ADVERTISEMENT

ಹಟ್ಟಿ | ಅಧಿಕಾರಿಗಳ ನಿರ್ಲಕ್ಷ್ಯ, ಯೋಜನೆಗಳು ವಿಫಲ: ನೀರಿಗಾಗಿ ತಪ್ಪದ ಅಲೆದಾಟ

ಅಮರೇಶ ನಾಯಕ
Published 15 ಮೇ 2025, 5:59 IST
Last Updated 15 ಮೇ 2025, 5:59 IST
   

ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣದ ಸಮೀಪದಲ್ಲಿಯೇ ಕೃಷ್ಣಾ ನದಿ ಹರಿಯುತ್ತಿದ್ದರೂ ಜನರು ಗುಟುಕು ಹನಿ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

2012ರಲ್ಲಿ ಶುದ್ಧ ನೀರಿಗಾಗಿ ನಬಾರ್ಡ್ ಸಹಾಯದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗಾಗಿ ₹14 ಕೋಟಿ ಮಂಜೂರಾಗಿತ್ತು. ₹4 ಕೋಟಿಯನ್ನು ಹಟ್ಟಿ ಚಿನ್ನದ ಗಣಿ ಕಂಪನಿ ಒದಗಿಸಿತ್ತು. ಒಟ್ಟು ₹18 ಕೋಟಿಯಲ್ಲಿ ಕಾಮಗಾರಿ ಕೈಗೊಳ್ಳಲಾಯಿತು. ಇಷ್ಟು ಹಣ ಖರ್ಚು ಮಾಡಿದರೂ ಪಟ್ಟಣಕ್ಕೆ ಹನಿ ನೀರು ಬರಲಿಲ್ಲ. ‌

ಕೃಷ್ಣಾ ನದಿಯಿಂದ ಬರುವ ನೀರು ಮೊದಲು ಗುರುಗುಂಟಾ ಗ್ರಾಮಕ್ಕೆ ತಲುಪುತ್ತದೆ ನಂತರ, ಕೋಠಾ, ಪೈದೊಡ್ಡಿ ಅಲ್ಲಿಂದ ಹಟ್ಟಿ ಪಟ್ಟಣಕ್ಕೆ ನೀರು ಬರಬೇಕಾಗಿರುವುದರಿಂದ ಸಮಸ್ಯೆ ಪರಿಹಾರವಾಗುತ್ತಿಲ್ಲ. 

ADVERTISEMENT

ಕಾಳೇಶ್ವರ ನೀರಿನ ಯೋಜನೆ ವಿಫಲ: ಹಟ್ಟಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ  12 ವರ್ಷದ ಕಾಳೇಶ್ವರ ಕೆರೆಯಲ್ಲಿ ಸಂಪ್ ನಿರ್ಮಿಸಿ ಅಲ್ಲಿಂದ ಪೈಪ್‌ಲೈನ್ ಮೂಲಕ ನೀರು ಪೂರೈಸಲು ಜಿಲ್ಲಾಡಳಿತ ₹6 ಲಕ್ಷ, ಹಟ್ಟಿ ಕಂಪನಿ ₹10 ಲಕ್ಷ, ಗ್ರಾಮ ಪಂಚಾಯಿತಿಯಿಂದ ₹16 ಲಕ್ಷ, ಉದ್ಯೋಗ ಖಾತ್ರಿಯಡಿ ₹10 ಲಕ್ಷ ವಿನಿಯೋಗಿಸಲಾಯಿತು. ಈ ಯೋಜನೆ 2 ವರ್ಷದಲ್ಲಿ ವಿಫಲಗೊಂಡಿತು. 

ಜಿಲ್ಲಾಡಳಿತ, ಹಟ್ಟಿ ಚಿನ್ನದ ಗಣಿ ಕಂಪನಿ ಸಹಾಯಧನದೊಂದಿಗೆ ಹಟ್ಟಿ ಪಟ್ಟಣದ ನೀರಿನ ಸಮಸ್ಯೆ ನಿವಾರಿಸಲು ಯೋಜನೆ ರೂಪಿಸಿದ್ದರೂ ಸ್ಥಳೀಯ ಆಡಳಿತ ನಿರ್ಲಕ್ಷ್ಯ ವಹಿಸಿದ ಪರಿಣಾಮ ಇಂದಿಗೂ ಪಟ್ಟಣದಲ್ಲಿ ನೀರಿನ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.

ಹಟ್ಟಿ ಪಟ್ಟಣಕ್ಕೆ ಪೂರೈಕೆಯಾಗುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನಿರ್ವಹಣೆ ಜಟಿಲವಾಗುತ್ತಿದೆ. 

