ADVERTISEMENT

ಮುಖ್ಯಮಂತ್ರಿಗೆ ₹600 ಮನಿ ಆರ್ಡರ್‌'!

ಮಾಸಾಶನ ಮೊತ್ತ ಹೆಚ್ಚಿಸಲು ಒತ್ತಾಯಿಸಿ ನವ ಜೀವನ ಮಹಿಳಾ ಒಕ್ಕೂಟ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 17:12 IST
Last Updated 3 ಜುಲೈ 2018, 17:12 IST
ಮಾಸಾಶನ ಮೊತ್ತವನ್ನು ಏರಿಕೆ ಮಾಡಬೇಕು ಎಂದು ರಾಯಚೂರಿನಲ್ಲಿ ನವ ಜೀವನ ಮಹಿಳಾ ಸಂಘಟನೆಯ ಸದಸ್ಯೆಯರು ಮಂಗಳವಾರ ಪ್ರತಿಭಟನೆ ನಡೆಸಿದರು
ಮಾಸಾಶನ ಮೊತ್ತವನ್ನು ಏರಿಕೆ ಮಾಡಬೇಕು ಎಂದು ರಾಯಚೂರಿನಲ್ಲಿ ನವ ಜೀವನ ಮಹಿಳಾ ಸಂಘಟನೆಯ ಸದಸ್ಯೆಯರು ಮಂಗಳವಾರ ಪ್ರತಿಭಟನೆ ನಡೆಸಿದರು   

ರಾಯಚೂರು: ಸರ್ಕಾರದಿಂದ ನೀಡುವ ವಿವಿಧ ಮಾಸಾಶನ ಮೊತ್ತ ಹೆಚ್ಚಿಸಲು ಒತ್ತಾಯಿಸಿ ನವ ಜೀವನ ಮಹಿಳಾ ಒಕ್ಕೂಟದ ಸದಸ್ಯರು ಮುಖ್ಯಮಂತ್ರಿಗೆ ₹600 ಮನಿ ಆರ್ಡರ್‌ ಮಾಡುವ ಮೂಲಕ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಟಿಪ್ಪುಸುಲ್ತಾನ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದ ನಂತರ ಅಂಚೆ ಕಚೇರಿಗೆ ತೆರಳಿ ಹತ್ತು ಸದಸ್ಯರು ಮನಿ ಆರ್ಡರ್‌ ಮಾಡಿ, ಸರ್ಕಾರದ ಮಾಸಾಶನವನ್ನು ವಾಪಸ್‌ಕಳುಹಿಸಿದರು.

ಈಗಾಗಲೇ ಹಲವು ಬಾರಿ ಪ್ರತಿಭಟನೆ ಮಾಡಿ ಮಾಸಾಶನ ಮೊತ್ತ ಹೆಚ್ಚಿಸುವಂತೆ ಒತ್ತಾಯಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ತಮ್ಮ ಸರ್ಕಾರ ಬಂದರೆ ಮಾಸಾಶನ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದರು.ಆದ್ದರಿಂದ ಬಡವರಿಗೆ ಅನುಕೂಲವಾಗಲು ಮಾಸಾಶನವನ್ನು ಕೂಡಲೇ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಶಾಸಕರ ವೇತನ ಹೆಚ್ಚಳ ಮಾಡಲಾಗಿದೆ. ಏಳನೇ ವೇತನ ಆಯೋಗದಿಂದ ಅಧಿಕಾರಿಗಳ ವೇತನವೂ ಏರಿಕೆಯಾಗಿದೆ. ಆದರೆ, ಅಸಂಘಟಿತ ವಲಯದವರಿಗೆ ಮಾಸಾಶನ ಹೆಚ್ಚಳ ಮಾಡಲು ಸರ್ಕಾರ ಮನಸ್ಸು ಮಾಡುತ್ತಿಲ್ಲ. ದೇಶ ನಿರ್ಮಾಣದಲ್ಲಿ ರೈತರು ಹಾಗೂ ಕಾರ್ಮಿಕರು ಪಾತ್ರ ಬಹುಮುಖ್ಯ ಎನ್ನುವುದನ್ನು ಎಲ್ಲ ಮಹೋದಯರು ಭಾಷಣಗಳಲ್ಲಿ ಉಲ್ಲೇಖಿಸುತ್ತಾರೆ. ಆದರೆ,ವಾಸ್ತವದಲ್ಲಿ ಸರ್ಕಾರದಿಂದ ಸಿಗುತ್ತಿರುವಮರ್ಯಾದೆ ಏನು ಎಂಬುದನ್ನು ಅರಿಯಬೇಕು ಎಂದರು.

ವಯೋವೃದ್ಧರ, ವಿಧವೆಯರ, ದೇವದಾಸಿಯರ ಹಾಗೂ ಅಂಗವಿಕಲರ ಮಾಸಾಶನವನ್ನು ತಿಂಗಳಿಗೆ ₹600 ನೀಡಲಾಗುತ್ತಿದೆ. ಇದರಿಂದ ಪ್ರತಿ ದಿನಕ್ಕೆ ₹20 ಗಳಲ್ಲಿ ಬದುಕು ನಡೆಸಬೇಕಾಗಿದೆ. ಜೈಲಿನಲ್ಲಿರುವ ಕೈದಿಗಳಿಗೆ ಸರ್ಕಾರ ದಿನಕ್ಕೆ ₹100 ಗಿಂತ ಅಧಿಕ ಖರ್ಚು ಮಾಡುತ್ತಿದೆ. ಘನತೆಯಿಂದ ಬದುಕುವುದು ಕಷ್ಟ, ಜೈಲಿನಲ್ಲಿ ಬದುಕುವುದು ಸುಲಭಎನ್ನುವ ಸಂದೇಶವನ್ನು ಸಮಾಜಕ್ಕೆ ಸರ್ಕಾರವು ಈ ಮೂಲಕ ನೀಡುತ್ತಿದೆ ಎಂದು ಹೇಳಿದರು.

ಈಗಾಗಲೇ ವಿವಿಧ ರಾಜ್ಯಗಳಲ್ಲಿ ಸಾಮಾಜಿಕ ಸುರಕ್ಷತಾ ಮಾಸಾಶನವನ್ನು ₹2.000ಗೆ ಹೆಚ್ಚಿಸಿದ್ದಾರೆ. ಅದೇ ರೀತಿ ರಾಜ್ಯದಲ್ಲೂ ಮಾಸಾಶನ ಹೆಚ್ಚಿಸುವ ಮೂಲಕ ಕರ್ನಾಟಕವು ರಾಷ್ಟ್ರದಲ್ಲಿ ಮಾದರಿ ರಾಜ್ಯವನ್ನಾಗಿಸಬೇಕು ಎಂದು ಒತ್ತಾಯಿಸಿದರು.

ವಿದ್ಯಾಪಾಟೀಲ, ವಿರೂಪಮ್ಮ, ಭೀಮಮ್ಮ, ಈರಮ್ಮ, ಹನುಮೇಶ, ಅಂಬ್ರಮ್ಮ, ತಿಪ್ಪಮ್ಮ, ಹನುಮಂತಮ್ಮ, ಮಲ್ಲಮ್ಮ, ಮೋಕ್ಷಮ್ಮ, ಮರಿಯಮ್ಮ, ಅಂಬಮ್ಮ, ದುರುಗಮ್ಮ, ರಂಗಮ್ಮ, ಮಾಳಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.