ಸಭೆಯಲ್ಲಿ ಶಾಸಕರು ಗರಂ
– ಪ್ರಜಾವಾಣಿ ಚಿತ್ರ
ರಾಯಚೂರು: ಇಲ್ಲಿಯ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಕಾಂಗ್ರೆಸ್ ಶಾಸಕರೇ ವೈದ್ಯಕೀಯ ಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ವಿರುದ್ಧ ಹರಿಹಾಯ್ದರು.
ಜಿಲ್ಲೆಗೆ ಇಬ್ಬರು ಸಚಿವರಿದ್ದರೂ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಅಧಿಕಾರಿಗಳು ಸಭೆಗೆ ಕರೆಯದೇ ಶಾಸಕರನ್ನು ಅವಮಾನಿಸುತ್ತಿದ್ದಾರೆ. ಅಕ್ರಮ ವ್ಯವಹಾರಗಳು ಎಗ್ಗಿಲ್ಲದೇ ನಡೆದಿದೆ. ಪೊಲೀಸ್ ಗೂಂಡಾಗಿರಿ ಹೆಚ್ಚಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಶಿಷ್ಟಾಚಾರಕ್ಕೆ ಸಭೆ ನಡೆಸಿ ಹೋಗುತ್ತಿರುವ ಕಾರಣ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಶರಣಪ್ರಕಾಶ ಪಾಟೀಲ ವಿರುದ್ಧ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರುವಿಹಾಳ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯರಾದ ಬಸನಗೌಡ ಬಾದರ್ಲಿ, ಎ.ವಸಂತಕುಮಾರ, ಶರಣಗೌಡ ಪಾಟೀಲ ಬಯ್ಯಾಪುರ ಅವರೂ ತುರುವಿಹಾಳ ಅವರಿಗೆ ಸಾಥ್ ನೀಡಿದರು.
ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರು ಸಚಿವರ ಬೆಂಬಲಕ್ಕೆ ನಿಂತು, ‘ಕೇವಲ ನಿಮ್ಮ ಕ್ಷೇತ್ರದ್ದೇ ಮಾತನಾಡಿದರೆ, ನಮ್ಮ ಕ್ಷೇತ್ರದ ಬಗ್ಗೆ ಯಾವಾಗ ಹೇಳಬೇಕು’ ಪ್ರಶ್ನಿಸಿದರು. ದದ್ದಲ್ ಒಂದು ಹಂತದಲ್ಲಿ ಏಕವಚನ ಪ್ರಯೋಗ ಮಾಡಿದಾಗ ಬಸನಗೌಡ ಬಾದರ್ಲಿ ಅವರೂ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು.
ಸ್ವಪಕ್ಷೀಯ ಶಾಸಕರೇ ಕೆಡಿಪಿ ಸಭೆಯಲ್ಲಿ ಗರಂ ಆದ್ದರಿಂದ ಸಚಿವ ಶರಣಪ್ರಕಾಶ ಪಾಟೀಲ ತೀವ್ರ ಮುಜುಗರಕ್ಕೆ ಒಳಗಾಗಬೇಕಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.