
ಶಕ್ತಿನಗರ: ಇಲ್ಲಿನ ಗಡಿಯಲ್ಲಿನ ಚೆಕ್‌ಪೋಸ್ಟ್‌ನಲ್ಲಿ ಕೋವಿಡ್ ತಪಾಸಣೆ ನಿಲ್ಲಿಸಲಾಗಿದೆ. ಇದರಿಂದಾಗಿ ಜನರು ಪರದಾಡುವಂತಾಗಿದೆ.
ದೇವಸೂಗೂರು ಮತ್ತು ಡಿ.ಯದ್ಲಾಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗುತ್ತಿರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
‘ಗಡಿ ಚೆಕ್‌ಪೋಸ್ಟ್‌ನಲ್ಲಿ ನೆರೆಯ ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಮೂಲಕ ಕರ್ನಾಟಕ ಪ್ರವೇಶಿಸುವವರ ವಾಹನಗಳ ಸಂಖ್ಯೆ ಮತ್ತು ಚಾಲಕರ ಹೆಸರುಗಳನ್ನು ಮಾತ್ರ ಬರೆದುಕೊಳ್ಳಲಾಗುತ್ತಿದೆ. ತಪಾಸಣೆ ಮಾಡುತ್ತಿಲ್ಲ’ ಎಂದು ದೇವಸೂಗೂರು ಗ್ರಾಮ ಪಂಚಾಯಿತಿ ಸದಸ್ಯ ವಿ.ಬಾಬು ಆರೋಪ ಮಾಡುತ್ತಾರೆ.
ಕೋವಿಡ್ ತಪಾಸಣೆಗಾಗಿ ರಾಯಚೂರು ನಗರಕ್ಕೆ ತೆರಳಬೇಕು. ಜನತಾ ಕರ್ಫ್ಯೂ ಇರುವುದರಿಂದ ಜನರಿಗೆ ಹೋಗಲು ತೊಂದರೆ ಆಗುತ್ತಿದೆ.
ಇಂಥ ಸಂದರ್ಭದಲ್ಲಿ ದೇವಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ತಪಾಸಣೆ ಕೇಂದ್ರಗಳನ್ನು ತೆರೆಯಬೇಕು. ಆರೋಗ್ಯ ಇಲಾಖೆ ಆರ್‌ಟಿಪಿಎಸ್ ಆಸ್ಪತ್ರೆಯಲ್ಲಿ ಜನರಿಗೆ ಸಾಕಾಗುವಷ್ಟು ಲಸಿಕೆ ದಾಸ್ತಾನು ಮಾಡಬೇಕು.
ಲಸಿಕೆ ಹಾಕಿಸಿಕೊಳ್ಳಲು ಆರ್‌ಟಿಪಿಎಸ್ ಆಸ್ಪತ್ರೆಗೆ ಹೆಚ್ಚು ಜನರು ಬರುತ್ತಿದ್ದಾರೆ. ಹಾಗಾಗಿ ಪ್ರತ್ಯೇಕವಾಗಿ ದೇವಸೂಗೂರು ಉಪ ಆರೋಗ್ಯ ಕೇಂದ್ರದಲ್ಲಿ ಲಸಿಕಾ ಕೇಂದ್ರ ತೆರೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
‘ಸರ್ಕಾರದ ಆದೇಶದ ಕಾರಣ ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ಕೋವಿಡ್ ತಪಾಸಣೆ ನಿಲ್ಲಿಸಲಾಗಿದೆ’ ಎಂದು ಆರೋಗ್ಯ ಅಧಿಕಾರಿ ಡಾ.ಶಾಕೀರ್ ತಿಳಿಸಿದರು.
ಆರ್‌ಟಿಪಿಎಸ್ ಆಸ್ಪತ್ರೆಯಲ್ಲಿ ಕೋವಿಡ್ ತಪಾಸಣೆ ಕೇಂದ್ರ ತೆರೆಯಲಾಗಿದೆ. ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್‌ಗಳಿಗೆ ತರಬೇತಿ ನೀಡಲಾಗಿದೆ. ಅಲ್ಲಿಗೆ ಹೋಗಿ, ತಪಾಸಣೆ ಮಾಡಿಕೊಳ್ಳಬಹುದು ಎಂದರು.
ಆರ್‌ಟಿಪಿಎಸ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಈಗಾಗಿ ಕೋವಿಡ್ ತಪಾಸಣೆಗೆ ತೊಂದರೆ ಆಗುತ್ತಿದೆ ಎಂಬ ಪ್ರಶ್ನೆಗೆ, ಇದ್ದ ಸಿಬ್ಬಂದಿ ಬಳಕೆ ಮಾಡಿಕೊಂಡು ತಪಾಸಣೆ ಮಾಡಬೇಕು. ಸದ್ಯಕ್ಕೆ ಲಸಿಕೆ ದಾಸ್ತಾನು ಕಡಿಮೆಯಾಗಿದೆ. ದಾಸ್ತಾನಿಗೆ ತಕ್ಕಂತೆ ಎಲ್ಲೆಡೆ ಲಸಿಕೆ ಪೂರೈಕೆ ಮಾಡಲಾಗುತ್ತಿದೆ. ಅಗತ್ಯ ಬಿದ್ದಲ್ಲಿ ದೇವಸೂಗೂರು ಉಪ ಆರೋಗ್ಯ ಕೇಂದ್ರದಲ್ಲಿ ಲಸಿಕಾ ಕೇಂದ್ರ ತೆರೆಯಲಾಗುವುದು ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.