
ರಾಯಚೂರು: ‘ಜನ್ಮವೆತ್ತುವ ಪ್ರತಿಯೊಂದು ಮಗುವಿನ ಜೀವನದ ಭವಿಷ್ಯಕ್ಕೆ ಪ್ರತಿಯೊಬ್ಬರೂ ಕೈಜೊಡಿಸಬೇಕಿದ್ದು, ಅದರಲ್ಲೂ ಅನಾಥ, ನಿರ್ಗತಿಕ ಹಾಗೂ ಪರಿತ್ಯಕ್ತ ಮಕ್ಕಳಿಗೂ ಕೂಡ ಪ್ರೀತಿ, ವಾತ್ಸಲ್ಯ, ಮಮತೆ ಹಾಗೂ ಬಾಂಧವ್ಯವನ್ನು ಕಾನೂನಾತ್ಮಕವಾಗಿ ದತ್ತು ತೆಗೆದುಕೊಳ್ಳುವ ಕುರಿತು ಮಾಹಿತಿ ನೀಡಬೇಕು’ ಎಂದು ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ ಗಣೇಶ ಕೆ. ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೃಷ್ಣಾ ಸಭಾಂಗಣದಲ್ಲಿ ದತ್ತು ಮಾಸಾಚರಣೆ ಪ್ರಯುಕ್ತ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪ್ರಸ್ತುತ ವರ್ಷ ವಿಶೇಷ ಅಗತ್ಯತೆಯುಳ್ಳ ಮಕ್ಕಳನ್ನು ಸಹ ದತ್ತು ತೆಗೆದುಕೊಂಡು ಹೊಸ ಬದುಕಿಗೆ ಅವಕಾಶ ಮಾಡಿಕೊಡಲು ಜನತೆಯು ಮುಂದೆ ಬರಲು ಜನಜಾಗೃತಿ ನೀಡಬೇಕು’ ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಕಿರಲಿಂಗಪ್ಪ ಮಾತನಾಡಿ, ‘ಯಾವುದೋ ಕಾರಣ, ಸಂದಿಗ್ಧ ಸನ್ನಿವೇಶಗಳಿಂದ ಕಂದಮ್ಮಗಳನ್ನು ಬೀದಿ, ತಿಪ್ಪೆ, ಕಾಲುವೆ ಬದಿ ಬಿಟ್ಟುಹೋಗುವ ಹಲವಾರು ಉದಾಹರಣೆಗಳಿವೆ. ಇಂತ ಸಂದರ್ಭದಲ್ಲಿ 1098ಗೆ ಕರೆಮಾಡಿ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿ ಮಗುವನ್ನು ಒಪ್ಪಿಸಿದಲ್ಲಿ ಮಕ್ಕಳನ್ನು ಸಾಕುವ ಅದೆಷ್ಟೊ ಪಾಲಕರಿಗೆ ‘ಮಕ್ಕಳ ಪೋಷಣೆ ಮತ್ತು ರಕ್ಷಣೆ ಕಾಯ್ದೆ-2015’ ರಡಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ಮಾರ್ಗಸೂಚಿಯನ್ವಯ ದತ್ತು ನೀಡಲಾಗುತ್ತಿದ್ದು, ದಯವಿಟ್ಟು ಯಾರು ನವಜಾತ ಶಿಶು ಹಾಗೂ ಮಕ್ಕಳನ್ನು ಸಹ ಅನಾಥವಾಗಿಸಬಾರದು’ ಎಂದು ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಎಂ. ಶಾಕೀರ್ ಮೊಹಿಯುದ್ದೀನ್, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ.ಶಿವಕುಮಾರ, ಡಾ.ಶೀತಲಬಾಯಿ ಆರೋಗ್ಯ ನೋಡಲ್ ಅಧಿಕಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಡಿವೈಎಚ್‌ಒ ಬಸಯ್ಯ, ಆಪ್ತ ಸಹಾಯಕ ಲೇಪಾಕ್ಷಯ್ಯ, ಮಕ್ಕಳ ರಕ್ಷಣಾ ಘಟಕದ ತಿಕ್ಕಯ್ಯ, ದಿನೇಶ, ಶೋಭಾ, ಕಾರ್ಯಕ್ರಮ ಅಧಿಕಾರಿಗಳು ಹಾಗೂ ಟಿಬಿ ವಿಭಾಗದ ಅಧಿಕಾರಿಗಳು, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.