ADVERTISEMENT

ಅಕ್ರಮ ಮದ್ಯ ಮಾರಾಟ: ಮುಂದುವರಿದ ಧರಣಿ

ಮಹಾತ್ಮಗಾಂಧಿ ಪ್ರತಿಮೆ ಬಳಿ ಕೊನೆಗೂ ಸ್ಥಳಾವಕಾಶ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 15:22 IST
Last Updated 12 ಫೆಬ್ರುವರಿ 2021, 15:22 IST
ರಾಯಚೂರು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ತಮ್ಮ ಕಚೇರಿ ಆವರಣದ ಪ್ರವೇಶದ್ವಾರದವರೆಗೂ ಬಂದು ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆಯ ಧರಣಿ ನಿರತ ಮಹಿಳೆಯರಿಂದ ಶುಕ್ರವಾರ ಮನವಿ ಸ್ವೀಕರಿಸಿ, ಬೇಡಿಕೆಗಳನ್ನು ಆಲಿಸಿದರು
ರಾಯಚೂರು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ತಮ್ಮ ಕಚೇರಿ ಆವರಣದ ಪ್ರವೇಶದ್ವಾರದವರೆಗೂ ಬಂದು ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆಯ ಧರಣಿ ನಿರತ ಮಹಿಳೆಯರಿಂದ ಶುಕ್ರವಾರ ಮನವಿ ಸ್ವೀಕರಿಸಿ, ಬೇಡಿಕೆಗಳನ್ನು ಆಲಿಸಿದರು   

ರಾಯಚೂರು: ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗೆ ಹೈಕೋರ್ಟ್‌ ಆದೇಶ ಅನುಷ್ಠಾನಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆಯಿಂದ ಮಹಿಳೆಯರು ಅನಿರ್ಧಿಷ್ಟಾವಧಿ ಧರಣಿ ಮುಂದುವರಿಸಿದ್ದಾರೆ.

ಜಿಲ್ಲಾ ಕ್ರೀಡಾಂಗಣದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುವುದಕ್ಕೆ ಮೊದಲ ದಿನ ಗುರುವಾರ ಅನುಮತಿ ನೀಡಿರಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಕಚೇರಿ ಎದುರಿನ ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿಯೇ ಹಗಲಿರುಳು ಧರಣಿ ಆರಂಭಿಸಿದ್ದ ಮಹಿಳೆಯರು, ಜಿಲ್ಲಾಡಳಿತದ ಧೋರಣೆ ವಿರುದ್ಧ ಘೋಷಣೆ ಕೂಗಿದರು. ಮಹಿಳೆಯರ ಬೇಡಿಕೆಗೆ ಮಣಿದ ಅಧಿಕಾರಿಗಳು ಶುಕ್ರವಾರ ಕೊನೆಗೂ ಅನುಮತಿ ನೀಡಿದರು.

ಕಚೇರಿ ಬಂದು ಚರ್ಚೆ ಮಾಡುವಂತೆ ಪೊಲೀಸ್‌ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ಧರಣಿ ನಿರತರನ್ನು ಆಹ್ವಾನಿಸಿದರೂ ಮಹಿಳೆಯರು ಒಪ್ಪಲಿಲ್ಲ. ಈ ಮಧ್ಯೆ ಎರಡೂ ಕಡೆ ಸಂಧಾನಕಾರರಾಗಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಅಧಿಕಾರಿಗಳು ಹರಸಾಹಸ ಪಡಬೇಕಾಯಿತು.

