ADVERTISEMENT

‘ಬಿಜೆಪಿಯಿಂದ ಹಣ ಪಡೆದು ಕಾಂಗ್ರೆಸ್‌ಗೆ ಮತಕೊಡಿ’

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 13:29 IST
Last Updated 5 ಏಪ್ರಿಲ್ 2021, 13:29 IST
ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಉಮಲೂಟಿ, ಕಲಮಂಗಿ ಹಾಗೂ ತುರ್ವಿಹಾಳದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರು ತೆರೆದ ವಾಹನದಲ್ಲಿ ಸೋಮವಾರ ಉಪಚುನಾವಣೆ ಪ್ರಚಾರ ನಡೆಸಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾರ್ಯಾಧ್ಯಕ್ಷ ದ್ರುವನಾರಾಯಣ, ಅಭ್ಯರ್ಥಿ ಬಸನಗೌಡ ತುರ್ವಿಹಾಳ, ಮುಖಂಡ ಹಂಪನಗೌಡ ಬಾದರ್ಲಿ ಇದ್ದರು
ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಉಮಲೂಟಿ, ಕಲಮಂಗಿ ಹಾಗೂ ತುರ್ವಿಹಾಳದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರು ತೆರೆದ ವಾಹನದಲ್ಲಿ ಸೋಮವಾರ ಉಪಚುನಾವಣೆ ಪ್ರಚಾರ ನಡೆಸಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾರ್ಯಾಧ್ಯಕ್ಷ ದ್ರುವನಾರಾಯಣ, ಅಭ್ಯರ್ಥಿ ಬಸನಗೌಡ ತುರ್ವಿಹಾಳ, ಮುಖಂಡ ಹಂಪನಗೌಡ ಬಾದರ್ಲಿ ಇದ್ದರು   

ತುರ್ವಿಹಾಳ (ರಾಯಚೂರು): ‘ಮಸ್ಕಿ ಉಪಚುನಾವಣೆ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿರುವ ಬಿ.ವೈ.ವಿಜಯೇಂದ್ರ ದುಡ್ಡು ತೆಗೆದುಕೊಂಡು‌ ಬಂದಿದ್ದಾರೆ. ಅವರಿಂದ ದುಡ್ಡು ಪಡೆದುಕೊಂಡರೂ ಕಾಂಗ್ರೆಸ್‌ ಅಭ್ಯರ್ಥಿಗೇ ಮತಕೊಡಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮತದಾರರಿಗೆ ಮನವಿ ಮಾಡಿದರು.

ಸಿಂಧನೂರು ತಾಲ್ಲೂಕಿನ ತುರ್ವಿಹಾಳದಲ್ಲಿ ಕಾಂಗ್ರೆಸ್‌ನಿಂದ ಸೋಮವಾರ ಆಯೋಜಿಸಿದ್ದ ಮಸ್ಕಿ ಉಪಚುನಾವಣೆ ಪ್ರಚಾರ ಬಹಿರಂಗ ಸಭೆಯಲ್ಲಿ ಮಾತನಾಡಿದರು.

‘ವಿಜಯೇಂದ್ರ ಶಾಸಕರೂ ಅಲ್ಲ, ಸಚಿವರೂ ಅಲ್ಲ. ಅವರ ಬಳಿ ಇರುವುದು ಜನರು ತೆರಿಗೆ ಕಟ್ಟಿರುವ ಹಣ’ ಎಂದರು.

ADVERTISEMENT

‘ಯಾರೇ ಆಗಲಿ ಪಕ್ಷದಿಂದ ಗೆದ್ದ‌ ಬಳಿಕ ಆ ಪಕ್ಷಕ್ಕೆ ನಿಷ್ಠವಾಗಿರಬೇಕಾಗಿದ್ದು ಶಾಸಕರ ಕರ್ತವ್ಯ. ಸಂತೆಯಲ್ಲಿ ಜಾನುವಾರಗಳು ಮಾರಾಟವಾದಂತೆ ಶಾಸಕರಾಗಿದ್ದ ಪ್ರತಾಪಗೌಡ ಅವರು ₹30 ಕೋಟಿ ಪಡೆದು ತಮ್ಮನ್ನು ತಾವು ಮಾರಾಟ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ಕ್ಷೇತ್ರದ ಮತದಾರರ ಗೌರವಕ್ಕೆ‌ಚ್ಯುತಿ ತಂದವರನ್ನು ಸಹಿಸಿಕೊಳ್ಳಬಾರದು. ಯಡಿಯೂರಪ್ಪ ಅವರು ಯಾವುದೇ ಅಭಿವೃದ್ಧಿ ಮಾಡಿಲ್ಲ. ಕೊಟ್ಟಿರುವ ಯೋಜನೆ ಕಿತ್ತುಕೊಳ್ಳುತ್ತಿದ್ದಾರೆ. ಕರ್ನಾಟಕವು ಹಸಿವು ಮುಕ್ತ ಆಗಬೇಕು ಎಂದು 7 ಕೆಜಿ ಅಕ್ಕಿ ಕೊಟ್ಟಿದ್ದೇವು. ನನ್ನ ಮನೆಯಿಂದ ಕೊಟ್ಟಿರಲಿಲ್ಲ. ಆದರೆ ಯಡಿಯೂರಪ್ಪ ಅಕ್ಕಿ ಕಡಿತಗೊಳಿಸಿದ್ದಾರೆ’ ಎಂದು ಟೀಕಿಸಿದರು.

‘ಕಾಂಗ್ರೆಸ್ ಅಧಿಕಾರವಿದ್ದ ಅವಧಿಯಲ್ಲಿ ಮಸ್ಕಿ ಕ್ಷೇತ್ರದ ಅಭಿವೃದ್ಧಿಗಾಗಿ ₹5 ಸಾವಿರ ಕೋಟಿ ಅನುದಾನ‌ ನೀಡಿದ್ದೇನೆ‌. ನಂದವಾಡಗಿ ಏತ‌ ನೀರಾವರಿ ಯೋಜನೆಗೆ ₹2 ಸಾವಿರ ಕೋಟಿ, ರಸ್ತೆಗಳ‌ ಅಭಿವೃದ್ಧಿ, ಕೆರೆ ತುಂಬಿಸಲು ಮತ್ತು ಶಾಲಾ, ಕಾಲೇಜುಗಳ ನಿರ್ಮಾಣಕ್ಕಾಗಿ ಅನುದಾ‌ನ ಕೊಟ್ಟಿದ್ದರೂ ಪ್ರತಾಪಗೌಡ ಹೇಳದೆ, ಕೇಳದೆ ಪಕ್ಷ ತೊರೆದಿದ್ದಾರೆ’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ‘ಅನೈತಿಕ ರಾಜಕಾರಣ ಮಾಡುತ್ತಿರುವ ಬಿಜೆಪಿಯರಿಗೆ ಮತದಾರರು ತಕ್ಕ ಪಾಠ ಕಲಿಸಲು ಬಸನಗೌಡ ತುರ್ವಿಹಾಳ ಅವರನ್ನು ಆಯ್ಕೆ ಮಾಡಬೇಕು’ ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ, ಕಾಂಗ್ರೆಸ್ ಅಭ್ಯರ್ಥಿ ‌ಬಸನಗೌಡ ತುರ್ವಿಹಾಳ, ಮುಖಂಡ ಅಮರೇಗೌಡ ಬಯ್ಯಾಪುರ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.