ಸಿಂಧನೂರು ತಾಲ್ಲೂಕಿನ ಬೊಮ್ಮನಾಳ ಮತ್ತು ಚಿರತ್ನಾಳ ಗ್ರಾಮದ ಮಧ್ಯದಲ್ಲಿರುವ ಹಳ್ಳದ ಸೇತುವೆ ನಿರ್ಮಾಣ ಕಾಮಗಾರಿ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿರುವುದು
ಸಿಂಧನೂರು: ತಾಲ್ಲೂಕಿನ ಅವಳಿ ಗ್ರಾಮಗಳಾದ ಬೊಮ್ಮನಾಳ ಮತ್ತು ಚಿರತ್ನಾಳ ಮಧ್ಯದಲ್ಲಿರುವ ಹಳ್ಳದ ಸೇತುವೆ ನಿರ್ಮಾಣ ಪ್ರಾರಂಭವಾಗಿ ಮೂರು ವರ್ಷ ಗತಿಸಿದೆ. ಒಂದೆರಡು ಪಿಲ್ಲರ್‌ಗಳು ಹಾಕಿದ್ದನ್ನು ಹೊರತುಪಡಿಸಿದರೆ ಸೇತುವೆ ನಿರ್ಮಾಣ ಕಾರ್ಯ ಸಂಪೂರ್ಣ ನನೆಗುದಿಗೆ ಬಿದ್ದಿದೆ.
ಬೊಮ್ಮನಾಳ ಗ್ರಾಮದಿಂದ ಚಿರತ್ನಾಳಗೆ ಹೋಗಲು ಹಳ್ಳಕ್ಕೆ ಈ ಹಿಂದೆ ಇದ್ದ ಕಲ್ಲು ಜೋಡಣೆಯ ಕಿರು ಸೇತುವೆಯನ್ನು ತೆಗೆದು ಎತ್ತರದ ಸೇತುವೆ ನಿರ್ಮಾಣ ಮಾಡಲು ಮೂರು ವರ್ಷದ ಹಿಂದೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡರ ಅಧಿಕಾರ ಅವಧಿಯಲ್ಲಿ ದೇವರಗುಡಿ, ಪಗಡದಿನ್ನಿ, ಬೊಮ್ಮನಾಳ ಮತ್ತು ಚಿರತ್ನಾಳ ನಡುವಿನ ಹಳ್ಳದ ಸೇತುವೆಗಳಿಗೆ ₹10 ಕೋಟಿ ಬಿಡುಗಡೆ ಮಾಡಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿತ್ತು. ದೇವರಗುಡಿ ಮತ್ತು ಪಗಡದಿನ್ನಿ ಸೇತುವೆಗಳು ಪೂರ್ಣಗೊಂಡು 1 ವರ್ಷ ಗತಿಸಿದೆ. ಪ್ರಸ್ತುತ ಸೇತುವೆಗೆ ಮಾತ್ರ ಕಾಯಕಲ್ಪ ಸಿಗುತ್ತಿಲ್ಲ. ಈ ಸೇತುವೆಗೆ ₹3 ಕೋಟಿಯನ್ನು ಕಾಯ್ದಿರಿಸಿ ಬಿಜಾಪೂರ ಮೂಲದ ಶಂಕ್ರಗೌಡ ಹೊಸಮನಿ ಎಂಬ ವ್ಯಕ್ತಿ ಗುತ್ತಿಗೆ ಪಡೆದಿದ್ದಾರೆ.
ರಾಜ್ಯ ತಾಂತ್ರಿಕ ಸಲಹೆಗಾರರಿಂದ ಪ್ರಮಾಣಪತ್ರ ಪಡೆದು ಹೊಸದಾಗಿ ಕ್ರಿಯಾಯೋಜನೆಯನ್ನು ತಯಾರಿಸಿ ಅನುಮತಿಗಾಗಿ ಇಲಾಖೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿಗೆ ಕಳುಹಿಸಿಕೊಡಲಾಗಿದೆ. ಇನ್ನು ಹದಿನೈದು ದಿನದೊಳಗೆ ಅನುಮತಿ ದೊರೆಯುತ್ತದೆ. ನವೆಂಬರ್ ತಿಂಗಳಲ್ಲಿ ಕಾಮಗಾರಿ ಮುಗಿಸುತ್ತೇವೆಭರತ್ಕುಮಾರ, ಸಹಾಯಕ ಕಾರ್ಯಪಾಲಕ ಎಂಜನಿಯರ್, ಪಿಎಂಜೆಎಸ್‍ವೈ
ಕಾಮಗಾರಿ ನನೆಗುದಿಗೆ ಬಿದ್ದಿರುವ ಕುರಿತು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭರತ್‍ಕುಮಾರ ಅವರನ್ನು ಸಂಪರ್ಕಿಸಿದಾಗ ‘ಅಂದಾಜು ಪತ್ರಿಕೆ ತಯಾರಿಸುವ ಸಮಯದಲ್ಲಿ ಗ್ರಾಮೀಣ ಪ್ರದೇಶದ ಸೇತುವೆ ಆಗಿದ್ದರಿಂದ 6 ಮೀಟರ್ ಆಳ ತೋಡಲು ಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ 8 ತಿಂಗಳು ಸತತ ನೀರು ಇರುವ ಕಾರಣ ಹಾಗೂ ಒಂದು ಕಡೆಯಾದರೆ ಕಪ್ಪು ಮಣ್ಣಿನ ಸಮಸ್ಯೆ ಉದ್ಭವಿಸಿದ್ದರಿಂದ 40 ಮೀಟರ್‌ವರೆಗೆ ಅಡಿಪಾಯ ಸಿಗಲಿಲ್ಲ. ಇದರಿಂದ ರಾಜ್ಯ ತಾಂತ್ರಿಕ ಸಲಹೆಗಾರರಿಂದ ಪ್ರಮಾಣಪತ್ರ ಪಡೆದು ಹೊಸದಾಗಿ ಕ್ರಿಯಾಯೋಜನೆಯನ್ನು ತಯಾರಿಸಿ ಅನುಮತಿಗಾಗಿ ಇಲಾಖೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿಗೆ ಕಳುಹಿಸಿ ಕೊಡಲಾಗಿದೆ. ಇನ್ನು ಹದಿನೈದು ದಿನದೊಳಗೆ ಅನುಮತಿ ದೊರೆಯುತ್ತದೆ. ನವೆಂಬರ್ ತಿಂಗಳಲ್ಲಿ ಕಾಮಗಾರಿ ಮುಗಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.
