ADVERTISEMENT

ಕಲ್ಮಲಾ ಕರಿಯಪ್ಪ ತಾತಾ ಜಾತ್ರೆ ಕೋವಿಡ್‌ ಕಾರಣಕ್ಕೆ ರದ್ದು

ಕಲ್ಮಲಾ ಕರಿಯಪ್ಪ ತಾತಾ ಜಾತ್ರೆಯನ್ನು ರದ್ದುಪಡಿಸಲಾಗಿದೆ

ಬಾವಸಲಿ
Published 21 ಜುಲೈ 2020, 19:30 IST
Last Updated 21 ಜುಲೈ 2020, 19:30 IST
   

ರಾಯಚೂರು: ಹಿಂದು ಧಾರ್ಮಿಕ ಹಬ್ಬಗಳಲ್ಲಿ ಶ್ರಾವಣ ಮಾಸ ವಿಶೇಷವಾಗಿ ಗುರುತಿಸಿಕೊಂಡಿದೆ. ಶ್ರಾವಣ ಮಾಸದಲ್ಲಿ ಪರಶಿವನನ್ನು ಒಲೈಸಲು ವ್ರತ ಆಚರಣೆ, ದೇವಸ್ಥಾನಗಳಲ್ಲಿ ಪುರಾಣ–ಪ್ರವಚನ, ಭಜನೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ.

ಈ ಮಾಸದಲ್ಲಿ ದೇವಸ್ಥಾನಗಳೆಲ್ಲ ಕಡೆಗೂ ಅಲಂಕಾರ ಮಾಡಲಾಗುತ್ತದೆ. ಭಕ್ತರು ಶಿವನ ಧ್ಯಾನದಲ್ಲಿ ಮಗ್ನರಾಗುವುದು ಸಾಮಾನ್ಯ. ಆದರೆ, ಶ್ರಾವಣ ಮಾಸಕ್ಕೆ ಕೊರೊನಾ ಮಹಾಮಾರಿ ಆವರಿಸಿಕೊಂಡಿದ್ದು, ಈ ಸಲ ಸಾಮೂಹಿಕ ಧಾರ್ಮಿಕ ಆಚರಣೆಗೆ ಕಂಟಕವಾಗಿದೆ.

ದೇಶದಾದ್ಯಂತ ಕೊರೊನಾದಿಂದಾಗಿ ಸಾವು ನೋವಿಗೆ ಕಾರಣವಾಗಿದೆ. ಸೋಂಕು ಹರಡುವ ಪ್ರಮಾಣವೂ ವಿಸ್ತರಿಸುತ್ತಿದ್ದು ಆತಂಕ ಉಂಟು ಮಾಡಿದೆ. ಇದಕ್ಕಾಗಿಯೇ ಸರ್ಕಾರವು ಈ ಬಾರಿ ಶ್ರಾವಣ ಮಾಸದಲ್ಲಿ ಆಚರಣೆ ಮಾಡುವ ಸಾಮೂಹಿಕ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಿರುವುದು, ಭಕ್ತರಲ್ಲಿ ನಿರಾಸೆ ಹುಟ್ಟುಹಾಕಿದೆ ಎನ್ನಬಹುದು.

ADVERTISEMENT

ತಾಲ್ಲೂಕಿನ ದೇವಸುಗೂರಿನ ಸುಕ್ಷೇತ್ರ ಸೂಗೂರೇಶ್ವರ ದೇವಸ್ಥಾನ, ನಗರದ ಕಿಲ್ಲೆ ಬೃಹನ್ಮಠ, ಸೋಮವಾರಪೇಟೆ ಮಠ, ಚೀಕಲಪರ್ವಿಯ ಮುನೇಶ್ವರ ಮಠ ಸೇರಿ ಹಲವು ಮಠ,ಮಂದಿರಗಳಲ್ಲಿ ಭಕ್ತರು ಶ್ರಾವಣ ಮಾಸಪೂರ್ತಿ ಶಿವನ ಆರಾಧನೆಯಲ್ಲಿ ತೊಡಗುವ ಮೂಲಕ ವಿವಿಧ ಧಾರ್ಮಿಕ ವಿಧಿ ವಿಧಾನ ನೆರವೇರಿಸುತ್ತಿದ್ದರು. ಮುಖ್ಯವಾಗಿ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಸಾಮೂಹಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸಾಮಾನ್ಯವಾಗಿತ್ತು. ಈಗ ಕೊರೊನಾ ಮಹಾಮಾರಿಯು ವೃದ್ಧರಿಗೆ, ಚಿಕ್ಕ ಮಕ್ಕಳಿಗೆ ಕೊರೊನಾ ಮಾರಕವಾಗಿದೆ. ಇದರಿಂದ ಈ ಬಾರಿ ಎಲ್ಲಾ ಸಾಮೂಹಿಕ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.

