ಸಿರವಾರ: ತಾಲ್ಲೂಕಿನ ಅತ್ತನೂರು, ಕಲ್ಲೂರು ಸೇರಿದಂತೆ ಏಳು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು 2008-09ನೇ ಸಾಲಿನಲ್ಲಿ ಅತ್ತನೂರು ಗ್ರಾಮಕ್ಕೆ ಮಂಜೂರಾಗಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಸ್ಥಗಿತಗೊಂಡ ವಿಚಾರ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಶುಕ್ರವಾರ ಅಧಿವೇಶನದಲ್ಲಿಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಸಂಬಂದಪಟ್ಟ ಸಚಿವರು ನೀಡಿದ ಉತ್ತರಕ್ಕೆ ಅತ್ತನೂರು ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಅತ್ತನೂರು ಗ್ರಾಮಕ್ಕೆ ಕುಡಿಯುವ ನೀರು ಒದಗಿಸಲು ಸರ್ಕಾರ ಕೈಗೊಂಡ ಕ್ರಮಗಳು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕೈಗೊಂಡ ಕಾಮಗಾರಿ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ವಿಧಾನಪರಿಷತ್ ಸದಸ್ಯರು ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ್ದರು.
ರಾಜೀವ್ ಗಾಂಧಿ ಸಬ್-ಮಿಷನ್ ಯೋಜನೆಯಡಿ ಅತ್ತನೂರು ಹಾಗೂ ಕಲ್ಲೂರು ಸೇರಿದಂತೆ ಏಳು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು 2008-09ನೇ ಸಾಲಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾಗಿತ್ತು. ಯೋಜನೆಗಳನ್ನು ಪ್ಯಾಕೇಜ್ ಟೆಂಡರ್ ಮೂಲಕ ಗುತ್ತಿಗೆದಾರ (ಅಮರಖೇಡ್ ಎಸ್.ಎಮ್) ಅವರಿಗೆ ಕಾಮಗಾರಿ 2009 ಫೆ. 2ರಂದು ವಹಿಸಲಾಗಿತ್ತು. ಆದರೆ, ಕೆರೆ ನಿರ್ಮಾಣಕ್ಕೆಂದು ಅಂದಾಜು ಪತ್ರಿಕೆಯಲ್ಲಿ ಪರಿಗಣಿಸಿದ್ದ ಸ್ಥಳ ಸೂಕ್ತವಾಗಿರದ ಕಾರಣ ಗುತ್ತಿಗೆದಾರರು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು. ಹೀಗಾಗಿ ಕೆರೆ ನಿರ್ಮಾಣಕ್ಕೆ ಸೂಕ್ತ ಸ್ಥಳ ಹುಡುಕಾಟಕ್ಕೆ ಸುಮಾರು 8 ರಿಂದ 9 ವರ್ಷಗಳ ಕಾಲ ವಿಳಂಬವಾಯಿತು.2018 ಫೆ. 9 ರಂದು ಕೆರೆ ನಿರ್ಮಾಣಕ್ಕೆ ಜಮೀನನ್ನು ನೋಂದಣಿ ಮಾಡಿಕೊಳ್ಳಲಾಗಿದೆ.
ಕಾಮಗಾರಿ ಪ್ರಾರಂಭಿಸುವಂತೆ ಗುತ್ತಿಗೆದಾರರಿಗೆ ಹಲವಾರು ಬಾರಿ ಸೂಚನೆ ನೀಡಿದರೂ ಗುತ್ತಿಗೆದಾರರು ಪ್ರತಿಕ್ರಿಯೆ ನೀಡದ ಕಾರಣ (ರಿಸ್ಕ್ ಆ್ಯಂಡ್ ಕಾಸ್ಟ್) ಆಧಾರದಡಿ 2020 ಫೆ.26 ರಂದು ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಿ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನಿಗದಿತ ಮೊತ್ತ ₹9.53 ಕೋಟಿ ಮೊತ್ತದಲ್ಲಿ ₹4.16 ಕೋಟಿ ಹಣ ವಿನಿಯೋಗಿಸಲಾಗಿದೆʼ ಎಂದು ಸಚಿವರು ಉತ್ತರಿಸಿದ್ದಾರೆ.
ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯ: ಅತ್ತನೂರು ಗ್ರಾಮಕ್ಕೆ ಮಂಜೂರಾಗಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಮಾಡುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಆಸಕ್ತಿ ತೋರದೆ ಮತ್ತು ಕಾಮಗಾರಿ ಸ್ಥಗಿತಗೊಂಡಿದ್ದರ ಬಗ್ಗೆ ಪ್ರಶ್ನಿಸದ ಕಾರಣ ಕಾಮಗಾರಿ ಹಳ್ಳ ಹಿಡಿಯಿತು ಎನ್ನುವ ಆರೋಪ ಕೇಳಿ ಬಂದಿದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಸ್ಥಗಿತವಾಗಲು ಕೆಲವು ಪಟ್ಟಭದ್ರ ಹಿತಶಕ್ತಿಗಳ ಕೈವಾಡವಿದೆ. ಅಧಿಕಾರಿಗಳು ಗುತ್ತಿಗೆದಾರರು ಶಾಮೀಲಾಗಿ ಹಣ ದುರುಪಯೋಗ ಮಾಡಿಕೊಂಡಿದ್ದರಿಂದ ಯೋಜನೆಯನ್ನು ವ್ಯವಸ್ಥಿತವಾಗಿ ವಿಫಲಗೊಳಸಲಾಗಿದೆ-ವೀರಭದ್ರಯ್ಯಸ್ವಾಮಿ, ಅತ್ತನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.