ಯಾವಾಗ ಬರುತ್ತಾರೋ, ಯಾವಾಗ ಹೋಗುತ್ತಾರೋ:
ಲಿಂಗಸುಗೂರಿನಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಕಚೇರಿ ಇದೆ. ಸಿಂಧನೂರಿಗೆ ಅಧಿಕಾರಿಗಳು ಯಾವಾಗ ಬರುತ್ತಾರೋ, ಯಾವಾಗ ಹೋಗುತ್ತಾರೋ ತಿಳಿಯುತ್ತಿಲ್ಲ. ದೂರವಾಣಿಯಲ್ಲಿ ಕಿರಿಯ ಎಂಜಿನಿಯರ್ ಮೇಡಂ ಅವರನ್ನು ಕೇಳಿದರೆ ‘ಎಸ್ಟಿಮೇಟ್ ಬದಲಾಗಿದೆ. ಬೇಕಾದ್ರೆ ಸಾಹೇಬ್ರನ್ನೇ ಕೇಳಿ’ ಎಂದು ಹೇಳುತ್ತಾರೆ. ಕಳೆದ ಮೂರು ವರ್ಷದಿಂದ ಇದೇ ಮಾತನ್ನೇ ಹೇಳುತ್ತಿದ್ದಾರೆ ಹೊರತು ಸೇತುವೆ ನಿರ್ಮಾಣ ಕೆಲಸದ ಕುರಿತು ಪ್ರಗತಿ ಮಾತ್ರ ಏನು ಹೇಳುತ್ತಿಲ್ಲ’ ಎಂದು ಚಿರತ್ನಾಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ನಿರ್ಲಕ್ಷ್ಯ ವಹಿಸಿದರೆ ಹೋರಾಟ:
ಸಣ್ಣ ಹಳ್ಳ ಬಂದರೂ ಹಳ್ಳ ದಾಟಿ ಬೊಮ್ಮನಾಳಕ್ಕೆ ಬರಲು ಕಷ್ಟವಾಗುತ್ತಿದೆ ಇದ್ದ ಕಿರು ಸೇತುವೆಯನ್ನು ‘ಕಿತ್ತೆಸೆದು ನಮಗೆ ಅನ್ಯಾಯ ಮಾಡಿದ್ದಾರೆ. ಹಳ್ಳ ಬಂದರೆ ಪ್ರತಿನಿತ್ಯ ಶಾಲಾ–ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ವ್ಯವಹಾರ, ವಹಿವಾಟು, ಸರ್ಕಾರಿ ಕಚೇರಿಗಳಿಗೆ ಸಿಂಧನೂರಿಗೆ ಹೋಗದೆ ಮನೆಯಲ್ಲಿಯೇ ಕುಳಿತುಕೊಳ್ಳಬೇಕಾದ ಪರಿಸ್ಥಿತಿಯಿದೆ’ ಎಂದು ಅಳಲು ತೊಂಡಿಕೊಂಡ ಚಿರತ್ನಾಳ ಗ್ರಾಮಸ್ಥರಾದ ಶರಣೇಗೌಡ, ಮಲ್ಲಿಕಾರ್ಜುನ ಹಾಗೂ ಶರಣಪ್ಪ ಅವರು ‘ಆದಷ್ಟು ಶೀಘ್ರ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿ ಗುಣಮಟ್ಟದ ಕೆಲಸ ಮಾಡಿ ಪೂರ್ಣಗೊಳಿಸಿ ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ನಾಲ್ಕು ಗ್ರಾಮಗಳ ನಿವಾಸಿಗಳೆಲ್ಲ ಬೃಹತ್ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.