ADVERTISEMENT

ರಾಯಚೂರು: ಕುಡಿಯುವ ನೀರು ಪೂರೈಕೆಗೆ ಆಗ್ರಹ

ನಗರಸಭೆ ಸದಸ್ಯರಿಂದಲೇ ರಸ್ತೆ ಸಂಚಾರ ತಡೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 4:27 IST
Last Updated 19 ಏಪ್ರಿಲ್ 2021, 4:27 IST
ರಾಯಚೂರು ನಗರದ ಸಾತ್ ಮೈಲ್ ಕ್ರಾಸ್‍ ಬಳಿ ನಗರಸಭೆ ಸದಸ್ಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು
ರಾಯಚೂರು ನಗರದ ಸಾತ್ ಮೈಲ್ ಕ್ರಾಸ್‍ ಬಳಿ ನಗರಸಭೆ ಸದಸ್ಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು   

ರಾಯಚೂರು: ಗಣೇಕಲ್ ಜಲಾಶಯ ದಿಂದ ರಾಯಚೂರು ನಗರಕ್ಕೆ ನೀರು ಹರಿಸಬೇಕು. ರಾಂಪೂರ ಜಲಾಶಯಕ್ಕೆ ನೀರು ಹರಿಬಿಟ್ಟು ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ ನಗರಸಭೆ ಸದಸ್ಯರು ಭಾನುವಾರ ಧಿಡೀರ್ ರಾಜ್ಯ ಹೆದ್ದಾರಿ ತಡೆ ನಡೆಸಿದರು.

ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‍ಬಿಸಿ) ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಿ ಕಾಲುವೆ ನೀರು ಹರಿಸುತ್ತಿದ್ದರೂ ಮೇಲ್ಭಾಗದಲ್ಲಿ ನೀರಿನ ದುರ್ಬಳಕೆ ಮಾಡಲಾಗುತ್ತಿದೆ. ಕುಡಿಯುವ ಉದ್ದೇಶಕ್ಕೆ ನೀರು ಹರಿಸಿರುವುದಾಗಿ ತಿಳಿಸಿದರೂ ಬೇಸಿಗೆ ಬೆಳೆ ನೀರು ಬಳಸಿಕೊಳ್ಳಲು ಗೇಜ್ ನಿರ್ವಹಣೆ ಸಮರ್ಪಕವಾಗಿ ಮಾಡುತ್ತಿಲ್ಲ. ಇದರಿಂದ ಬೇಸಿಗೆಯಲ್ಲಿ ನಗರ ನಿವಾಸಿಗಳಿಗೆ ನೀರು ಹರಿಸುವುದು ತುಂಬಾ ಸಮಸ್ಯೆಯಾಗಲಿದೆ. ಈ ಕುರಿತು ಜಿಲ್ಲಾಧಿಕಾರಿ ಸೇರಿದಂತೆ ನೀರಾವರಿ ನಿಗಮದ ಅಧಿಕಾರಿಗಳಿಗೆಸಮಸ್ಯೆ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀರಾವರಿ ನಿಗಮದ ಅಧಿಕಾರಿಗಳು ಕೂಡಲೇ ಗೇಜ್ ನಿರ್ವಹಣೆ ಮಾಡಿ ಗಣೇಕಲ್ ಜಲಾಶಯಕ್ಕೆ ನೀರು ಹರಿಯುವಂತೆ ಮಾಡಬೇಕು. ಸ್ಥಳಕ್ಕೆ ಭೇಟಿ ನೀಡಿದ ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ವಿದ್ಯಾಸಾಗರ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಇಂದಿನಿಂದಲೇ ಜಲಾಶಯಕ್ಕೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ಕಾಲುವೆಯಲ್ಲಿ ನೀರು ಹರಿದು ಬರುತ್ತಿದ್ದು, ಮೇಲಧಿಕಾರಿಗಳಿಗೆ ಸಮಸ್ಯೆ ಮನವರಿಕೆ ಮಾಡಿ ಕೊಡಲಾಗಿದೆ ಎಂದು ತಿಳಿಸಿದರು.

ADVERTISEMENT

ನಗರಸಭೆ ಅಧ್ಯಕ್ಷ ಈ.ವಿನಯಕುಮಾರ್ ಮಾತನಾಡಿ, ಈಗಾಗಲೇ 3.5 ಮೀಟರ್ ನೀರಿದ್ದು, ಇನ್ನೂ ಒಂದು ಮೀಟರ್ ಹರಿಸಬೇಕು ಎಂದು ಆಗ್ರಹಿಸಿದರು.

ನಗರಸಭೆ ಸದಸ್ಯ ಜಿಂದಪ್ಪ, ಎನ್.ಕೆ.ನಾಗರಾಜ, ತಿಮ್ಮಪ್ಪ ನಾಯಕ, ವೀರೇಶ, ಯು.ದೊಡ್ಡಮಲ್ಲೇಶಪ್ಪ, ರವೀಂದ್ರ ಜಲ್ದಾರ್, ಕಡಗೋಳ ಆಂಜನೇಯ, ನರಸಿಂಹಲು ಮಾಡಗಿರಿ ಇದ್ದರು. ಪ್ರತಿಭಟನೆಯಿಂದಾಗಿ ಕೆಲ ಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.