ADVERTISEMENT

ರಾಯಚೂರು: ರಂಗ ಕಲಾವಿದರಿಗೆ ಹೆಚ್ಚಿದ ಕಳವಳ

ಸುಗ್ಗಿ ಕಾಲದಲ್ಲಿ ಅವಕಾಶಗಳಿಲ್ಲದೆ ಆರ್ಥಿಕ ಸಂಕಷ್ಟ

ನಾಗರಾಜ ಚಿನಗುಂಡಿ
Published 3 ಮೇ 2020, 3:01 IST
Last Updated 3 ಮೇ 2020, 3:01 IST
ಅಲ್ತಾಫ್‌, ರಂಗಮಿತ್ರ ಅಧ್ಯಕ್ಷ
ಅಲ್ತಾಫ್‌, ರಂಗಮಿತ್ರ ಅಧ್ಯಕ್ಷ   

ರಾಯಚೂರು: ಸಮಾಜದ ಜನರನ್ನು ನಂಬಿಕೊಂಡು ಜೀವನ ನಡೆಸುವ ರಂಗ ಕಲಾವಿದರು ಕೊರೊನಾ ಹೊಡೆತದಿಂದ ಕಳಕಳ ಅನುಭವಿಸುತ್ತಿದ್ದಾರೆ.

ಸುಗ್ಗಿ ಕಾಲದಲ್ಲಿ ಹಬ್ಬ, ಜಾತ್ರೆಗಳು ಇರುತ್ತಿದ್ದವು. ಗ್ರಾಮೀಣ ಭಾಗದಲ್ಲಿ ಸಾಮಾಜಿಕ ನಾಟಕಗಳು ಏರ್ಪಾಡಾಗುತ್ತಿದ್ದವು. ಸಂಗೀತ ಕಾರ್ಯಕ್ರಮಗಳು ಆಯೋಜನೆ ಸಾಮಾನ್ಯವಾಗಿತ್ತು.‌ ಈಗ ಸುಗ್ಗಿ ಕಾಲ ಮುಗಿದು ಹೋಗಿದ್ದು, ಕಲಾವಿದರನ್ನು ಪೋಷಿಸಬೇಕಾದ ಜನರೇ ಆತಂಕದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕಲೆಗಳತ್ತ ಆಸಕ್ತಿ ಹರಿಯುವುದು ವಿರಳ. ಉಪಜೀವನಕ್ಕೆ ಕಲೆಯನ್ನು ಅವಲಂಬಿಸಿರುವ ರಂಗಕಲಾವಿದರು, ಅವಕಾಶ ವಂಚಿತವಾಗಿ ಬದುಕಿನ ಬಂಡಿ ಸಾಗಿಸುವುದು ದುಸ್ತರವಾಗಿದೆ.

ರಂಗಕಲೆಯನ್ನು ನೆಚ್ಚಿಕೊಂಡಿರುವ ನೂರಾರು ಕಲಾವಿದರು ಹಾಗೂ ಸಂಗೀತ ತಂಡದವರು ರಾಯಚೂರಿನಲ್ಲಿ ಇದ್ದಾರೆ. ಪ್ರತಿವರ್ಷ ಮಾರ್ಚ್ ನಿಂದ ಜೂನ್ ವರೆಗೂ ಜಿಲ್ಲೆಯಾದ್ಯಂತ ಸಂಚರಿಸಿ ನಾಟಕಗಳನ್ನು ಪ್ರದರ್ಶಿಸಿ ಒಂದು ವರ್ಷಕ್ಕೆ ಆಗುವಷ್ಟು ವರಮಾನ ಸಂಪಾದಿಸುವುದು ಇವರೆಗೂ ನಡೆದುಕೊಂಡು ಬಂದಿತ್ತು. ಇದೀಗ ಕೊರೊನಾ ಮಹಾಮಾರಿಯಿಂದ ಕಲಾವಿದರ ಬದುಕು ಬೀದಿಗೆ ಬಿದ್ದಿದೆ.

ADVERTISEMENT

‘ಕಲಾವಿದರು ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ಇಡೀ ವರ್ಷದಲ್ಲಿ ಕಲಾವಿದರಿಗೆ ಮಾರ್ಚ್‌, ಏಪ್ರಿಲ್‌ ಸುಗ್ಗಿ ಇದ್ದಂತೆ. ಎಲ್ಲಾ ಬಂದ್‌ ಆಗಿದ್ದರಿಂದ, ಕಲಾವಿದರ ಉಪಜೀವನಕ್ಕೆ ಯಾರು ಕೊಡುತ್ತಾರೆ. ಸರ್ಕಾರದಿಂದ ₹2 ಸಾವಿರ ಕೊಡುತ್ತೇವೆ ಎಂದು ಹೇಳಿದ್ದಾರೆ. ಕಲೆಯನ್ನು ನಂಬಿದ ಕಲಾವಿದೆಯರ ಜೀವನ ಇನ್ನೂ ಸಂಕಷ್ಟದಲ್ಲಿದೆ. ಕಲಾವಿದರು ಮತ್ತು ಸಂಗಡಿಗರೆಲ್ಲರೂ ತೊಂದರೆಗೆ ಸಿಲುಕಿದ್ದಾರೆ’ ಎಂದು ರಂಗಮಿತ್ರ ಅಧ್ಯಕ್ಷ ಅಲ್ತಾಫ್‌ ಅಳಲು ತೋಡಿಕೊಂಡರು.

‘ಕಲಾವಿದರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದ ಮಹನೀಯರು ಮತ್ತು ಸರ್ಕಾರ ನೆರವು ನೀಡಲು ಮುಂದೆ ಬರಬೇಕು. ಕಲಾವಿದರು ಗೋಳು ಹೇಳಿಕೊಳ್ಳುವ ಸ್ಥಿತಿಯೂ ಇಲ್ಲದಂತಾಗಿದೆ’ ಎಂದರು.

‘ರಾಯಚೂರಿನ ಗ್ರಾಮೀಣ ಭಾಗದಲ್ಲಿ ನಡೆಯುವ ಜಾತ್ರೆ, ಸಮಾರಂಭಗಳನ್ನು ಅವಲಂಬಿಸಿದ ಕಲಾವಿದರು ನೂರಾರು ಸಂಖ್ಯೆಯಲ್ಲಿದ್ದಾರೆ. ಲಾಕ್‌ಡೌನ್‌ನಿಂದ ಬಡಕಲಾವಿದರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಯಾರ ಹತ್ತಿರವೂ ಕೈ ಚಾಚುವ ಪರಿಸ್ಥಿತಿಯಲ್ಲೂ ಕಲಾವಿದರು ಇಲ್ಲ. ಉಳ್ಳವರು ತಾವಾಗಿವೇ ಕಲಾವಿದರ ನೆರವಿಗೆ ಬರಬೇಕು’ ಎನ್ನುವ ಮನವಿ ರಂಗಸಿರಿ ಸಾಂಸ್ಕೃತಿಕ ಕಲಾ ಬಳಗದ ಅಧ್ಯಕ್ಷ ರಂಗಸ್ವಾಮಿ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.