ADVERTISEMENT

ಪ್ರವಾಹ ಹಾನಿ ಸಮೀಕ್ಷೆಗಾಗಿ ಜಿಲ್ಲಾಡಳಿತಕ್ಕೆ ಸೂಚನೆ

ನದಿತೀರದ ಪ್ರದೇಶಗಳಿಗೆ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ ನಾಯಕ ಭೇಟಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 11:33 IST
Last Updated 25 ಅಕ್ಟೋಬರ್ 2019, 11:33 IST
ರಾಯಚೂರು ತಾಲ್ಲೂಕಿನಲ್ಲಿ ಕೃಷ್ಣಾನದಿಗೆ ಅಡ್ಡಲಾಗಿ ನಿರ್ಮಿಸಿದ ಗುರ್ಜಾಪುರ ಸೇತುವೆ ಬಳಿ ನದಿತೀರಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯಕ ಗುರುವಾರ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಚರ್ಚಿಸಿದರು
ರಾಯಚೂರು ತಾಲ್ಲೂಕಿನಲ್ಲಿ ಕೃಷ್ಣಾನದಿಗೆ ಅಡ್ಡಲಾಗಿ ನಿರ್ಮಿಸಿದ ಗುರ್ಜಾಪುರ ಸೇತುವೆ ಬಳಿ ನದಿತೀರಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯಕ ಗುರುವಾರ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಚರ್ಚಿಸಿದರು   

ರಾಯಚೂರು: ಜಿಲ್ಲೆಯಲ್ಲಿ ಈ ಹಿಂದೆ ಕೃಷ್ಣಾ ಮತ್ತು ಭೀಮಾ ಸೇರಿ 9 ಲಕ್ಷ ಕ್ಯುಸೆಕ್ಅಡಿವರೆಗೂ ಪ್ರವಾಹ ಬಂದಿದೆ. ಈಗ 5 ಲಕ್ಷ ಕ್ಯೂಸೆಕ್‌ ಅಡಿವರೆಗೂ ಪ್ರವಾಹ ಬಂದಿದ್ದು, ಕೂಡಲೇ ಹಾನಿ ಉಂಟಾಗಿರುವ ಬಗ್ಗೆ ಸಮೀಕ್ಷೆ ನಡೆಸುವಂತೆ ರಾಜ್ಯಮಟ್ಟದಿಂದಲೇ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯಕ ಹೇಳಿದರು.

ತಾಲ್ಲೂಕಿನ ಗುರ್ಜಾಪುರದ ಕೃಷ್ಣಾ–ಭೀಮಾ ಸಂಗಮದ ನದಿತೀರಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ನಾರಾಯಣಪೂರ ಜಲಾಶಯದಿಂದ ಕೃಷ್ಣ ನದಿಗೆ ಹೆಚ್ಚುವರಿ ನೀರನ್ನು ಬಿಡುಗಡೆಮಾಡಿದ್ದರಿಂದ ಕೃಷ್ಣ ನದಿತೀರ ಪ್ರಾಂತಗಳು ಜಲಾವೃತಗೊಂಡಿದ್ದು, ಗುರ್ಜಾಪುರದ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ ಎಂದರು.ದೇವದುರ್ಗ ತಾಲ್ಲೂಕಿನ ಚಿಂಚೋಡಿ ಗ್ರಾಮದಲ್ಲಿ ಬಾಲಕ ಸಂತೋಷ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಬಾಲಕನ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್, ಸಹಾಯಕ ಆಯುಕ್ತ ಸಂತೋಷ, ರಾಯಚೂರು ತಾಲ್ಲೂಕು ತಹಶಿಲ್ದಾರ ಹಂಪಣ್ಣ ಇದ್ದರು.

ADVERTISEMENT

ಪ್ರಗತಿ ಪರಿಶೀಲನೆ: ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

ಅಕ್ಟೋಬರ್‌ನಲ್ಲಿ ರಾಯಚೂರು ತಾಲ್ಲೂಕಿನ ದೇವಸುಗೂರು ಮತ್ತು ದೇವದುರ್ಗದ ಚಿಂಚೋಡಿಯಲ್ಲಿ ಎರಡು ಜೀವಹಾನಿಯಾಗಿದ್ದು, ಒಂದು ಪ್ರಕರಣಕ್ಕೆ ₹5 ಲಕ್ಷ ಪರಿಹಾರ ನೀಡಲಾಗಿದೆ. ಸಿಂಧನೂರು ತಾಲ್ಲೂಕು ಮತ್ತು ಲಿಂಗಸುಗೂರು ತಾಲ್ಲೂಕು ಸೇರಿ ಒಟ್ಟು ಐದು ದೊಡ್ಡ ಜಾನುವಾರುಗಳ ಪ್ರಾಣಹಾನಿಯಾಗಿದ್ದು, 39 ಕುರಿಗಳು ಮೃತಪಟ್ಟಿವೆ. ಎಲ್ಲಕ್ಕೂ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ವರದಿ ನೀಡಿದರು.

ಅಕ್ಟೋಬರ್‌ 10 ರವರೆಗೂ ನಡೆಸಿದ ಸಮೀಕ್ಷೆಯ ಪ್ರಕಾರ, ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ಒಟ್ಟು 642 ಮನೆಗಳಿಗೆ ಹಾನಿಯಾಗಿದೆ. 15 ಮನೆಗಳು ಪೂರ್ಣಹಾನಿ, 557 ಭಾಗಶಃ ಹಾಗೂ 70 ಮನೆಗಳು ಅಲ್ಪಸ್ವಲ್ಪ ಹಾನಿಯಾಗಿವೆ ಎಂದು ತಿಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.