ADVERTISEMENT

ವಿಪರೀತ ದೂಳಿನಿಂದ ಬೇಸತ್ತ ಜನರು

ಕವಿತಾಳದಲ್ಲಿ ಹದಗೆಟ್ಟ ರಾಜ್ಯ ಹೆದ್ದಾರಿ, ಸಂಚಾರಕ್ಕೆ ತೊಡಕು

ಪ್ರಜಾವಾಣಿ ವಿಶೇಷ
Published 20 ಅಕ್ಟೋಬರ್ 2023, 5:09 IST
Last Updated 20 ಅಕ್ಟೋಬರ್ 2023, 5:09 IST
ಕವಿತಾಳದಲ್ಲಿ ರಾಜ್ಯ ಹೆದ್ದಾರಿ ಹದಗೆಟ್ಟಿದ್ದು ವಾಹನ ಸಂಚಾರದಿಂದ ಧೂಳು ಹರಡುತ್ತಿದೆ.
ಕವಿತಾಳದಲ್ಲಿ ರಾಜ್ಯ ಹೆದ್ದಾರಿ ಹದಗೆಟ್ಟಿದ್ದು ವಾಹನ ಸಂಚಾರದಿಂದ ಧೂಳು ಹರಡುತ್ತಿದೆ.   

–ಮಂಜುನಾಥ ಎನ್ ಬಳ್ಳಾರಿ

ಕವಿತಾಳ: ಪಟ್ಟಣದಲ್ಲಿ ರಾಯಚೂರು–ಲಿಂಗಸುಗೂರು ರಾಜ್ಯ ಹೆದ್ದಾರಿ ಬಹುತೇಕ ಹದಗೆಟ್ಟಿದ್ದು ದೂಳು ಹೆಚ್ಚಿದ ಪರಿಣಾಮ ಸಾರ್ವಜನಿಕರು ಮತ್ತು ವಾಹನ ಸವಾರರು ಪರದಾಡುವಂತಾಗಿದೆ.

ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ರಸ್ತೆ ವಿಸ್ತರಿಸದೇ ಇಲ್ಲಿನ ಹೊಸ ಬಸ್ ನಿಲ್ದಾಣ ದಿಂದ ಬಾಲಕರ ವಸತಿ ನಿಲಯದವರೆಗೆ ವಿಭಜಕ ನಿರ್ಮಾಣ ಮಾಡಲಾಗಿದೆ. ಇದರ ಪರಿಣಾಮ ರಸ್ತೆ ಕಿರಿದಾಗಿ ವಾಹನಗಳು ರಸ್ತೆ ಬಿಟ್ಟು ಸಂಚರಿಸುತ್ತಿವೆ. ಡಾಂಬಾರು ರಸ್ತೆ ಹೊರತುಪಡಿಸಿ ಎರಡೂ ಬದಿ ಮಣ್ಣು ಸಂಗ್ರಹವಾಗಿದ್ದು, ವಾಹನ ಸಂಚಾರದಿಂದ ವಿಪರೀತ ದೂಳು ಹರಡುತ್ತಿದೆ.

ADVERTISEMENT

ಕಲ್ಮಠ ಕ್ರಾಸ್‌ನಿಂದ ಮಸ್ಕಿ ಕ್ರಾಸ್‌ವರೆಗೆ ರಸ್ತೆಯಲ್ಲಿ ತಗ್ಗುಗಳು ಬಿದ್ದು ವಾಹನ ಸವಾರರು ವಿಶೇಷವಾಗಿ ಬೈಕ್‍ ಸವಾರರು ಆಯತಪ್ಪಿ ಬೀಳುತ್ತಿದ್ದಾರೆ. ವಿಭಜಕ ಕಾಮಗಾರಿಯೂ ಅಪೂರ್ಣವಾಗಿದ್ದು ಸೇತುವೆಗಳ ನಿರ್ಮಾಣ ಮತ್ತು ವಿದ್ಯುತ್‍ ಕಂಬಗಳ ಅಳವಡಿಕೆ ನೆನೆಗುದಿಗೆ ಬಿದ್ದಿದೆ.

‘13 ವರ್ಷಗಳ ಹಿಂದೆ ರಸ್ತೆ ವಿಸ್ತರಣೆ ನೆಪದಲ್ಲಿ ಕಟ್ಟಡಗಳನ್ನು ತೆರವುಗೊಳಿಸಿದ್ದರೂ ಇದುವರೆಗೂ ರಸ್ತೆ ವಿಸ್ತರಿಸಿಲ್ಲ ಮತ್ತು ವಿದ್ಯುತ್‍ ಕಂಬಗಳ ಸ್ಥಳಾಂತರ ಮಾಡಿಲ್ಲ. ಇದೀಗ ಅರೆ ಬರೆ ವಿಭಜಕ ನಿರ್ಮಾಣ ಮಾಡಿ ವಾಹನ ಸಂಚಾರಕ್ಕೆ ಸಂಚಕಾರ ತಂದಿದ್ದಾರೆ’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ವಿಪರೀತ ಧೂಳು ಹರಡುತ್ತಿದ್ದು ಅಂಗಡಿಯಲ್ಲಿನ ವಸ್ತುಗಳು ಧೂಳಿನಿಂದ ಹಾಳಾಗುತ್ತಿವೆ, ಅಂಗಡಿ ಎದುರು ವಾಹನಗಳ ನಿಲುಗಡೆಯಿಂದ ಗ್ರಾಹಕರು ಆಗಮಿಸಲು ತೊಂದರೆಯಾಗಿದೆ. ರಸ್ತೆ ವಿಸ್ತರಿಸಬೇಕು ಮತ್ತು ಟಂ,ಟಂ, ಜೀಪ್‍ ಮತ್ತಿತರ ಖಾಸಗಿ ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಬೇಕು’ ಎಂದು ವರ್ತಕರಾದ ಲಕ್ಷ್ಮೀಕಾಂತ ಇಲ್ಲೂರು, ರಾಘವೇಂದ್ರ, ಶಿವಕುಮಾರ ಒತ್ತಾಯಿಸಿದರು.

‘ಬೇಸಿಗೆ ಮುಂಚೆಯೇ ಇಷ್ಟೊಂದು ದೂಳು ಕಾಣಿಸುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ರಸ್ತೆ ದುರಸ್ತಿ ಮಾಡುವವರೆಗೆ ನೀರು ಸಿಂಪಡಣೆ ಮಾಡಿ ದೂಳು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಸಂಘಟನೆ ಮುಖಂಡ ಎಂ.ಡಿ.ಮೆಹಬೂಬ್ ಆಗ್ರಹಿಸಿದರು.

ವಿಭಜಕ ನಿರ್ಮಾಣ ಕಾಮಗಾರಿ ಗುತ್ತಿಗೆದಾರರಿಗೆ ನೋಟಿಸ್‌ ನೀಡಲಾಗಿದೆ. ಕಂಬಗಳ ತೆರವು ಹಾಗೂ ರಸ್ತೆ ವಿಸ್ತರಣೆ ಬಗ್ಗೆ ಸಚಿವ ಎನ್.ಎಸ್.ಬೋಸರಾಜು ಅವರ ಸೂಚನೆ ಮೇರೆಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

–ರಾಜಕುಮಾರ ಎಇಇ ಲೊಕೋಪಯೋಗಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.