ಲಿಂಗಸುಗೂರು: ‘ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕದ ದಲಿತ ಚಳವಳಿಗೆ 50ರ ಸಂಭ್ರಮೋತ್ಸವದ ನಿಮಿತ್ತ ಆಗಸ್ಟ್ 7ರಂದು ಬೆಂಗಳೂರಿನ ವಸಂತನಗರದ ಡಾ.ಅಂಬೇಡ್ಕರ್ ಭವನದಲ್ಲಿ ಸಮಾರೋಪ ಸಮಾರಂಭ ಆಯೋಜಿಸಿದೆ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ಕಾಕರಗಲ್ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಲಿತ ಚಳವಳಿ ಆರಂಭಗೊಂಡ ನಂತರ ರಾಜ್ಯ ಮಟ್ಟದಿಂದ ಗ್ರಾಮೀಣ ಮಟ್ಟದವರೆಗೆ ವೈವಿಧ್ಯಮಯ ಹೋರಾಟಗಳ ಫಲವಾಗಿ ಪರಿಶಿಷ್ಟರ ಬದುಕು ಹಸನಾಗಿದೆ. ಇನ್ನೂ ಹೆಚ್ಚಿನ ಸ್ವಾವಲಂಬಿ ಬದುಕಿಗೆ ಹಕ್ಕೋತ್ತಾಯ ಮಾಡುವ ಅನಿವಾರ್ಯತೆ ಎದುರಾಗಿದೆ’ ಎಂದರು.
‘ಪ್ರೊ.ಬಿ.ಕೃಷ್ಣಪ್ಪ ಜನ್ಮದಿನವನ್ನು ಸರ್ಕಾರವೇ ಆಚರಣೆ ಮಾಡಲು ಆದೇಶ ಹೊರಡಿಸಬೇಕು. ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಯಥಾವತ್ತಾಗಿ ಅನುಷ್ಠಾನಕ್ಕೆ ತರಬೇಕು. ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿರಿಸಿದ ₹ 39 ಸಾವಿರ ಕೋಟಿ ಅನುದಾನ ವಿವಿಧ ನಿಗಮಗಳಿಗೆ ಹಂಚಿಕೆ ಮಾಡಬೇಕು. ಕಾಂತರಾಜ ವರದಿ ಜಾರಿಗೆ ತರಬೇಕು. 2023-24 ಮತ್ತು 2024-25ನೇ ಸಾಲಿನ ಎಸ್‍ಸಿಎಸ್‍ಪಿ, ಟಿಎಸ್‍ಪಿಗೆ ಮೀಸಲಿರಿಸಿದ ಹಣದಲ್ಲಿ ಗ್ಯಾರಂಟಿ ಯೋಜನೆಗೆ ವರ್ಗಾವಣೆ ಮಾಡಿರುವ ₹ 25 ಸಾವಿರ ಕೋಟಿ ಅನುದಾನ ಹಿಂತಿರುಗಿಸಬೇಕು. ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರನ್ನು ಕಾಯಂಗೊಳಿಸುವುದು ಸೇರಿದಂತೆ ಇತರೆ ಬೇಡಿಕೆಗೆ ಒತ್ತಾಯಿಸಲಾಗುವುದು ಎಂದರು.
ರಾಯಚೂರು ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಪ್ರೊ.ಬರಗೂರು ರಾಮಚಂದ್ರಪ್ಪ ಸಮಾರೋಪ ಸಮಾರಂಭ ಉದ್ಘಾಟಿಸುವರು.ನಾಡಿನ ಸಚಿವರು, ಪ್ರಗತಿಪರ ಚಿಂತಕರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.
ಮುಖಂಡರಾದ ರಮೇಶ ಗೋಸ್ಲೆ, ಸುರೇಶ ಬಳಗಾನೂರು, ಮಹಾದೇವಪ್ಪ ಪರಾಂಪುರ, ದುರುಮಂದೆಪ್ಪ ಕಟ್ಟಿಮನಿ, ಅಮರನಾಥ ಉದ್ಬಾಳ, ಶಿವಪ್ಪ ಪಲಕನಮರಡಿ, ಕಾಶಿಮಪ್ಪ ಡಿ ಮುರಾರಿ, ರಂಜಿತ್ ಕೊಡ್ಲಿ, ಭೀಮಪ್ಪ, ವೀರಘೋಷ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.