ರಾಯಚೂರು: ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದಿಂದ(ಆರ್‌ಪಿಐ) ಲೋಕಸಭಾ ಚುನಾವಣೆಗೆ ರಾಜ್ಯದ 28 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು’ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎನ್.ಮೂರ್ತಿ ಹೇಳಿದರು.
‘ಕೆಲವೇ ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ದೇಶದಲ್ಲಿ ಕೋಮುಗಲಭೆ ಹೆಚ್ಚಾಗುತ್ತಿದೆ. ದುಬಾರಿ ಜಿ.ಎಸ್.ಟಿ, ಬೆಲೆ ಏರಿಕೆಯಿಂದ ನಾಗರಿಕರ ಜೀವನ ದುಸ್ತರವಾಗಿದೆ. ಬಂಡವಾಳಶಾಹಿಗಳು ಮತ್ತು ಭೂಮಾಲೀಕರ ಹಣ ದುಪ್ಪಟ್ಟಾಗಿ ಶ್ರೀಮಂತರು ಮತ್ತು ಬಡವರ ನಡುವಣ ಅಂತರ ಹೆಚ್ಚಾಗಿದೆ. ಕೇಂದ್ರ ಸರ್ಕಾರದಿಂದ ರಾಜಕೀಯ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿದೆ. ದೇಶದಲ್ಲಿನ ಸಣ್ಣ ಉದ್ಯಮ, ಕೈಗಾರಿಕೆಗಳು ನೆಲ ಕಚ್ಚಿವೆ. ಕೃಷಿ ಉತ್ಪನ್ನ ಇಳುವರಿ ಕುಸಿದಿದೆ. ರೈತರು ಕಂಗಾಲಾಗಿದ್ದಾರೆ. ನಿರುದ್ಯೋಗದ ಸಮಸ್ಯೆ ಹೆಚ್ಚಾಗಿದೆ. ನರೇಗಾ ಯೋಜನೆ ಸಮರ್ಪಕ ಜಾರಿಯಾಗದ ಕಾರಣ ಹಳ್ಳಿಯ ಜನರು ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಚುನಾವಣಾ ಪೂರ್ವ ತಯಾರಿಗಾಗಿ ಈಗಾಗಲೇ ಏಳು ರಾಜ್ಯಗಳಲ್ಲಿ ಪ್ರವಾಸ ಮಾಡಲಾಗಿದೆ. ಸಂವಿಧಾನ ಜಾರಿ ಜನಾಂದೋಲನ ಜಾಥಾವನ್ನು ಮಾರ್ಚ್ 18ರಿಂದ ಆರಂಭವಾಗಿದ್ದು, ಏಪ್ರಿಲ್ 1ರವರೆಗೆ ನಡೆಯಲಿದೆ. ಸ್ವಾತಂತ್ರ್ಯ ದೊರೆತು ಏಳು ದಶಕವಾದರೂ ಆಡಳಿತದ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಸಂವಿಧಾನದ ಆಶಯಗಳನ್ನು ಜಾರಿಗೊಳಿಸಿಲ್ಲ’ ಎಂದು ದೂರಿದರು.
ಈ ವೇಳೆ ಪಕ್ಷದ ಮುಖಂಡರಾದ ಎಂ. ಮನೋಹರ, ಬಶೀರ್ ಅಹ್ಮದ್, ಬಸವರಾಜ, ರಂಗಪ್ಪ, ಅಶೋಕ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.