ADVERTISEMENT

ರಾಜ್ಯ ಕಲಾವಿದರ ದಿನಾಚರಣೆ

ಕ್ಲಾರಿಯೋನೆಟ್‌ ವಾದಕ ಪಂ.ನರಸಿಂಹಲು ವಡವಾಟಿ ಜನ್ಮದಿನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 13:06 IST
Last Updated 20 ಜನವರಿ 2021, 13:06 IST
ನರಸಿಂಹ ವಡವಾಟಿ
ನರಸಿಂಹ ವಡವಾಟಿ   

ರಾಯಚೂರು: ಜಿಲ್ಲೆಯ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿರುವ ಖ್ಯಾತ ಕ್ಲಾರಿಯೋನೆಟ್‌ ವಾದಕ ಪಂಡಿತ್‌ ನರಸಿಂಹಲು ವಡವಾಟಿ ಅವರ ಜನ್ಮದಿನ ಜನವರಿ 21 ಅನ್ನು ‘ರಾಜ್ಯ ಕಲಾವಿದರ ದಿನ’ವೆಂದು ಆಚರಿಸಲಾಗುತ್ತದೆ.

ನಗರದ ಸ್ವರ ಸಂಗೀತ ವಿದ್ಯಾಲಯದಲ್ಲಿ ಗುರುವಾರ ಸಂಜೆ 5 ಗಂಟೆಗೆ ತನಿಮಿತ್ತ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯದ ವಿವಿಧೆಡೆಯಿಂದ ಸಂಗೀತ ಸಾಧಕರು ಭಾಗವಹಿಸುತ್ತಿದ್ದಾರೆ. ಸಂಗೀತ ಕಚೇರಿ ಹಾಗೂ ವಿಶೇಷ ಉಪನ್ಯಾಸ ನಡೆಯಲಿದೆ.

ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ನರಸಿಂಹಲು ವಡವಾಟಿ ಅವರು ರಾಯಚೂರು ತಾಲ್ಲೂಕಿನ ವಡವಾಟಿ ಗ್ರಾಮದಲ್ಲಿ 1942 ರ ಜನವರಿ 21 ರಂದು ಜನಿಸಿದ್ದು, ತಾಯಿ ರಂಗಮ್ಮ ಹಾಗೂ ತಂದೆ ಬುಡ್ಡಪ್ಪ. ಚಿಕ್ಕಂದಿನಲ್ಲಿಯೇ ತಾಯಿ ಕಳೆದುಕೊಂಡು ನಗರದತ್ತ ವಲಸೆ ಬಂದು ಕಷ್ಟಪಟ್ಟು ಶಿಕ್ಷಣ ಮುಂದುವರಿಸಿ, ಆನಂತರ ಸಂಗೀತದತ್ತ ವಾಲಿದರು. ಇದೀಗ 79 ವಸಂತಗಳನ್ನು ಪೂರ್ಣಗೊಳಿಸಿ 80ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಕಾರಣ, ನಾಡಿನ ಅನೇಕ ಅಭಿಮಾನಿಗಳು ಅವರಿಗೆ ಶುಭ ಕೋರುವುದಕ್ಕಾಗಿ ರಾಯಚೂರಿಗೆ ಬರುತ್ತಿರುವುದು ವಿಶೇಷ.

ADVERTISEMENT

ಈ ವಯಸ್ಸಿನಲ್ಲೂ ಹರೆಯದವರನ್ನು ನಾಚಿಸುವಂತೆ ಸುಶ್ರಾವ್ಯವಾಗಿ ದಣಿವರಿಯದೆ ಕ್ಲಾರಿಯೋನೆಟ್‌ ವಾದನದಲ್ಲಿ ಮಗ್ನರಾಗುವುದನ್ನು ನೋಡಿ ತಲೆದೂಗವರೇ ಇಲ್ಲ. ಕೋವಿಡ್‌ ಕಾರಣ ಒಂದು ವರ್ಷದಿಂದ ಅವರು ರಾಯಚೂರಿನಲ್ಲಿಯೇ ಉಳಿದಿದ್ದಾರೆ. ಪ್ರತಿವರ್ಷ ವಿವಿಧ ರಾಜ್ಯ ಮತ್ತು ದೇಶಗಳಿಗೆ ಸಂಚರಿಸಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದರು. ಕೋವಿಡ್‌ ಸೋಂಕು ಇನ್ನೂ ಅಂತ್ಯಕಾಣದ ಕಾರಣದಿಂದ, ಅವರು ನೆಲೆಸಿದ ಕಡೆಯಲ್ಲೇ ಅಭಿಮಾನಿಗಳು ‘ಕಲಾವಿದರ ದಿನಾಚರಣೆ’ ಕಾರ್ಯಕ್ರಮ ಏರ್ಪಡಿಸುತ್ತಿರುವುದು ಗಮನಾರ್ಹ.

ಸಾಧನೆ: ಕಲಬುರ್ಗಿಯಲ್ಲಿ ನೆಲೆಸಿದ್ದ ಪಂಡಿತ್‌ ಸಿದ್ದರಾಮ ಜಂಬಲದಿನ್ನಿ ಅವರಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಭ್ಯಾಸ ಮಾಡಿರುವ ಪಂ. ನರಸಿಂಹಲು ಅವರು, ಜೈಪುರ ಮತ್ತು ಗ್ವಾಲಿಯರ್ ಘರಾನಾ ಹಾಡುವುದಕ್ಕೆ ಆರಂಭಿಸಿದ್ದರು. 10 ವರ್ಷಗಳ ನಂತರ ಏಕವ್ಯಕ್ತಿಯಾಗಿ ಸಂಗೀತ ಕಚೇರಿಗಳನ್ನು ನೀಡುತ್ತಾ ಬಂದಿದ್ದಾರೆ. ಕ್ರಮೇಣ ಕ್ಲಾರಿಯೋನೆಟ್‌ ವಾದ್ಯದ ಮೂಲಕ ಶಾಸ್ತ್ರೀಯ ಹಾಡುಗಳು, ಕೀರ್ತನೆಗಳು, ವಚನಗಳನ್ನು ನುಡಿಸುತ್ತಾ ಹೆಸರುವಾಸಿಯಾದರು. ಈಗ ಕ್ಲಾರಿಯೋನೆಟ್‌ ವಾದನದಲ್ಲಿಯೇ ಪರಿಣಿತಿ ಸಾಧಿಸಿದವರು ಎಂದು ಖ್ಯಾತಿ ಪಡೆದಿದ್ದಾರೆ.

ಇಂಗ್ಲೆಂಡ್‌, ಅಮೆರಿಕ ಹಾಗೂ ಫ್ರಾನ್ಸ್‌ ದೇಶಗಳಲ್ಲಿ ಸಂಗೀತ ಕಚೇರಿಗಳನ್ನು ನಡೆಸಿದ್ದಾರೆ. 2011 ರಲ್ಲಿ ಲಾಸ್‌ ಎಂಜಿಲಿಸ್‌ನಲ್ಲಿ ಏರ್ಪಡಿಸಿದ್ದ ‘ವರ್ಲ್ಡ್‌ ಕ್ಲಾರಿಯೋನೆಟ್‌ ಅಸೊಸಿಯೇಷನ್‌’ ಗೆ ಅಧ್ಯಕ್ಷರಾಗಿದ್ದರು. ಅಮೆರಿಕದ ವಿಶ್ವವಿದ್ಯಾಲಯವೊಂದರಲ್ಲಿ ಸಂಗೀತ ಅತಿಥಿ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.