂಡು ಹೋಗುತ್ತಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಮಗ ನಾಪತ್ತೆಯಾಗಿರುವುದು ಆತಂಕ ಸೃಷ್ಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.