
ರಾಯಚೂರು: ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಜನರಿಗೆ ಸಂಪರ್ಕ ಕಲ್ಪಿಸಲು ಹಾಗೂ ಕುಡಿಯುವ ನೀರು, ನೀರಾವರಿ ಸೇರಿ ಅಂತರ್ಜಲ ವೃದ್ಧಿಗಾಗಿ ರಾಜ್ಯ ಸರ್ಕಾರ ಸಣ್ಣ ನೀರಾವರಿ ಇಲಾಖೆಯಿಂದ ಚೀಕಲಪರ್ವಿ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ ಚಿಕ್ಕ ಮಂಚಾಲಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಗಳಿಗೆ ಕಳೆದ ವರ್ಷ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದ ಆಕ್ಷೇಪಣೆ ಕುರಿತು ಎರಡು ರಾಜ್ಯಗಳ ಸಹಮತದೊಂದಿಗೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ದೇವರ ಆಶೀರ್ವಾದ ಪಡೆದ ನಂತರ ಪದ್ಮನಾಭ ವಸತಿ ಗೃಹದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು,ಮಹರ್ಷಿವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್ ಹಾಗೂ ಸಂಸದ ಜಿ ಕುಮಾರ ನಾಯಕ, ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಯೊಂದಿಗೆ ಚರ್ಚಿಸಿ ಮಾತನಾಡಿದರು.
ಬ್ರಿಡ್ಜ್ ಕಮ್ ಬ್ಯಾರೆಜ್ ನ ನೀಲ ನಕ್ಷೆಯೊಂದಿಗೆ ವಿವರಣೆ ನೀಡಿದ ಅಧಿಕಾರಿಗಳು, ಚಿಕ್ಕ ಮಂಚಾಲಿಯಲ್ಲಿ ಶಾಶ್ವತ ಕುಡಿಯುವ ನೀರಿಗಾಗಿ ಈ ಬ್ರಿಡ್ಜ್ ಕಂಬ್ಯಾರೇಜ್ ನಿರ್ಮಾಣ ಮಾಡಿದರೆ, ಇದೇ ನದಿಗೆ ಹೊಂದಿಕೊಂಡಂತೆ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಸುಂಕೇಶ್ವರ ಬ್ರಿಡ್ಜ್ ಕಂ ಬ್ಯಾರೇಜ್ ಗೆ ನೀರಿನ ಮಟ್ಟ ಕುಸಿತವಾಗಲಿದೆ ಎಂದು ಆಂಧ್ರಪ್ರದೇಶ ಸರ್ಕಾರ ಆಕ್ಷೇಪಣಾ ಅರ್ಜಿ ಸಲ್ಲಿಸಿದೆ. ಆದರೆ ಅವರಿಗೆ ಇದರಿಂದ ಯಾವುದೇ ತೊಂದರೆಯಿಲ್ಲ ಈ ಕುರಿತು ವರದಿ ಸಿದ್ದಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಮಳೆಗಾಲದಲ್ಲಿ ನದಿಗೆ ಹೆಚ್ಚಿನ ಒಳ ಹರಿವು ನೀರು ಬರುವುದರಿಂದ ಆ ಸಂದರ್ಭದಲ್ಲಿ ಹೆಚ್ಚಿನ ನೀರನ್ನು ಸಂಗ್ರಹಿಸಿ ಕುಡಿಯಲು ನೀರು ಸರಬರಾಜು ಮಾಡಬಹುದಾಗಿದೆ ಇದರಿಂದ ಆಂದ್ರಕ್ಕೆ ಯಾವುದೆ ತೊಂದರೆಯಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ಕಳೆದ ವರ್ಷ ಈ ಕಾಮಗಾರಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚಿಕ್ಕ ಮಂಚಾಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ₹158 ಕೋಟಿ ಹಾಗೂ ಚಿಕಲಪರ್ವಿ ಬ್ರಿಡ್ಜ್ ಕಂ ಬ್ಯಾರೇಜ್ ಗೆ ಅನುಮೋದನೆ ನೀಡಲಾಗಿದೆ. ಆಂಧ್ರಪ್ರದೇಶ ಸರ್ಕಾರ ಹಾಗೂ ತೆಲಂಗಾಣ ಸರ್ಕಾರ ಆಕ್ಷೇಪಣೆಯಿಂದ ಕಾಮಗಾರಿ ನಿರ್ಮಾಣಕ್ಕೆ ಅಡ್ಡಿಯಾಗಿದೆ. ಈ ಕುರಿತು ಎರಡು ರಾಜ್ಯಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವ ಎನ್ಎಸ್ ಬೋಸರಾಜು ಹಾಗೂ ಶಾಸಕ ಬಸನಗೌಡ ದದ್ದಲ್ ಅವರು ಉಪಮುಖ್ಯಮಂತ್ರಿ ಅವರಿಗೆಗೆ ಕಾಮಗಾರಿ ಅವಶ್ಯಕತೆ ಹಾಗೂ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು.
ಸಂಸದ ಸಂಸದ ಜಿ ಕುಮಾರ ನಾಯಕ, ಶಾಸಕರಾದ ಹಂಪಯ್ಯ ನಾಯಕ, ಪರಿಷತ್ ಸದಸ್ಯರಾದ ಬಸನಗೌಡ ಬಾದರ್ಲಿ, ವಿಧಾನ ಪರಿಷತ್ ಸದಸ್ಯ ಎ ವಸಂತ ಕುಮಾರ, ಶಾಸಕ ತುರುವಿಹಾಳ ಬಸನಗೌಡ, ಇಲಾಖೆಯ ಅಧಿಕಾರಿಗಳು
ಮುಖ್ಯ ಇಂಜಿನಿಯರ್ ಲಕ್ಷ್ಮಣ ನಾಯಕ, ಅಧೀಕ್ಷಕ ಎಂಜಿನಿಯರ್ ಸತ್ಯನಾರಾಯಣ ಶೆಟ್ಟಿ, ಕಾರ್ಯಪಾಲಕ ಇಂಜಿನಿಯರ್ ಎಂ.ಎಸ್.ಗೋಡೆಕರ್, ನಿರ್ವಾಹಕ ಎಂಜಿನಿಯರ್ ಶಾಂತರಾಜ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.