ADVERTISEMENT

ಜನತೆಗೆ ಶುದ್ಧ, ಗುಣಮಟ್ಟದ ನೀರು ಪೂರೈಸಿ: ಸಚಿವ ಬೈರತಿ ಸುರೇಶ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 11:14 IST
Last Updated 3 ಡಿಸೆಂಬರ್ 2025, 11:14 IST
<div class="paragraphs"><p>ಸಚಿವ ಬೈರತಿ ಸುರೇಶ</p></div>

ಸಚಿವ ಬೈರತಿ ಸುರೇಶ

   

ರಾಯಚೂರು: ‘ ರಾಯಚೂರು ನಗರಕ್ಕೆ ಶುದ್ಧ ಹಾಗೂ ಗುಣಮಟ್ಟದ ನೀರು ಪೂರೈಕೆಗೆ ಅಗತ್ಯ ಕ್ರಮಕೈಗೊಳ್ಳಬೇಕು’ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ADVERTISEMENT

‘ಜನರ ಆರೋಗ್ಯ ಬಹಳ ಮುಖ್ಯ. ಸಾರ್ವಜನಿಕರಿಗೆ ಶುದ್ಧ ಮತ್ತು ಸಕಾಲಕ್ಕೆ ನೀರು ಕೊಡುವುದು ನಮ್ಮ ಆದ್ಯ ಆಗಬೇಕು. ಕುಡಿಯುವ ನೀರಿನ ಸೋರಿಕೆ, ಪೈಪ್‌ಲೈನ್ ದುರಸ್ತಿಯಂತಹ ಬೇರೆ ಬೇರೆ ಕಾರ್ಯಗಳಿಗೆಂದೇ‌ ಕನಿಷ್ಠ ₹ 40 ಲಕ್ಷ ಮೀಸಲಿರಿಸಿ, ಶುದ್ಧ ನೀರು ಪೂರೈಕೆಗೆ ಒತ್ತು ಕೊಡಬೇಕು ಎಂದು ಸೂಚಿಸಿದರು.

‘ ಪ್ರತಿ ದಿನ ಮೂರು ಭಾರಿ ಪರೀಕ್ಷೆಗೊಳಪಡಿಸಿದ ನಂತರವೇ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ರಾಯಚೂರು ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯ ಪ್ರಯೋಗಾಲಯ ಕೇಂದ್ರದಲ್ಲಿ ಸಹ ನೀರನ್ನು ಪರೀಕ್ಷಿಸಿ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು.

ತೆರಿಗೆ ಸಂಗ್ರಹದಲ್ಲಿ ಪ್ರಗತಿ:

‘ಮಹಾನಗರ ಪಾಲಿಕೆಯಿಂದ ರಾಯಚೂರು ನಗರ ವ್ಯಾಪ್ತಿಯಲ್ಲಿ ವಿಶೇಷ ಅಭಿಯಾನ ನಡೆಸಿ ತೆರಿಗೆ ಸಂಗ್ರಹದಲ್ಲಿ ಪ್ರಗತಿ ಸಾಧಿಸಲಾಗಿದೆ’ ಎಂದು ರಾಯಚೂರು ಪಾಲಿಕೆಯ ಆಯುಕ್ತ ಜುಬಿನ್‌ ಮೊಹಾಪಾತ್ರ ತಿಳಿಸಿದರು.

ರಾಯಚೂರು ನಗರಸಭೆಯು ಮಹಾನಗರ ಪಾಲಿಕೆಯಾಗಿ ಮೇಲ್ದರ್ಗೇರಿದ ಬಳಿಕ ಹೆಚ್ಚುವರಿ 75 ಪೌರ ಕಾರ್ಮಿಕರ ನೇಮಕಾತಿಯ ಪ್ರಸ್ತಾವದ ಬಗ್ಗೆ ಜಿಲ್ಲಾಧಿಕಾರಿ ನಿತೀಶ್ ಕೆ ಅವರು ಸಚಿವರ ಗಮನಕ್ಕೆ ತಂದರು.

ಸಭೆಯಲ್ಲಿಯೇ ಬೆಂಗಳೂರಿನ ಕಚೇರಿಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದ ಸಚಿವರು, ಪ್ರಸ್ತಾವದ ಬಗ್ಗೆ ಕೂಡಲೇ ಗಮನ ಹರಿಸಿ ಹೆಚ್ಚುವರಿ 75 ಪೌರ ಕಾರ್ಮಿಕರ ನೇಮಕಾತಿಯ ಪ್ರಕ್ರಿಯೆಯನ್ನು ಸಂಜೆಯೊಳಗೆ ಪೂರ್ಣಗೊಳಿಸಬೇಕು’ ಎಂದು ಸೂಚನೆ‌ ನೀಡಿದರು.

ರಾಯಚೂರು ನಗರ ವ್ಯಾಪ್ತಿಯಲ್ಲಿನ ಕೆರೆ ಜಾಗ, ಸ್ಮಶಾನ, ಉದ್ಯಾನ ಸೇರಿದಂತೆ ಜಾಗ ಸೇರಿದಂತೆ ಯಾವುದೇ ಜಾಗವು, ಯಾವುದೇ ವ್ಯಕ್ತಿಗಳಿಂದ ಅತಿಕ್ರಮಣವಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ರಾಯಚೂರು ನಗರಲ್ಲೆ ಒಟ್ಟು 52 ಎಂಎಲ್ ಡಿ ನೀರು ಪೂರೈಕೆಯಾಗುತ್ತಿದೆ. ಇದು ಸಾಕಾಗುತ್ತಿಲ್ಲ. ರಾಯಚೂರು ಸಿಟಿಗೆ ಹೆಚ್ಚುವರಿಯಾಗಿ 20 ಎಂಎಲ್ ಡಿಯಷ್ಟು ನೀರು ಅಗತ್ಯವಿದೆ. 3.20 ಲಕ್ಷ ಜನತೆಗೆ ಅನುಕೂಲವಾಗುವಂತೆ ಸಮರ್ಪಕ ನೀರು ಪೂರೈಕೆಗೆ ಕಾರ್ಯಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರಬೇಕಿದೆ’ ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ ಸಚಿವರಿಗೆ ತಿಳಿಸಿದರು.

ಮೈಸೂರು ನಂತರ ರಾಯಚೂರು ನಗರ ವ್ಯಾಪ್ತಿಯಲ್ಲಿಯೇ ಅತಿ ಹೆಚ್ಚು 36 ಕೊಳೆಗೇರಿಗಳಿವೆ. ಕೊಳೆಗೇರಿ ನಿವಾಸಿಗಳಿಗೆ ಪಾಲಿಕೆಯಿಂದ ಇ ಖಾತಾ ಪೂರೈಕೆಗೆ ಪರಿಶೀಲಿಸಬೇಕಿದೆ’ ಎಂದು ಶಾಸಕರು ತಿಳಿಸಿದರು.

ಮಸ್ಕಿ ಶಾಸಕ ಬಸನಗೌಡ ತುರವಿಹಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ., ಪಾಲಿಕೆಯ ಉಪ ಆಯುಕ್ಷೆ ಸಂತೋಷ ರಾಣಿ, ಪಾಲಿಕೆಯ ಸಮಿತಿ ಕಾರ್ಯದರ್ಶಿ ಶ್ರೀಕೃಷ್ಣ ಶಾವಂತಗೇರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.