ಜಾತ್ರೆಗಳಿಗೂ ತಟ್ಟಿದ ಕೊರೊನಾ ಬಿಸಿ: ಶ್ರಾವಣ ಮಾಸದಲ್ಲಿ ತಾಲ್ಲೂಕಿನ ಕಲ್ಮಲಾದ ಕರಿಯಪ್ಪ ತಾತಾ ಜಾತ್ರೆಯು ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ. ಒಂದು ತಿಂಗಳುಪೂರ್ತಿ ಜಿಲ್ಲೆ ಮಾತ್ರವಲ್ಲದೇ ಪಕ್ಕದ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದರು. ಈ ಜಾತ್ರೆಯಲ್ಲಿ ವಿಶೇಷವೆಂದರೆ, ಉತ್ತರ ಕರ್ನಾಟಕ ಭಾಗದಲ್ಲಿಯೇ ಅತಿಹೆಚ್ಚು ತೆಂಗಿನ ಮಾರಾಟವಾಗುವುದು. ರಾಯಚೂರು ನಗರದಿಂದ ಆರಂಭಿಸಿ 20 ಕಿಲೋ ಮೀಟರ್‌ ಕಲ್ಮಲಾವರೆಗೂ ರಸ್ತೆ ಪಕ್ಕದಲ್ಲಿ ತೆಂಗಿನ ಕಾಯಿ ವ್ಯಾಪಾರಿಗಳು ಅಲ್ಲಲ್ಲಿ ಕುಳಿತುಕೊಳ್ಳುತ್ತಿದ್ದರು.

ಜನರಿಗೆ ವ್ಯಾಪಾರದ ಮೂಲಕ ಆಸರೆಯಾಗುತ್ತಿತ್ತು. ಈ ಬಾರಿ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಜಾತ್ರೆಯನ್ನು ರದ್ದುಪಡಿಸಿ ಆದೇಶ ನೀಡಲಾಗಿದೆ. ಅಲ್ಲದೇ ನೆರೆಯ ಆಂದ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಶ್ರಿ ಉರುಕುಂದ ಈರಣ್ಣ ಸ್ವಾಮಿಯ ದರ್ಶನಕ್ಕಾಗಿ ಜಿಲ್ಲೆಯಿಂದ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ತೆರಳುತ್ತಿದ್ದರು. ಈ ಬಾರಿ ಅದು ಕೂಡಾ ರದ್ದಾಗಿದೆ.

ಶ್ರಾವಣ ಮಾಸದ ಆಚರಣೆ: ಶ್ರಾವಣ ಶಿವನ ಮಾಸ. ಪರಮೇಶ್ವರನ ಸಂಪೂರ್ಣ ಸಾನಿಧ್ಯ ಇರುತ್ತದೆ ಎನ್ನುವುದು ಪ್ರತೀತಿ. ಶಿವ ಭಕ್ತರು 16 ಸೋಮವಾರಗಳ ವ್ರತ ಮಾಡುತ್ತಾರೆ. ಈ ಮಾಸದಲ್ಲಿ ಹಿಂದುಗಳು ಕೇವಲ ಸಾತ್ವಿಕ ಆಹಾರ ಸೇವಿಸಿ ಮಾಂಸಾಹಾರ ತ್ಯಾಜಿಸುತ್ತಾರೆ. ಇದಕ್ಕಾಗಿ ಒಂದು ದಿನದ ಮುಂಚೆಯೇ ಮನೆಯನ್ನು ಶುಭ್ರಗೊಳಿಸಲಾಗುತ್ತದೆ. ಶ್ರಾವಣ ಮಾಸ ಮಾನವರಲ್ಲಿ ಮಾತ್ರವಲ್ಲದೇ ಪ್ರಕೃತಿಯಲ್ಲೂ ಅನೇಕ ಬದಲಾವಣೆ ಮಾಡುತ್ತದೆ.

ಮಹಿಳೆಯರಿಗೆ ಬಿಡುವಿಲ್ಲದ ಕೆಲಸ, ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿ, ಶಿವನ ಜೊತೆಗೆ ಗೌರಿಪೂಜೆ ಮಾಡಿ ಗೌರಿ ವ್ರತ ಆಚರಣೆ ಮಾಡಲಾಗುತ್ತದೆ. ಅಲ್ಲದೇ ಸುಮಂಗಲಿಯರಿಗೆ ಅರಿಷಿಣ, ಕುಂಕುಮ, ಬಾಗಿನ ಕೊಡುವ ಸಂಪ್ರದಾಯವಿದೆ.

ಪವಿತ್ರ ಶ್ರಾವಣ ಮಾಸದ ಆಚರಣೆಯ ಸಂದರ್ಭದಲ್ಲಿ ಕೊರೊನಾ ಕೇಕೆ ಹಾಕುತ್ತಿದ್ದು ಸಾವಿನ ಸಂಖ್ಯೆ ಒಂದಡೆ ಏರಿಕೆಯಾಗುತ್ತಿದ್ದು, ಸೋಂಕಿತರ ಸಂಖ್ಯೆ ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.