ಹಟ್ಟಿ ಪಟ್ಟಣದಿಂದ 18 ಕಿ.ಮೀ ದೂರದಲ್ಲಿನ ಟಣಮಕಲ್ಲು ಗ್ರಾಮದ ಕೃಷ್ಣಾ ನದಿಯಿಂದ ನೀರು ಪೂರೈಸಲಾಗುತ್ತಿದೆ. ಯೋಜನೆ ನಿರ್ವಹಣೆ ಗುತ್ತಿಗೆ ಅವಧಿ ಮುಗಿದಿದ್ದು ಪದೆಪದೇ ಮೋಟರ್ ದುರಸ್ತಿಗೆ ಬರುತ್ತಿದೆ.

ಯಲಗಟ್ಟಾ, ರೋಡಲಬಂಡ (ತವಗ) ಆನ್ವರಿ, ನಗನೂರು, ಚುಕನಟ್ಟಿ, ನಿಲೋಗಲ್, ಗೆಜ್ಜಲಗಟ್ಟಾ, ವೀರಾಪೂರ, ಕಡ್ಡೋಣಿ, ಗೌಡೂರು, ಗೌಡೂರು ತಾಂಡ, ಯರಜಂತಿ, ಬಂಡೆಭಾವಿ, ಪದೊಡ್ಡಿ, ಸೇರಿದಂತೆ 194 ದೊಡ್ಡಿಗಳಲ್ಲಿ ನೀರಿನ ಸಮಸ್ಯೆ ಇದ್ದರೂ ಯಾರು ಇತ್ತ ಕಡೆ ಗಮನಹರಿಸುತ್ತಿಲ್ಲ ಎನ್ನುವುದು ಜನ ಅಳಲು. 

‌ಬೋರ್‌ವೆಲ್ ಕೊರೆಸಿದರು ಪ್ರಯೋಜನವಾಗಿಲ್ಲ. ಹಳ್ಳಿಯಿಂದ ಹಳ್ಳಿಗೆ ಜನರು ಬೈಕ್, ಆಟೊ ಮೂಲಕ ನೀರು ತೆಗೆದುಕೊಂಡು ಹೋಗುವುದು ಸಾಮಾನ್ಯವಾಗಿದೆ.

ಹಟ್ಟಿ ಸಮೀಪದ ಆನ್ವರಿ ಗ್ರಾಮದ ಪುರಾತನ ಬಾವಿಯಲ್ಲಿ ನೀರು ತಳ ತಲುಪಿದೆ

ಹಟ್ಟಿ ಸಮೀಪದ ಕಾಳೇಶ್ವರ ಕೆರೆ ನೀರಿಲ್ಲದೆ ಬರಿದಾಗಿದೆ
ಪಟ್ಟಣ ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯದಿಂದ ನಗರದ ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಸಮಸ್ಯೆಯನ್ನು ಆಲಿಸುವಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ
ರೇಣುಕಮ್ಮ, ಹಟ್ಟಿ ಪಟ್ಟಣದ ನಿವಾಸಿ
ಹಟ್ಟಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವುದು ಆರ್‌ಡ್ಯಬ್ಲುಎಸ್ ಕಾರ್ಯ. ನೀರಿನ ಸಮಸ್ಯೆ ಬಗ್ಗೆ ಮಾಹಿತಿ ನೀಡಲಾಗಿದೆ, ಮೋಟರ್ ಸುಟ್ಟಿದ್ದು ದುರಸ್ತಿ ಕಾರ್ಯ ನಡೆದಿದೆ.  ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ ಜನರಿಗೆ ನೀಡಿ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು‌
ಜಗನ್ನಾಥ, ಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಮೋಟರ್ ದುರಸ್ತಿಯಿಂದ ನೀರು ಪೂರೈಕೆಯಲ್ಲಿ ಸಮಸ್ಯೆ ಎದುರಾಗಿತ್ತು. ಕೋಠಾ ಗ್ರಾಮದವರೆಗೂ ನೀರು ಸರಬರಾಜು ಮಾಡುವುದು ನಮ್ಮ ಕರ್ತವ್ಯ. ನಂತರ ಹಟ್ಟಿ ಮುಖ್ಯಾಧಿಕಾರಿಗಳು ಅದರ ಬಗ್ಗೆ ಗಮನಹರಿಸಬೇಕು‌
ಪರಮೇಶ್ವರ, ಆರ್‌ಡ್ಯಬ್ಲುಎಸ್ ಎಇಇ, ಲಿಂಗಸುಗೂರು
ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಕೆಸರೆರಚುತ್ತಾ ಕಾಲಹರರಣ ಮಾಡುತ್ತಿದ್ದಾರೆ. ಮೇಲಧಿಕಾರಿಗಳು ಇತ್ತಕಡೆ ಗಮನಹರಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕಿದೆ
ರಾಜ್ ಮಹ್ಮದ್, ಹಟ್ಟಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.