ADVERTISEMENT

ರಾಯಚೂರು: ಬೆಳೆಯನ್ನು ಮುಳುಗಿಸಿದ ಮಳೆ

ಸೆಪ್ಟೆಂಬರ್‌ನಲ್ಲೂ ಶೇ 39 ರಷ್ಟು ಅಧಿಕ ಸುರಿದ ಮಳೆ

ನಾಗರಾಜ ಚಿನಗುಂಡಿ
Published 1 ಅಕ್ಟೋಬರ್ 2020, 19:30 IST
Last Updated 1 ಅಕ್ಟೋಬರ್ 2020, 19:30 IST
ರಾಯಚೂರು ತಾಲ್ಲೂಕು ಮರ್ಚಟ್ಹಾಳ ಗ್ರಾಮದ ರೈತ ನಸರುದ್ದೀನ್ ಅವರು ಬೆಳೆದಿದ್ದ ಮೆಣಸಿನಕಾಯಿ ಬೆಳೆಹಾನಿ ಆಗಿರುವುದು
ರಾಯಚೂರು ತಾಲ್ಲೂಕು ಮರ್ಚಟ್ಹಾಳ ಗ್ರಾಮದ ರೈತ ನಸರುದ್ದೀನ್ ಅವರು ಬೆಳೆದಿದ್ದ ಮೆಣಸಿನಕಾಯಿ ಬೆಳೆಹಾನಿ ಆಗಿರುವುದು   

ರಾಯಚೂರು: ಜಿಲ್ಲೆಯಾದ್ಯಂತ ಈ ವರ್ಷ ಮುಂಗಾರು ಹಂಗಾಮಿನಲ್ಲಿ ಅಗತ್ಯಕ್ಕಿಂತ ಅತೀಯಾದ ಮಳೆ ಮುಂದುವರಿದಿದ್ದು, ಸೆಪ್ಟೆಂಬರ್‌ನಲ್ಲಿ ವಾಡಿಕೆಗಿಂತ ಶೇ 39 ರಷ್ಟು ಹೆಚ್ಚು ಮಳೆ ಸುರಿದು ಬೆಳೆಗಳನ್ನು ಹಾನಿಮಾಡಿದೆ.

ಜೂನ್‌, ಜುಲೈ ತಿಂಗಳುಗಳಲ್ಲಿ ವಾಡಿಕೆಗಿಂತ ಅಧಿಕವಾಗಿ ಸುರಿದ ಮಳೆಯಿಂದ ಸಮೃದ್ಧಿಯ ಸಂಕೇತ ಸಿಕ್ಕಿತ್ತು. ತೊಗರಿ ಹೂಬಿಡುವ ಹಂತದಲ್ಲಿ, ಹತ್ತಿ ಬೆಳೆಯಲ್ಲಿ ಕಾಯಿಬಿಟ್ಟ ನಂತರ ಹಾಗೂ ಭತ್ತವು ತೆನೆ ಕಟ್ಟುವ ಹಂತದಲ್ಲಿಯೂ ಮಳೆ ಬಿಡುವು ನೀಡುತ್ತಿಲ್ಲ. ಈ ವರ್ಷವೂ ಭಂಪರ್ ಲಾಭದ ನಿರೀಕ್ಷೆ ಇಟ್ಟುಕೊಂಡಿದ್ದ ರೈತರು ನಿರಾಸೆ ಅನುಭವಿಸುತ್ತಿದ್ದಾರೆ.

ರಾಯಚೂರು, ಸಿರವಾರ, ಮಸ್ಕಿ ಹಾಗೂ ಮಾನ್ವಿ ತಾಲ್ಲೂಕುಗಳಲ್ಲಿ ಅತಿಯಾಗಿ ಸುರಿದ ಮಳೆಯಿಂದ ಬೆಳೆಗಳು ಹಾನಿ ಆಗಿರುವುದು ಒಂದು ಕಡೆಯಾದರೆ, ಸೆಪ್ಟೆಂಬರ್‌ನಲ್ಲಿ ಜನಜೀವನವೂ ಅಸ್ತವ್ಯಸ್ತವಾಯಿತು. ರಸ್ತೆ ಸಂಪರ್ಕ, ಗ್ರಾಮಗಳನ್ನು ಸಂಪರ್ಕಿಸುವ ಕಿರುಸೇತುವೆಗಳು ಕೊಚ್ಚಿಹೋಗಿವೆ. ಹಳ್ಳಕೊಳ್ಳಗಳು ಎಲ್ಲೆಮೀರಿ ಹರಿದಿದ್ದರಿಂದ ಅಕ್ಕಪಕ್ಕದ ಜಮೀನುಗಳ ಫಲವತ್ತಾದ ಮಣ್ಣು ಕೊಚ್ಚಿಹೋಗಿದೆ.

