ADVERTISEMENT

ಹಟ್ಟಿ ಚಿನ್ನದ ಗಣಿ: ಕುಡಿಯುವ ನೀರಿನ ಯೋಜನೆಗಳಿಗೆ ಎಳ್ಳು ನೀರು

ಸರ್ಕಾರದ ಅನುದಾನ ಬಿಡುಗಡೆಯಾಗಿ ಹಣ ಖರ್ಚಾದರೂ ನಿಗದ ಸಮಸ್ಯೆ

ಅಮರೇಶ ನಾಯಕ
Published 23 ಮೇ 2025, 6:49 IST
Last Updated 23 ಮೇ 2025, 6:49 IST
ಹಟ್ಟಿ ಚಿನ್ನದ ಗಣಿ ಸಮೀಪದ ಗುರುಗುಂಟಾ ಗ್ರಾಮದಲ್ಲಿ ಮಹಿಳೆಯರು ನೀರಿಗಾಗಿ ಸರದಿ ಸಾಲಿನಲ್ಲಿ ನಿಂತಿರುವುದು
ಹಟ್ಟಿ ಚಿನ್ನದ ಗಣಿ ಸಮೀಪದ ಗುರುಗುಂಟಾ ಗ್ರಾಮದಲ್ಲಿ ಮಹಿಳೆಯರು ನೀರಿಗಾಗಿ ಸರದಿ ಸಾಲಿನಲ್ಲಿ ನಿಂತಿರುವುದು   

ಹಟ್ಟಿ ಚಿನ್ನದ ಗಣಿ: ಸಮೀಪದ ಕೋಠಾ, ಕಡ್ಡೋಣಿ, ಯಲಗಟ್ಟಾ ಮೇದಿನಾಪುರ ಗ್ರಾಮದಲ್ಲಿ ಜಾರಿಗೊಳಿಸಿದ ಹಲವು ಕುಡಿಯುವ ನೀರಿನ ಯೋಜನೆಗಳು ವಿಫಲಗೊಂಡು ಗ್ರಾಮಸ್ಥರು ಕುಡಿಯುವ ನೀರಿಗಾಗಿ ಅಲೆದಾಡುವಂತಾಗಿದೆ.

ಯಲಗಟ್ಟಾ ಗ್ರಾಮದಲ್ಲಿ 3 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ಗ್ರಾಮದಲ್ಲಿ ಬೋರ್‌ವೆಲ್ ಕೊರೆದರೂ ಶುದ್ದನೀರು ಸಿಗುವುದಿಲ್ಲ. ಫ್ಲೋರೈಡ್, ಆರ್ಸೆನಿಕ್ ಅಂಶ ಇರುವ ನೀರು ಕುಡಿಯಬೇಕಾದ ಪರಿಸ್ಧಿತಿ ಇದೆ. ₹15 ಲಕ್ಷ ವೆಚ್ಚದಲ್ಲಿ ಗ್ರಾಮದಿಂದ 3 ಕಿ.ಮೀ. ಅಂತರದಲ್ಲಿನ ಎನ್ನಾಬ್ರಿಸ್ ಮುಖ್ಯ ನಾಲೆಯಿಂದ ನೀರು ಪೂರೈಕೆಗಾಗಿ ಕಾಮಗಾರಿ ಕೈಗೊಳ್ಳಲಾಗಿತ್ತು. ಅದೂ ಅರ್ಧಕ್ಕೆ ನಿಂತಿದೆ.

ಪೈಪ್‌ಲೈನ್ ಅಳವಡಿಕೆಗೆ ₹10 ಲಕ್ಷ ಅನುದಾನ ನೀಡಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಜಿಲ್ಲಾ ಪಂಚಾಯಿತಿಯಿಂದ ₹10 ಲಕ್ಷ ಅನುದಾನ ನೀಡಿ ಯಲಗಟ್ಟಾ ಗ್ರಾಮದ ಗುಡ್ಡದಲ್ಲಿ ಫಿಲ್ಟರ್ ಟ್ಯಾಂಕ್ ಅಳವಡಿಸಿ ಶುದ್ಧ ನೀರು ಪೂರೈಕೆಗೆ ಯೋಜನೆ ರೂಪಿಸಿತ್ತು. ನೀರು ಬರುವ ಮುನ್ನವೇ ಯೋಜನೆ ವಿಫಲವಾಯಿತು.

ADVERTISEMENT

ಮೇದಿನಾಪುರ ಗ್ರಾಮದ ನೀರಿನ ಸಮಸ್ಯೆ ನಿಗೀಸಲು ₹ 28 ಲಕ್ಷ ವೆಚ್ಚದಲ್ಲಿ ಅಮರೇಶ್ವರ ಹತ್ತಿರದಲ್ಲಿ ಬೋರ್‌ವೆಲ್ ಕೊರೆಸಿ ಅಲ್ಲಿಂದ ಮೇದಿನಾಪುರಕ್ಕೆ ಪೈಪ್‌ಲೈನ್ ಮೂಲಕ ನೀರು ಒದಗಿಸುವ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ ಆ ನೀರು ಗ್ರಾಮದವರೆಗೆ ಬರಲೇ ಇಲ್ಲ.

‘2016ರಲ್ಲಿ ₹ 20 ಲಕ್ಷ ವೆಚ್ಚದಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯಿಂದ ನೀರು ಪೂರೈಕೆ ಮಾಡಿಕೊಳ್ಳಲು ಪೈಪ್‌ಲೈನ್ ಕಾಮಗಾರಿ ಮಾಡಲಾಗಿದೆ. ಆದರೆ ಅವೈಜ್ಞಾನಿಕ ಕಾಮಗಾರಿ ಮಾಡಿದ್ದರಿಂದ ನೀರು ಪೂರೈಕೆ ಸುಗಮವಾಗಿಲ್ಲ’ ಎನ್ನುತ್ತಾರೆ ಗ್ರಾಮಸ್ಥರು.

