ADVERTISEMENT

ಕಂಪ್ಯೂಟರ್ ತರಬೇತಿ ಕೇಂದ್ರದ ವಿರುದ್ಧ ಕ್ರಮಕ್ಕೆ ಒತ್ತಾಯ

ಡೇ-ನಲ್ಮ್ ಯೋಜನೆಯಡಿ ತರಬೇತಿ ನೀಡದೆ ಪರೀಕ್ಷೆ ನಡೆಸಲು ತಯಾರಿ ಆರೋಪ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 12:25 IST
Last Updated 28 ಜೂನ್ 2022, 12:25 IST
ಸಿರವಾರದಲ್ಲಿ ಎಸ್ಎಫ್ಐ ಮತ್ತು ಡಿವೈಎಫ್ಐ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣ ಪಂಚಾಯಿತಿ ಅಧಿಕಾರಿ ಹಂಪಯ್ಯ ಪಟೇಲ್ ಅವರಿಗೆ ಮನವಿ ಸಲ್ಲಿಸಿದರು
ಸಿರವಾರದಲ್ಲಿ ಎಸ್ಎಫ್ಐ ಮತ್ತು ಡಿವೈಎಫ್ಐ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣ ಪಂಚಾಯಿತಿ ಅಧಿಕಾರಿ ಹಂಪಯ್ಯ ಪಟೇಲ್ ಅವರಿಗೆ ಮನವಿ ಸಲ್ಲಿಸಿದರು   

ಸಿರವಾರ: ಪಟ್ಟಣ ಪಂಚಾಯಿತಿಯ ಡೇ-ನಲ್ಮ್ ಯೋಜನೆಯಡಿ ಕಂಪ್ಯೂಟರ್ ತರಬೇತಿ ನೀಡದೇ ನೇರವಾಗಿ ಪರೀಕ್ಷೆ ಬರೆಸಲು ತಯಾರಿ ನಡೆಸಿರುವ ಸ್ಥಳೀಯ ಕಂಪ್ಯೂಟರ್‌ ಸಂಸ್ಥೆಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಎಸ್ಎಫ್ಐ ಮತ್ತು ಡಿವೈಎಫ್ಐ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣ ಪಂಚಾಯಿತಿ ಅಧಿಕಾರಿ ಹಂಪಯ್ಯ ಪಟೇಲ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಬರೆದ ಮನವಿ ಪತ್ರದಲ್ಲಿ,‘ಡೇ-ನಲ್ಮ್ ಯೋಜನೆಯಡಿ ಕಂಪ್ಯೂಟರ್ ತರಬೇತಿಗೆ ಆಯ್ಕೆಯಾದ ಒಟ್ಟು 88 ವಿದ್ಯಾರ್ಥಿಗಳಿಗೆ
ಸರ್ಕಾರದ ಕಿಯೋನಿಕ್ಸ್ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್‌ ಸಂಸ್ಥೆ ಮೂರು ತಿಂಗಳು ತರಬೇತಿ ನೀಡಿ ಪರೀಕ್ಷೆ ನಡೆಸಬೇಕಾಗಿತ್ತು. ಆದರೆ ತರಬೇತಿ ನೀಡದೆಯೇ ಸಂಸ್ಥೆಯ ಮುಖ್ಯಸ್ಥರು ತರಬೇತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕರೆಮಾಡಿ ಪರೀಕ್ಷೆಗೆ ಹಾಜರಾದರೆ ಸಾಕು ನಾವು ತೇರ್ಗಡೆಗೊಳಿಸಿ ಪ್ರಮಾಣಪತ್ರ ನೀಡುತ್ತೇವೆ ಎಂದು ಹೇಳುತ್ತಾರೆ’ ಎಂದು ತಿಳಿಸಿದ್ದಾರೆ.

ಇದರಿಂದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಸಿಗುತ್ತದೆಯೇ ಹೊರತೂ ಅಗತ್ಯ ಜ್ಞಾನ ಸಿಗುವುದಿಲ್ಲ. ಕೊರೊನಾ ನೆಪವೊಡ್ಡಿ ಕಂಪ್ಯೂಟರ್ ತರಬೇತಿ ನೀಡದೇ ಕಾಟಾಚಾರಕ್ಕೆ ಎಂಬಂತೆ ನಿಯಮ ಬಾಹಿರವಾಗಿ ಜೂ.29 ರಂದು ಪರೀಕ್ಷೆ ಬರೆಸಲು ತಯಾರಿ ನಡೆಸಿದ್ದಾರೆ. ಅಧಿಕಾರಿಗಳು ಕಂಪ್ಯೂಟರ್ ಸಂಸ್ಥೆಯ ಪರವಾನಗಿ ರದ್ದುಗೊಳಿಸಬೇಕು ಮತ್ತು ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರ ಜತೆಗೆ 88 ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ನೀಡಲು ಬೇರೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ADVERTISEMENT

ಎಸ್ಎಫ್ಐನ ತಾಲ್ಲೂಕು ಘಟಕದ ಸಂಚಾಲಕ ಚಿದಾನಂದ ಕರಿಗೂಳಿ, ಡಿವೈಎಫ್ಐ ಪದಾಧಿಕಾರಿಗಳಾದ ಚಂದ್ರಶೇಖರ ಎಲೇರಿ, ಅರುಣ ಕುಮಾರ, ಸುದರ್ಶನ ಹಾಗೂ ನಂದಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.