ADVERTISEMENT

ಆಗಸ್ಟ್‌ನಲ್ಲಿ ವಾಡಿಕೆಗಿಂತ ಶೇ 17 ರಷ್ಟು ಅಧಿಕ ಮಳೆ ಸುರಿದಿತ್ತು. ಇಳಿಜಾರು ಪ್ರದೇಶ ಹಾಗೂ ತಗ್ಗು ಪ್ರದೇಶಗಳಲ್ಲಿದ್ದ ಜಮೀನಿನ ಬೆಳೆಗಳು ಮಾತ್ರ ಹಾನಿಯಾಗಿದ್ದವು. ಇನ್ನುಳಿದ ಕಡೆ ಅಧಿಕ ತೇವಾಂಶ ಇದ್ದರೂ ಬೆಳೆಗಳು ಪೋಷಣೆ ಆಗಿದ್ದವು. ವಾಡಿಕೆ ಪ್ರಕಾರ ಜಿಲ್ಲೆಯಲ್ಲಿ 110 ಮಿಲಿಮೀಟರ್‌ ಮಳೆಯಾಗಬೇಕಿತ್ತು. ಆದರೆ ವಾಸ್ತವದಲ್ಲಿ 126 ಮಿಲಿಮೀಟರ್‌ ಮಳೆ ಆಗಿತ್ತು. ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ಸಿರವಾರ, ಮಸ್ಕಿ, ಲಿಂಗಸುಗೂರು ತಾಲ್ಲೂಕುಗಳಲ್ಲಿ ಹೆಚ್ಚು ಮಳೆ ಸುರಿದಿತ್ತು. ರಾಯಚೂರು ತಾಲ್ಲೂಕಿನಲ್ಲಿ ಶೇ 25 ರಷ್ಟು ಅಧಿಕ ಮಳೆ ಬಿದ್ದಿತ್ತು.

ಜುಲೈನಲ್ಲೂ ಸುರಿದ ಅತೀಯಾದ ಮಳೆಯು ಬೆಳೆಗಳಿಗೆ ಪೂರಕವಾಗಿತ್ತು. ವಾಡಿಕೆಯಂತೆ 90 ಮಿಲಿಮೀಟರ್‌ ಮಳೆ ಬದಲಾಗಿ 161 ಮಿಲಿಮೀಟರ್‌ ಮಳೆ ಬಿದ್ದಿದ್ದರಿಂದ ಭೂಮಿ ಹದವಾಗಿ ತೇವಾಂಶ ಹಿಡಿದುಕೊಂಡಿತ್ತು. ತಡವಾಗಿ ಬಿತ್ತನೆಗೆ ಕಾದಿದ್ದ ರೈತರು ಖುಷಿಯಾಗಿದ್ದರು. ಸಿಂಧನೂರು, ಮಸ್ಕಿ, ಸಿರವಾರ, ರಾಯಚೂರು ತಾಲ್ಲೂಕುಗಳಲ್ಲಿ ವಾಡಿಕೆಗಿಂತಲೂ ದುಪ್ಪಟ್ಟು ಮಳೆಯಾಗಿದ್ದರಿಂದ ಕೆರೆಗಳೆಲ್ಲ ಭರ್ತಿಯಾಗಿದ್ದವು. ಕಾಲುವೆ ನೀರಿಗಾಗಿ ಕಾಯುತ್ತಿದ್ದ ರೈತರು ಮಳೆಯಿಂದಾದ ಹದವನ್ನು ಆಧರಿಸಿ ನಾಟಿ ಮಾಡಿದ್ದಾರೆ.

ಜಿಲ್ಲೆಯಲ್ಲಿಯೇ ಸೆಪ್ಟೆಂಬರ್‌ನಲ್ಲಿ ರಾಯಚೂರು ತಾಲ್ಲೂಕು ಅತಿಯಾದ ಮಳೆಯಿಂದ ತತ್ತರಿಸಿದೆ. ವಾಡಿಕೆ ಮಳೆ 155 ಮಿಲಿಮೀಟರ್‌ಗಿಂತಲೂ 256 ಮಿಲಿಮೀಟರ್‌ ಮಳೆಯಾಗಿದೆ. ಶೇ 64 ರಷ್ಟು ಅಧಿಕವಾಗಿ ಸುರಿದ ಮಳೆಯಿಂದ ಕೃಷ್ಣಾನದಿ ಮತ್ತು ತುಂಗಭದ್ರಾ ನದಿ ಪಾತ್ರದಲ್ಲಿರುವ ಗ್ರಾಮಗಳಲ್ಲಿ ಭಾರಿ ಪ್ರಮಾಣದ ಹಾನಿ ಉಂಟಾಗಿದೆ. ಹಳ್ಳಕೊಳ್ಳಗಳು ತುಂಬಿಹರಿದು ವಾರಗಟ್ಟಲೇ ಸಂಪರ್ಕ ಕಡಿತವಾಗಿದೆ. ವಿದ್ಯುತ್‌ ಸಂಪರ್ಕ ಇರಲಿಲ್ಲ. ಅಕ್ಟೋಬರ್‌ನಲ್ಲಿ ಮಳೆ ಬಿಡುವಿಗಾಗಿ ರೈತರು ನಿರೀಕ್ಷಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.