ADVERTISEMENT

ಜಿಲ್ಲಾಧಿಕಾರಿ ಕಚೇರಿ ಆವರಣದ ಪ್ರವೇಶದ್ವಾರದವರೆಗೂ ಧರಣಿ ನಿರತರು ಬರಬೇಕು. ಅಲ್ಲಿಗೆ ಜಿಲ್ಲಾಧಿಕಾರಿ ಬಂದು ಮನವಿ ಪಡೆಯುತ್ತಾರೆ ಎಂದು ಪೊಲೀಸರು ತಿಳಿಸಿದರು. ಇದಕ್ಕೆ ಪ್ರತಿಯಾಗಿ, ಮಹಾತ್ಮಗಾಂಧಿ ಪ್ರತಿಮೆ ಬಳಿ ಧರಣಿಗೆ ಅವಕಾಶ ನೀಡಿದರೆ ಮಾತ್ರ ಬರುವುದಾಗಿ ಮಹಿಳೆಯರು ಪಟ್ಟು ಹಿಡಿದರು.

ಧರಣಿ ಸ್ಥಳದಲ್ಲಿ ಘೋಷಣೆಗಳನ್ನು ಕೂಗಬಾರದು. ಧ್ವನಿವರ್ಧಕ ಬಳಸಬಹುದು ಎನ್ನುವ ಷರತ್ತಿನೊಂದಿಗೆ ಅಧಿಕಾರಿಗಳು ಧರಣಿ ಸ್ಥಳಕ್ಕೆ ಅನುಮತಿ ನೀಡಿದರು. ಆನಂತರ ಜಿಲ್ಲಾಧಿಕಾರಿ ಕಚೇರಿ ಆವರಣದ ಪ್ರವೇಶದ್ವಾರದವರೆಗೂ ಧರಣಿ ನಿರತರು ಮೆರವಣಿಗೆ ಮೂಲಕ ತೆರಳಿದರು. ಸ್ಥಳಕ್ಕೆಆಗಮಿಸಿದ ಜಿಲ್ಲಾಧಿಕಾರಿ ಬೇಡಿಕೆಗಳನ್ನು ಸಹನೆಯಿಂದ ಆಲಿಸಿದರು.

‘ಅಕ್ರಮ ಮದ್ಯ ಮಾರಾಟ ಎಲ್ಲೆಲ್ಲಿ ನಡೆಯುತ್ತಿದೆ ಎನ್ನುವ ಮಾಹಿತಿ ನೀಡಿದರೆ ಅಬಕಾರಿ ಪೊಲೀಸರನ್ನು ಕಳುಹಿಸಲಾಗುವುದು.‌ ಆದರೂ ಅಕ್ರಮ ಸ್ಥಗಿತವಾಗಿಲ್ಲ ಎನ್ನುವ ಅನುಮಾನ ಇದ್ದರೆ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಮಾಹಿತಿ ಕೊಡಿ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವ ಬಗ್ಗೆ ಮಹಿಳಾ ನಿಯೋಗದೊಂದಿಗೆ ಚರ್ಚಿಸುವುದಕ್ಕೆ ಮುಖ್ಯಮಂತ್ರಿ ಅವರಿಂದ ಸಮಯಾವಕಾಶ ಕೊಡಿಸಬೇಕು’ ಎಂದು ಧರಣಿ ನಿರತರು ಬೇಡಿಕೆ ಇಟ್ಟರು.

‘ಈ ಬಗ್ಗೆ ಮುಖ್ಯಮಂತ್ರಿ ಕಚೇರಿಗೆ ಮಾಹಿತಿ ನೀಡಲಾಗುವುದು. ಅಲ್ಲಿಂದ ಬರುವ ಪ್ರತಿಕ್ರಿಯೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಮನವರಿಕೆ ಮಾಡಿದರು

ಸ್ವರ್ಣಾ ಭಟ್‌, ವಿದ್ಯಾ ಪಾಟೀಲ, ಉದಯ, ಮೋಕ್ಷಮ್ಮ, ವಿರುಪಮ್ಮ, ಗುರುರಾಜ, ಎಂ.ಆರ್‌.ಭೇರಿ, ಪದ್ಮಾ, ಕೆ.ಜಿ.ವೀರೇಶ, ಬಸವರಾಜ ಮತ್ತಿತರರು ಧರಣಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.