ADVERTISEMENT

ಪ್ಯಾಕೇಜ್ ನೀಡಲು ಒತ್ತಾಯ: ಶಾಸಕರ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 13:54 IST
Last Updated 15 ಜೂನ್ 2021, 13:54 IST
ರಾಯಚೂರಿನ ಜಿಲ್ಲಾಡಳಿತ ಕಚೇರಿಗೆ ಎಡ ಪಕ್ಷಗಳ ಮುಖಂಡರು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಿದರು
ರಾಯಚೂರಿನ ಜಿಲ್ಲಾಡಳಿತ ಕಚೇರಿಗೆ ಎಡ ಪಕ್ಷಗಳ ಮುಖಂಡರು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಿದರು   

ರಾಯಚೂರು: ಕೋವಿಡ್ ಹಾಗೂ ಲಾಕ್‍ಡೌನ್‍ ದುಃಸ್ಥಿತಿಗೆ ಪರಿಹಾರಗಳ ಸಮರ್ಪಕ ಪ್ಯಾಕೇಜ್ ನೀಡಲು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ), ಸಿಪಿಐ, ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ(ಸಿ) ಸ್ವರಾಜ್ ಇಂಡಿಯಾ ಸೇರಿದಂತೆ ಎಡ ಪಕ್ಷಗಳ ಪದಾಧಿಕಾರಿಗಳು ಶಾಸಕ ಡಾ. ಶಿವರಾಜ್ ಪಾಟೀಲ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಆನಂತರ ಶಾಸಕರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ತಜ್ಞರ ಸೂಚನೆಯಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದರಿಂದ ಕೋವಿಡ್ ಎರಡನೇ ಅಲೆ ಬಂದಿದೆ. ಇದರಿಂದ ಅನೇಕ ಸಾವು ನೋವು ಸಂಭವಿಸಿವೆ ಎಂದು ಆರೋಪಿಸಿದರು.

ADVERTISEMENT

ಉಚಿತ ಹಾಗೂ ಸಾರ್ವತ್ರಿಕ ಲಸಿಕೆ ನೀಡಲು ಕೂಡಲೇ ಕ್ರಮ ವಹಿಸಬೇಕು. ಕೇಂದ್ರ ಸರ್ಕಾರದಿಂದ ಬರಬೇಕಾದ ಜಿಎಸ್‍ಟಿ ಪಾಲನ್ನು ಪಡೆಯಬೇಕು. ಸಮಗ್ರ ಪರಿಹಾರದ ಪ್ಯಾಕೇಜ್ ಮೊತ್ತವನ್ನು ಘೋಷಿಸಬೇಕು ಎಂದು ಆಗ್ರಹಿಸಿದರು.

ಸತ್ತ ಎಲ್ಲಾ ನಾಗರೀಕರಿಗೆ ಮತ್ತು ಆನಾಥ ಮಕ್ಕಳಿಗೆ ಪರಿಹಾರ ನೀಡಬೇಕು. ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ಎಲ್ಲಾ ಕುಟುಂಬಗಳಿಗೆ ಮಾಸಿಕ ಆಹಾರಧಾನ್ಯ ಮತ್ತು ಆರೋಗ್ಯ ಸುರಕ್ಷಿತ ಸಾಮಗ್ರಿಗಳ ಪೊಟ್ಟಣ ನೀಡಬೇಕು. ಕೇಂದ್ರ ಸರ್ಕಾರದ ಸಹಾಯ ಪಡೆದು ₹10ಸಾವಿರ ನೆರವು ಕೋವಿಡ್ ನಿಯಂತ್ರಣಕ್ಕೆ ಬರುವವರಿಗೆ ನೀಡಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟರು, ಬಡವರ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟಿನ್‍ಗಳನ್ನು ವಿಸ್ತರಿಸಬೇಕು. ಬಡವರಿಗೆ ನೀಡಲಾಗುವ ಪಡಿತರ ಕಡಿತವನ್ನು ವಾಪಸ್ ಪಡೆಯಬೇಕು ಹಾಗೂ ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಡಪಕ್ಷಗಳ ಮುಖಂಡ ಕೆ.ಜಿ ವೀರೇಶ, ಚಂದ್ರಗಿರೀಶ, ವೀರೇಶ ಎನ್.ಎಸ್, ಕರಿಯಪ್ಪ ಅಚ್ಚೊಳ್ಳಿ, ಭಾಷುಮಿಯಾ, ಎಚ್.ಪದ್ಮಾ, ಆನಂದ, ಮಲ್ಲಣ್ಣ ದಿನ್ನಿ, ಬೂದೆಯ್ಯ ಸ್ವಾಮಿ, ಡಿ.ಎಸ್.ಶರಣಬಸವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.