ADVERTISEMENT

ಸ್ಮಶಾನ ಗೊಂದಲ: ಅಂತ್ಯಕ್ರಿಯೆಗೆ ವಿರೋಧ

ಉಟಕನೂರು ಧೋತರಬಂಡಿ ಗ್ರಾಮಸ್ಥರ ನಡುವೆ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 6:54 IST
Last Updated 17 ನವೆಂಬರ್ 2025, 6:54 IST
ಕವಿತಾಳ ಸಮೀಪದ ಧೋತರಬಂಡಿ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ ತಹಶೀಲ್ದಾರ್ ಭೀಮರಾಯ ರಾಮ ಸಮುದ್ರ ಅವರು ಸ್ಮಶಾನ ಸಮಸ್ಯೆ ಕುರಿತು ಪರಿಶೀಲಿಸಿದರು
ಕವಿತಾಳ ಸಮೀಪದ ಧೋತರಬಂಡಿ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ ತಹಶೀಲ್ದಾರ್ ಭೀಮರಾಯ ರಾಮ ಸಮುದ್ರ ಅವರು ಸ್ಮಶಾನ ಸಮಸ್ಯೆ ಕುರಿತು ಪರಿಶೀಲಿಸಿದರು   

ಕವಿತಾಳ: ಸರ್ಕಾರಿ ಶಾಲೆ ಸಮೀಪದಲ್ಲಿ ಅಂತ್ಯಕ್ರಿಯೆ ಮಾಡಲು ಉಟಕನೂರು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಮೀಪದ ಧೋತರಬಂಡಿ ಹಾಗೂ ಊಟಕನೂರು ಗ್ರಾಮಸ್ಥರ ನಡುವೆ ಭಾನುವಾರ ವಾಗ್ವಾದ ನಡೆಯಿತು.

ಸ್ಥಳಕ್ಕೆ ಭೇಟಿ ನೀಡಿದ ಮಾನ್ವಿ ತಹಶೀಲ್ದಾರ್ ಭೀಮರಾಯ ರಾಮಸಮುದ್ರ ಮತ್ತು ಕವಿತಾಳ ಪಿಎಸ್‌ಐ ಗುರುಚಂದ್ರ ಯಾದವ ಅವರು ಗ್ರಾಮಸ್ಥರಿಗೆ ತಿಳಿ ಹೇಳಿ ಅಂತ್ಯಕ್ರಿಯೆ ಮಾಡಿಸಿದರು.

ಊಟಕನೂರು ಸರ್ಕಾರಿ ಪ್ರೌಢಶಾಲೆ ಹತ್ತಿರ 2 ಎಕರೆ ಭೂಮಿಯನ್ನು ಸರ್ಕಾರ ಸ್ಮಶಾನಕ್ಕಾಗಿ ಮಂಜೂರು ಮಾಡಿದೆ. ಭಾನುವಾರ ನಿಧನರಾದ ದೋತರಬಂಡಿ ಗ್ರಾಮದ ರಾಮಾಂಜನೇಯ ಅವರ ಅಂತ್ಯಕ್ರಿಯೆಗೆ ಧೋತರಬಂಡಿ ಗ್ರಾಮಸ್ಥರು ಮುಂದಾದಾಗ ಶಾಲೆಯ ಹತ್ತಿರ ಅಂತ್ಯಕ್ರಿಯೆ ಮಾಡುವುದು ಬೇಡ ಎಂದು ಊಟಕನೂರು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ವಿಷಯವಾಗಿ ಎರಡು ಗ್ರಾಮಸ್ಥರ ನಡುವೆ ತೀವ್ರ ವಾಗ್ವಾದ ನಡೆದಿದೆ. ಪರಿಸ್ಥಿತಿ ಕೈ ಮೀರುವ ಹಂತದಲ್ಲಿ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಶಾಲೆಗೆ ಸಂಬಂಧಿಸಿದ ಜಾಗದ ಸರ್ವೆ ಕೈಗೊಂಡು ಸೂಕ್ತ ಸ್ಥಳ ನಿಗದಿ ಮಾಡುವುದಾಗಿ ಭರವಸೆ ನೀಡಿದರು.

‘ಸ್ಮಶಾನಕ್ಕೆ ಸರ್ವೆ ನಂಬರ್‌ ಗುರುತಿಸಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ಅದರಲ್ಲಿ ಸೂಕ್ತ ಸ್ಥಳವನ್ನು ನಿಗದಿ ಮಾಡಿಲ್ಲ. ಹೀಗಾಗಿ ಗೊಂದಲ ಉಂಟಾಗಿದೆ. ಶೀಘ್ರದಲ್ಲಿಯೇ ಸ್ಥಳ ಗುರುತಿಸಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ತಹಶೀಲ್ದಾರ್ ಭೀಮರಾಯ ರಾಮಸಮುದ್ರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.