
ರಾಯಚೂರು: ಜಿಲ್ಲೆಯಲ್ಲಿ ರಾತ್ರಿ ಹಾಗೂ ಬೆಳಗಿನ ಜಾವ ಆವರಿಸಿಕೊಳ್ಳುತ್ತಿರುವ ಚಳಿ ಜನ, ಜಾನುವಾರು ಹಾಗೂ ಬೆಳೆಗಳಿಗೂ ಸಂಕಷ್ಟ ತಂದೊಡ್ಡಿದೆ. ಜಾನುವಾರುಗಳು ಮೇಯಲು ಹಾಗೂ ರೈತರು ಹೊಲಗಳಿಗೆ ಹೋಗುವುದು ಕಷ್ಟವಾಗುತ್ತಿದೆ.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಶೀತಗಾಳಿ ಬೀಸುತ್ತಿದೆ. ರಾತ್ರಿ ಕನಿಷ್ಠ ತಾಪಮಾನ 14ರಿಂದ 11ರವರೆಗೂ ಕುಸಿಯುತ್ತಿದೆ. ಡಿಸೆಂಬರ್ 10ರಂದು ಸಹ ಕನಿಷ್ಠ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಈಗಲೂ ಸಂಜೆ 5.30ರ ವೇಳೆಗೆ ಚಳಿ ಆವರಿಸತೊಡಗಿದೆ.
ಮುಂದಿನ ಐದು ದಿನಗಳವರೆಗೆ ರಾತ್ರಿಯ ತಾಪಮಾನದಲ್ಲಿ ಸಾಮಾನ್ಯ ತಾಪಮಾನಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಶೀತದಿಂದ ಬೆಳೆಗಳನ್ನು ರಕ್ಷಿಸಲು ಸಂಜೆಯ ಸಮಯದಲ್ಲಿ ಲಘುವಾಗಿ ಆಗಾಗ ನೀರು ಹಾಯಿಸಬೆಕು ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಗ್ರಾಮೀಣ ಹವಾಮಾನ ಸೇವಾ ಘಟಕದ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಎಳೆಯ ಹಣ್ಣಿನ ಗಿಡಗಳನ್ನು ಒಣ ಹುಲ್ಲಿನ ಅಥವಾ ಪಾಲಿಥಿನ್ ಹಾಳೆಗಳು, ಗೋಣಿ ಚೀಲಗಳಿಂದ ರಕ್ಷಿಸಬೇಕು. ಹೂವು ಮತ್ತು ಕಾಯಿ ಉದುರುವುದನ್ನು ತಡೆಯಲು 0.25 ಮಿ.ಲೀ ನ್ಯಾಪ್ತಲಿನ್ ಎಸಿಟಿಕ್ ಎಸಿಡ್ (ಪ್ಲಾನೊಫಿಕ್ಸ್) ಮತ್ತು ಶೇಕಡ 1ರಷ್ಟು 19:19:19 (10 ಗ್ರಾಂ. ಪ್ರತಿ ಲೀಟರ್ ನೀರಿಗೆ) ಬೆರಸಿ ಸಿಂಪಡಿಸಬೇಕು ಎಂದು ಹೇಳಿದ್ದಾರೆ.
‘ಬೆಳಗಿನ ಸಮಯದಲ್ಲಿ ಮಂಜು ಬೀಳುವ ಸಾಧ್ಯತೆ ಇರುವುದರಿಂದ ಬೆಳೆಯಲ್ಲಿ ರೋಗಗಳ ಬಾಧೆ ಹೆಚ್ಚಾಗಿ ಕಂಡು ಬರುವ ಸಾಧ್ಯತೆ ಇದೆ. ರೈತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಶೀತ ವಾತಾವರಣದಲ್ಲಿ ಕಳಪೆ ಬೇರಿನ ಚಟುವಟಿಕೆಯಿಂದಾಗಿ ಸಸ್ಯವು ಪೋಷಕಾಂಶಗಳನ್ನು ಹೀರಿಕೊಳ್ಳುವುದಿಲ್ಲ. ಆದ್ದರಿಂದ ಪೋಷಕಾಂಶಗಳನ್ನು ಸಿಂಪಡಣೆಯ ಮೂಲಕ ಕೊಡಬೇಕು’ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ತಿಮ್ಮಣ್ಣ ನಾಯಕ ತಿಳಿಸಿದ್ದಾರೆ.
ರಾತ್ರಿ ಸಮಯದಲ್ಲಿ ಭತ್ತದ ನರ್ಸರಿ ಹಾಸಿಗೆಗಳನ್ನು ಪಾಲಿಥಿನ್ ಹಾಳೆಯಿಂದ ಮುಚ್ಚಿ ಬೆಳಿಗ್ಗೆ ತೆಗೆಯಬೇಕು. ಸಂಜೆ ನರ್ಸರಿ ಹಾಸಿಗೆಗಳಿಗೆ ನೀರು ಹಾಕಬೇಕು. ಬೆಳಿಗ್ಗೆ ನೀರನ್ನು ಹೊರಗೆ ತೆಗೆಯಬೇಕು ಎಂದು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.