ಪೈದೊಡ್ಡಿ ಗ್ರಾಮಕ್ಕೆ 2009ರಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ವಿಶ್ವಸಂಸ್ಧೆ ನೆರವಿನ ಅಡಿಯಲ್ಲಿ ₹6 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದರು. ಆಗಾಗ  ಮೋಟರ್ ದುರಸ್ತಿಗೆ ಬರುತ್ತಿದ್ದು, ನೀರಿನ ಸಮಸ್ಯೆಗೆ ಮಾತ್ರ ಹಾಗೆ ಉಳಿದಿದೆ.

ಕೊಳವೆ ಬಾವಿಯ ಆರ್ಸೆನಿಕ್ ಅಂಶ ಇರುವ ನೀರೆ ಇಲ್ಲಿನ ಜನರಿಗೆ ಆಧಾರ. ಶುದ್ದ ಕುಡಿಯುವ ನೀರು ಕಾಣದೆ ಜನ ಪರದಾಡಿದರೂ ಸಮಸ್ಯೆ ಕೇಳುವವರು ಮಾತ್ರ ಇಲ್ಲದಂತಾಗಿದೆ.

ಕಡ್ಡೋಣಿ ಗ್ರಾಮದಲ್ಲಿ ಸುಮಾರು ಒಂದು ಸಾವಿರ ಜನ ಸಂಖ್ಯೆ ಇದೆ. ಈ ಗ್ರಾಮ ಎತ್ತರದ ಪ್ರದೇಶದಲ್ಲಿ ಇರುವುದರಿಂದ ಅಂತರ್ಜಲ ಸಮಸ್ಯೆ ಇದೆ. ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ 2000ನೇ ಸಾಲಿನಲ್ಲಿ ₹18 ಲಕ್ಷ ವೆಚ್ಚದಲ್ಲಿ ಟ್ಯಾಂಕ್ ನಿರ್ಮಿಸಿದ್ದಾರೆ. ಆದರೆ ಈವರೆಗೆ ಹನಿ ನೀರು ಕಂಡಿಲ್ಲ, ಹಟ್ಟಿ ರಸ್ತೆಯ ಹಳ್ಳದ ಪಕ್ಕದಲ್ಲಿ ಬೋರ್‌ವೆಲ್ ಇಲ್ಲಿನ ಜನರಿಗೆ ಆಸರೆಯಾಗಿದೆ.

ಸ್ಪಂದಿಸದ ಅಧಿಕಾರಿಗಳು: ಕುಡಿಯುವ ನೀರಿನ ಸಮಸ್ಯೆ ಬಗ್ಗೆ ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ದೂರವಾಣಿ ಮೂಲಕ ಜನರು ಕರೆ ಮಾಡಿದರೆ ಎರಡು ದಿನದಿಂದ ಕರೆ ಸ್ವೀಕರಿಸದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಹಟ್ಟಿ ಸಮೀಪದ ಮೇದಿನಾಪೂರ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಉಪಯೋಗಕ್ಕೆ ಬಾರದೆ ಪಾಳು ಬಿದ್ದಿದೆ

ಫ್ಲೋರೈಡ್ ಆರ್ಸೆಸಿಕ್ ಅಂಶ ಇರುವ ನೀರೆ ಆಧಾರ ಗ್ರಾಮಗಳಿಗೆ ಹಲವು ಯೋಜನೆ ತಂದರೂ ವಿಫಲ ಅರ್ಧಕ್ಕೆ ನಿಂತ ಕೆಲ ಯೋಜನೆಗಳಿಗೆ ಬೇಕಿದೆ ಕಾಯಕಲ್ಪ

ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶ ಮಾಡಲಾಗುವುದು

-ಮಾನಪ್ಪ ವಜ್ಜಲ್ ಶಾಸಕ

ಕುಡಿಯುವ ನೀರಿನ ಯೋಜನೆಗಳು ವಿಫಲವಾಗಿವೆ. ಜನಪ್ರತಿನಿಧಿಗಳು ಗಮನಹರಿಸಿ ಗ್ರಾಮಕ್ಕೆ ಶುದ್ದ ಕುಡಿಯುವ ನೀರು ಪೂರೈಕೆಗೆ ಮುಂದಾಗಬೇಕು

-ಶೀಲವಂತ ಹಣಗಿ ಮೇದಿನಾಪುರ ಗ್ರಾಮಸ್ಧ

ಯಲಗಟ್ಟಾ ಗ್ರಾಮದ ಜನರು ನೀರಿಗಾಗಿ ನಿತ್ಯ ಪರದಾಡುತ್ತಿದ್ದು ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು

- ಅಣ್ಣರಾಯ ಯಲಗಟ್ಟಾ ಗ್ರಾಮಸ್ಧ

ಯಲಗಟ್ಟಾ ಗ್ರಾಮದಲ್ಲಿ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲು ಹಳ್ಳದಲ್ಲಿ ಬಾವಿ ತೋಡಿ ನೀರು ಪೂರೈಕೆ ಮಾಡಲಾಗುತ್ತಿದೆ

-ನಜೀರ್‌ಸಾಬ್‌ ರೋಡಲಬಂಡ (ತವಗ) ಗ್ರಾ. ಪಂ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.