ಲಿಂಗಸುಗೂರು: ಸ್ಥಳೀಯ ಪುರಸಭೆ ವ್ಯಾಪ್ತಿಯ ಕರಡಕಲ್ಲ, ಕಸಬಾಲಿಂಗಸುಗೂರು ಸೇರಿದಂತೆ ಪಟ್ಟಣದ ಕೆಲ ವಾರ್ಡ್‍ಗಳಲ್ಲಿ ಸಮರ್ಪಕ ವಿದ್ಯುತ್ ದೀಪಗಳ ಕೊರತೆ ಎದ್ದು ಕಾಣುತ್ತಿದೆ. ಇನ್ನೊಂದೆಡೆ ಬೀದಿದೀಪಗಳು ಅಹೋರಾತ್ರಿ ಬೆಳಗುತ್ತಿರುವುದು ನಾಗರಿಕ ಆಕ್ರೋಶಕ್ಕೆ ಕಾರಣವಾಗಿದೆ.
ಪುರಸಭೆ ಆಡಳಿತ ಮಂಡಳಿಗೆ ಸದಸ್ಯರನ್ನು ಆಯ್ಕೆ ಮಾಡಿ ಕಳುಹಿಸಿದ್ದು ಕೂಡ ಯಾವೊಬ್ಬ ಸದಸ್ಯರು ಬೀದಿದೀಪ, ಸಮರ್ಪಕ ಶುದ್ಧ ಕುಡಿಯುವ ನೀರು, ಸ್ವಚ್ಛತೆಯತ್ತ ಗಮನ ಹರಿಸುತ್ತಿಲ್ಲ. ಸಮಸ್ಯೆಗಳಿಗೆ ಸ್ಪಂದನೆ ನೀಡುವುದಿರಲಿ, ಹಗಲು ವೇಳೆ ಬಲ್ಬ್ ಬೆಳಗುತ್ತಿದ್ದರೂ ತಮಗೆ ಸಂಬಂಧವೇ ಇಲ್ಲ ಎಂಬಂತೆ ನೋಡುತ್ತಾ ಹೋಗುತ್ತಿರುವ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿವೆ.
‘ವಿಶೇಷವಾಗಿ ಕರಡಕಲ್ಲ, ಕಸಬಾಲಿಂಗಸುಗೂರು, ಹುಲಿಗುಡ್ಡ ವಾರ್ಡ್‍ಗಳಲ್ಲಿ ಒಂದು ತಿಂಗಳಿಂದ ನಿತ್ಯ ಹೈಮಾಸ್ಟ್ ಸೇರಿದಂತೆ ಇತರೆ ಬೀದಿದೀಪಗಳು 24 ಗಂಟೆ ಬೆಳಗುತ್ತಿವೆ. ಈ ಕುರಿತು ಜೆಸ್ಕಾಂ ಮತ್ತು ಪುರಸಭೆ ಸಿಬ್ಬಂದಿ ಗಮನ ಸೆಳೆದಿದ್ದೇವೆ. ಎಲ್ಲರೂ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಪೋಲಾಗುತ್ತಿರುವ ವಿದ್ಯುತ್ ನಿಯಂತ್ರಣ ಹೊಣೆ ಯಾರದ್ದು’ ಎಂದು ಸಮಾಜ ಸೇವಕ ಅಮರೇಶ ಹೊರಪೇಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬೆನ್ನಪ್ಪ ಕರಿಬಂಟನಾಳ ಅವರನ್ನು ಸಂಪರ್ಕಿಸಿದಾಗ, ‘ನಮ್ಮ ಸಂಸ್ಥೆಯಿಂದ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬೀದಿದೀಪಕ್ಕೆ ಸಂಬಂಧಿಸಿ ಮೀಟರ್ ಅಳವಡಿಕೆ ಮಾಡಿದ್ದೇವೆ. ಬೀದಿದೀಪ ಹಾಕುವುದು, ತೆಗೆಯುವುದು ಸ್ಥಳೀಯ ಸಂಸ್ಥೆಗಳಿಗೆ ಬಿಟ್ಟ ವಿಷಯ. ಕೆಲವೆಡೆ ಎರಡು ವೈರ್ ಇರುವಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕಿದ್ದು ತುರ್ತು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಪುರಸಭೆ ಮುಖ್ಯಾಧಿಕಾರಿ ರಡ್ಡಿ ರಾಯನಗೌಡ್ರ ಅವರು, ‘ಪುರಸಭೆ ವ್ಯಾಪ್ತಿಯಲ್ಲಿ ಬೀದಿದೀಪ ನಿಯಂತ್ರಣ ನಮ್ಮ ಹೊಣೆಯಾಗಿದೆ. ಬೀದಿದೀಪಕ್ಕೆ ಸಂಬಂಧಿಸಿ ಪ್ರತ್ಯೇಕ ಮೀಟರ್ ಅಳವಡಿಸಲಾಗಿದೆ. ವ್ಯರ್ಥ ಪೋಲಾಗುವುದು ನಮಗೆ ನಷ್ಟ. ಅಹೋರಾತ್ರಿ ಬೀದಿದೀಪ ಉರಿಯುತ್ತಿರುವ ಬಗ್ಗೆ ಮಾಹಿತಿ ಬಂದಿಲ್ಲ. ತಕ್ಷಣವೇ ಪರಿಶೀಲಿಸಿ ಸರಿಪಡಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.